ಬೆಂಗಳೂರು:
ಆಸ್ಟ್ರೇಲಿಯಾದ ಸಿಡ್ನಿ ಮತ್ತು ಬ್ರಿಸ್ಬೇನ್ ನಗರದಲ್ಲಿ ಮುಂಬರುವ ನ.16, 17ರಂದು ಎರಡು ದಿನ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಆಯೋಜಿಸಲಾಗಿದೆ. ಸಮಾರಂಭದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾಡಿನ ಹಿರಿಯ ಕಲಾವಿದರಿಗೆ ಆಹ್ವಾನ ನೀಡಲಾಗಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, 2004ರಿಂದ ವಿಶ್ವದ ವಿವಿಧ ನಗರಗಳಲ್ಲಿ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸುತ್ತಾ ಬರಲಾಗಿದೆ. 2017ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಸಮ್ಮೇಳನ ನಡೆಸಿದ್ದು, 18ನೇ ಸಮ್ಮೇಳನವನ್ನು ಈ ಬಾರಿ ಎರಡು ನಗರಗಳಲ್ಲಿ ಆಚರಿಸುವ ಮೂಲಕ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಕನ್ನಡಿಗಾಸ್, ಆಸ್ಟ್ರೇಲಿಯಾ ಕನ್ನಡ ಒಕ್ಕೂಟ, ಹೃದಯವಾಹಿನಿ ಮಂಗಳೂರು ಹಾಗೂ ಮಂಜುನಾಥ್ ಎಜಿಕೇಷನ್ ಟ್ರಸ್ಟ್ ವತಿಯಿಂದ ಸಮ್ಮೇಳನವನ್ನು ಸಂಘಟಿಸಲಾಗಿದೆ ಎಂದರು.
ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಏರ್ಪಡಿಸಲಾಗಿದೆ. ಭರತನಾಟ್ಯ, ಜಾನಪದ ನೃತ್ಯ, ಯಕ್ಷಗಾನ ಇತ್ಯಾದಿ ಕಲಾ ಪ್ರಕಾರಗಳಲ್ಲಿ ಹಿರಿಯ ಕಲಾವಿದರಿಂದ ಕನ್ನಡ ಸಂಸ್ಕೃತಿ ಬಿಂಬಿಸುವ ಯತ್ನ ಮಾಡಲಾಗಿದೆ. ಸಮ್ಮೇಳನಕ್ಕೆ ಆಗಮಿಸಲಿರುವ ಕಲಾವಿದರ ಖರ್ಚು-ವೆಚ್ಚ ಭರಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಆಗಸ್ಟ್ ಮೊದಲ ವಾರದಲ್ಲಿ ಅಂತಿಮ ಗೊಳಿಸಲಾಗುತ್ತದೆ. ಹಿರಿಯ ಹಾಗೂ ಅರ್ಹ ಸಾಹಿತಿಗಳ ಹೆಸರನ್ನು ಕನ್ನಡಿಗರು ಸೂಚಿಸಬಹುದಾಗಿದೆ. ಸಮ್ಮೇಳನಕ್ಕೆ 3 ಕೋಟಿ ರೂ. ವೆಚ್ಚವಾಗಲಿದ್ದು, ಸರ್ಕಾರದಿಂದ ಅನುದಾನ ಪಡೆಯುವ ಯತ್ನ ನಡೆದಿದೆ ಎಂದು ಮಂಜುನಾಥ್ ಸಾಗರ್ ವಿವರಿಸಿದರು.
ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಕನ್ನಡಿಗಾಸ್ ಅಧ್ಯಕ್ಷ ಪ್ರೀತಂ ಕೃಷ್ಣ ಮಾತನಾಡಿ, ಸಮ್ಮೇಳನವನ್ನು ಸಿಡ್ನಿಯ ಬೋಮ್ಯಾನ್ ಹಾಲ್ ಹಾಗೂ ಬ್ರಿಸ್ಬೇನ್‌ನ ಕಾರ್ಪರೂ ಸೆಕೆಂಡರಿ ಕಾಲೇಜ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಗುತ್ತದೆ. ಎರಡೂ ದಿನ 3,000ಕ್ಕೂ ಹೆಚ್ಚು ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಿಂದ ಆಗಮಿಸುವ ಕಲಾವಿದರು ಒಳಗೊಂಡಂತೆ ಗಣ್ಯರಿಗೆ ಸ್ಥಳೀಯ ಕನ್ನಡ ಸಂಘಟನೆಗಳು ಆತಿಥ್ಯ ನೀಡಲಿವೆ ಎಂದರು.ಇದೇ ವೇಳೆ ಸಮ್ಮೇಳನದ ಲೋಗೋವನ್ನು ಸಮಿತಿಯ ಪದಾಧಿಕಾರಿಗಳು ಲೋಕಾರ್ಪಣೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಪದಾಧಿಕಾರಿಗಳಾದ ಪ್ರೊ. ಎಂ.ಬಿ.ಕುದರಿ, ಗೋ.ನಾ. ಸ್ವಾಮಿ, ನಾಗರಾಜ್ ಹಾಜರಿದ್ದರು.