ಮುಂಬೈ:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಇದೀಗ ಗಣ್ಯರ ದಂಡೇ ಮುಂಬೈನತ್ತ ಪ್ರಯಾಣ ಬೆಳೆಸಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಲು ನಟ ರಜನಿಕಾಂತ್ ಮಂಗಳವಾರ ಚೆನ್ನೈ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದರು.
‘ನಾನು ಪಂದ್ಯವನ್ನು ನೋಡಲು ಹೋಗುತ್ತಿದ್ದೇನೆ’ ಎಂದು ರಜನಿಕಾಂತ್ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಉತ್ತರಿಸಿದರು. ನಟ ಈಗಾಗಲೇ ಮುಂಬೈ ತಲುಪಿದ್ದಾರೆ.ಟೈಮ್ಸ್ ನೌ ವರದಿ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ ಗೋಲ್ಡನ್ ಪಾಸ್ ನೀಡಿದೆ ಎನ್ನಲಾಗಿದೆ. ನಟ ರಣಬೀರ್ ಕಪೂರ್ ಕೂಡ ಅವರ ಚಿತ್ರ ಅನಿಮಲ್ ಪ್ರಚಾರಕ್ಕಾಗಿ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ತೆರಳಬಹುದು ಎನ್ನುವ ಮಾತುಗಳು ಕೇಳಿಬಂದಿವೆ. ನಟ ಅಮೀರ್ ಖಾನ್ ಕೂಡ ಈ ಪಂದ್ಯ ವೀಕ್ಷಿಸಲು ಹಾಜರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರೊಂದಿಗೆ ಡೇವಿಡ್ ಬೆಕ್‌ಹ್ಯಾಮ್ ಕೂಡ ಪಂದ್ಯ ವೀಕ್ಷಿಸಲಿದ್ದು, ಲೆಜೆಂಡರಿ ಫುಟ್ಬಾಲ್ ಆಟಗಾರ ಮಂಗಳವಾರವೇ ಮುಂಬೈಗೆ ಬಂದಿಳಿದಿದ್ದಾರೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು, 2015 ಮತ್ತು 2019ರ ನಂತರ ಕಿವೀಸ್ ಸತತ ಮೂರನೇ ಬಾರಿಗೆ ವಿಶ್ವಕಪ್ ಫೈನಲ್‌ಗೆ ತಲುಪುವ ಗುರಿಯನ್ನು ಹೊಂದಿದ್ದರೆ, 2013ರಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಭಾರತ ತಂಡ ಈ ಬಾರಿ ಗೆದ್ದೇ ತೀರುವ ತವಕದಲ್ಲಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸದ್ಯ ನಡೆಯುತ್ತಿರುವ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಅದ್ಬುತ ಪ್ರದರ್ಶನವನ್ನು ನೀಡಿದೆ. ಲೀಗ್ ಹಂತದ ಕೊನೆಯ ಪಂದ್ಯವನ್ನು ಜಯಿಸುವ ಮೂಲಕ 18 ಅಂಕಗಳೊಂದಿಗೆ ಏಕದಿನ ವಿಶ್ವಕಪ್ 2023 ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಈ ವಿಶ್ವಕಪ್ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಭಾರತ ತನ್ನ ಗೆಲುವಿನ ಓಟವನ್ನು ಪ್ರಾರಂಭಿಸಿತು. ನಂತರ ಆತಿಥೇಯ ಅಫ್ಘಾನಿಸ್ತಾನ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ ವಿರುದ್ಧ ಭರ್ಜರಿ ಜಯ ಕಂಡಿದೆ.
ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ 160 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರನಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ