ಹಾವೇರಿ ಕಡಕೋಳದಲ್ಲಿ ವಕ್ಫ್ ಗಲಾಟೆ : ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು

ಹಾವೇರಿ

   ಬಿಜಯಪುರ, ಕಲಬುರಗಿ, ಮಂಡ್ಯ ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್​ ನೋಟಿಸ್ ವಿಚಾರ ಇದೀಗ ಹಾವೇರಿ ಜಿಲ್ಲೆಗೂ ಕಾಲಿಟ್ಟಿದೆ. ಆದರೆ, ಹಾವೇರಿಯಲ್ಲಿ ಒಂದು ಹಂತ ಮುಂದಕ್ಕೆ ಹೋಗಿದ್ದು, ಬುಧವಾರ ರಾತ್ರಿ ಕಲ್ಲು ತೂರಾಟ ನಡೆದಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್​ ಬೋರ್ಡ್​​ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ವಾಸವಿದ್ದ ಮನೆಗಳನ್ನು ಖಾಲಿ‌ ಮಾಡಿಸಬಹುದು ಎಂಬ ಭೀತಿಯಿಂದ ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ‌ ಕಲ್ಲು ತೂರಾಟ ನಡೆಸಿದೆ.

 
   ಗಲಾಟೆ ಬಗ್ಗೆ ಕಡಕೋಳ ಗ್ರಾಮದಲ್ಲಿ ಹಾವೇರಿ ಎಸ್​ಪಿ ಅಂಶು ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಗ್ರಾಮದ ಕೆಲವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ನಮಗೆ ಸಂಜೆ 7.30ಕ್ಕೆ ಮಾಹಿತಿ ಬಂತು. ಕೂಡಲೇ ಸ್ಥಳಕ್ಕೆ ಧಾವಿಸಿದೆವು. ಗಲಾಟೆಯಲ್ಲಿ ಐವರಿಗೆ ಗಾಯಗಳಾಗಿವೆ. ಗಲಾಟೆಗೆ ಸಂಬಂಧಿಸಿದಂತೆ ದೂರು ಕೊಡಲು ಯಾರೂ ಸಿದ್ಧರಿಲ್ಲ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಹಲ್ಲೆಗೊಳಗಾದವರಿಂದಲೂ ಮಾಹಿತಿ ಪಡೆದು ದೂರು ಸ್ವೀಕರಿಸುತ್ತೇವೆ. ಗಲಾಟೆಗೆ ಸಂಬಂಧಿಸಿದಂತೆ 15 ಜನರನ್ನು ವಶಕ್ಕೆ ಪಡೆದಿದ್ದೇವೆ. ಭದ್ರತೆಗೆ 4 ಕೆಎಸ್​ಆರ್​ಪಿ ತುಕಡಿ, 200 ಪೊಲೀಸ್​ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

   ಕಡಕೋಳ ಗ್ರಾಮದಲ್ಲಿ ರೂಟ್​ಮಾರ್ಚ್ ಕೂಡಾ‌ ಮಾಡಲಾಗುತ್ತದೆ. ಗಲಾಟೆಯಲ್ಲಿ ದುಷ್ಕರ್ಮಿಗಳು ಕೆಲವರ ಮನೆಗಳ ಗಾಜು ಒಡೆದಿದ್ದಾರೆ. ಸದ್ಯ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹಲ್ಲೆಗೊಳಗಾದವರಿಗೆ ಎಕ್ಸ್​ರೇ ಮಾಡಿಸುತ್ತೇವೆ ಎಂದು ಎಸ್​ಪಿ ಅಂಶು ಕುಮಾರ್ ಹೇಳಿದ್ದಾರೆ.

   ಗ್ರಾಮದಲ್ಲಿ ಗರಡಿ ಮನೆ ಸಂಬಂಧಿಸಿದಂತೆ ಗೊಂದಲ ಇತ್ತು. ವಕ್ಫ್​ ಆಸ್ತಿ ಸಂಬಂಧಿಸಿದಂತೆ ಜನರು ಪ್ರತಿ ದಿನ ಪತ್ರಿಕೆಗಳಲ್ಲಿ ಓದಿ ಭಯಗೊಂಡಿದ್ದಾರೆ. ವಕ್ಫ್​ ಆಸ್ತಿ ಎಂದು ಹೆಸರು ನಮೂದಿಸುತ್ತಾರೆಂದು ಭಯಗೊಂಡು ಗಲಾಟೆ ಮಾಡಿದ್ದಾರೆ. ಕಡಕೋಳದಲ್ಲಿ ಮೂರು ವಕ್ಫ್​ ಆಸ್ತಿ ಇದೆ ಎಂದು ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಹೇಳಿದ್ದಾರೆ. 

   ವೈಯಕ್ತಿಕವಾಗಿ ಯಾರಿಗೂ ನಾವು ನೋಟಿಸ್ ಕೊಟ್ಟಿರಲಿಲ್ಲ. ಹಿಂದೆ ಇದ್ದ ಪಟ್ಟಿ ಮೇಲೆ ಮುಂದಿನ ಕ್ರಮಕ್ಕೆ ಪತ್ರ ಬರೆದಿದ್ದೆವು. ವಕ್ಫ್​ ಆಸ್ತಿ ಎಂದು ಮನೆ ದಾಖಲೆಗಳಲ್ಲೂ ನಮೂದಿಸುತ್ತಾರೆಂದು ಜನ ಭಯಗೊಂಡಿದ್ದಾರೆ. ಆ ಭಯದಿಂದ ಗಲಾಟೆ ಮಾಡಿದ್ದಾರೆ. ಯಾರಿಗೂ ನೋಟಿಸ್ ಕೊಟ್ಟಿರಲಿಲ್ಲ, ಈಗ ಪರಿಸ್ಥಿತಿ ತಿಳಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link