ನವದೆಹಲಿ:
ಮತದಾನದ ವೇಳೆ ಇವಿಎಂ ಜತೆಗೆ ಇಡಲಾಗುವ ವಿವಿಪ್ಯಾಟ್ಗಳ ಮತಗಳನ್ನೂ 100 ಪ್ರತಿಶತ ಎಣಿಕೆ ಮಾಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ವಿವರ ಕೇಳಿ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಮತದಾನದಲ್ಲಿ ಎಲ್ಲಾ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಪೇಪರ್ ಸ್ಲಿಪ್ಗಳನ್ನು ಎಣಿಕೆ ಮಾಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಆದೇಶವನ್ನು ಪ್ರಕಟಿಸುವಾಗ ನ್ಯಾಯಪೀಠವು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿದ ಮತ್ತೊಂದು ಅರ್ಜಿಯನ್ನೂ ಪರಿಗಣಿಸಿದೆ.
ಈ ಹಿಂದೆ ಎಡಿಆರ್ ಸಲ್ಲಿಸಿದ ಇದೇ ರೀತಿಯ ಅರ್ಜಿಗೆ ಉತ್ತರ ನೀಡಿದ್ದ ಚುನಾವಣಾ ಆಯೋಗವು ಎಲ್ಲಾ ವಿವಿಪ್ಯಾಟ್ಗಳನ್ನು ಪರಿಶೀಲಿಸುವಲ್ಲಿ ಪ್ರಾಯೋಗಿಕ ತೊಂದರೆಗಳನ್ನು ಉಲ್ಲೇಖಿಸಿತ್ತು. ಈ ವಿಷಯವನ್ನು ಆಲಿಸಿದ ನ್ಯಾಯಪೀಠವು 100% ವಿವಿಪ್ಯಾಟ್ ಪರಿಶೀಲನೆಯ ಬೇಡಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಗಮನಾರ್ಹ ಪ್ರಯೋಜನವಿಲ್ಲದೆ ಚುನಾವಣಾ ಆಯೋಗದ ಹೊರೆ ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.
ಏಪ್ರಿಲ್ 8, 2019 ರಂದು ಸುಪ್ರೀಂ ಕೋರ್ಟ್, ಲೋಕಸಭಾ ಕ್ಷೇತ್ರಕ್ಕೆ ವಿವಿಪ್ಯಾಟ್ ಭೌತಿಕ ಪರಿಶೀಲನೆಗೆ ಒಳಗಾಗುವ ಇವಿಎಂಗಳ ಸಂಖ್ಯೆಯನ್ನು ಒಂದರಿಂದ ಐದಕ್ಕೆ ಹೆಚ್ಚಿಸುವಂತೆ ಚುನಾವಣಾ ಸಮಿತಿಗೆ ಆದೇಶಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಏಕಕಾಲದಲ್ಲಿ ಪರಿಶೀಲನೆ ನಡೆಸಿದರೆ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಣಿಕೆಗೆ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನಿಯೋಜಿಸಿದರೆ, 5-6 ಗಂಟೆಗಳ ಅವಧಿಯಲ್ಲಿ ಸಂಪೂರ್ಣ ವಿವಿಪ್ಯಾಟ್ ಪರಿಶೀಲನೆಯನ್ನು ಮಾಡಬಹುದು” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ವಕೀಲೆ ನೇಹಾ ರಾಠಿ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. 24 ಲಕ್ಷ ವಿವಿಪ್ಯಾಟ್ಗಳ ಖರೀದಿಗೆ ಸರ್ಕಾರ 5000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆದರೆ ಕೇವಲ 20,000 ವಿವಿಪ್ಯಾಟ್ಗಳ ಸ್ಲಿಪ್ಗಳ ಮಾತ್ರ ಪರಿಶೀಲಿಸಲಾಗಿದೆ ಎಂದು ರಾಠಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಂತೆಯೇ ವಿವಿಪ್ಯಾಟ್ ಮತ್ತು ಇವಿಎಂಗಳಿಗೆ ಸಂಬಂಧಿಸಿದಂತೆ ತಜ್ಞರು ಅನೇಕ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ಹಿಂದೆ ಇವಿಎಂ ಮತ್ತು ವಿವಿಪ್ಯಾಟ್ ಮತ ಎಣಿಕೆಯ ನಡುವೆ ಹೆಚ್ಚಿನ ಸಂಖ್ಯೆಯ ವ್ಯತ್ಯಾಸಗಳು ವರದಿಯಾಗಿವೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ವಿವಿಪ್ಯಾಟ್ ಸ್ಲಿಪ್ಗಳನ್ನು ಎಣಿಕೆ ಮಾಡುವುದು ಉತ್ತಮ. ಮತಪತ್ರದಲ್ಲಿ ಚಲಾವಣೆಯಾದ ಮತವನ್ನು ಸಹ ಎಣಿಕೆ ಮಾಡಲಾಗಿದೆಯೇ ಎಂದು ಸರಿಯಾಗಿ ಪರಿಶೀಲಿಸಲು ಮತದಾರರಿಗೆ ಅವಕಾಶ ನೀಡುವುದು ಕಡ್ಡಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದು ಮೊದಲ ಹೆಜ್ಜೆ ಎಂದು ಕರೆದಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಚುನಾವಣೆ ಪ್ರಾರಂಭವಾಗುವ ಮೊದಲು ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ‘ಸುಪ್ರಿಂ ಕೋರ್ಟ್ ನೋಟಿಸ್ ಒಂದು ಪ್ರಮುಖ ಹೆಜ್ಜೆಯಾಗಿದೆ. ಆದರೆ ಅದು ಅರ್ಥಪೂರ್ಣವಾಗಬೇಕಾದರೆ, ಚುನಾವಣೆ ಪ್ರಾರಂಭವಾಗುವ ಮೊದಲು ಈ ವಿಷಯ ತಾರ್ಕಿಕ ಅಂತ್ಯ ಕಾಣಬೇಕು.
ಇವಿಎಂಗಳ ಬಗ್ಗೆ ಸಾರ್ವಜನಿಕರ ವಿಶ್ವಾಸ ಹೆಚ್ಚಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಶೇಕಡಾ 100ರಷ್ಟು ವಿವಿಪ್ಯಾಟ್ಗಳ ಎಣಿಕೆ ಮಾಡುವಂತೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರ ನಿಯೋಗವನ್ನು ಭೇಟಿ ಮಾಡಲು ಚುನಾವಣಾ ಆಯೋಗ ನಿರಾಕರಿಸಿದ ಹಿನ್ನೆಲೆಯಲ್ಲಿ ಇದೊಂದು ಅಮೋಘ ಹೆಜ್ಜೆ’ ಎಂದು ಜೈರಾಮ್ ರಮೇಶ್ ಬರೆದಿದ್ದಾರೆ