ಚಿಕ್ಕೋಡಿ
ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದನ್ನು ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೆ ವಕ್ಫ್ ಬೋರ್ಡ್ ವಕ್ರ ದೃಷ್ಟಿ ಬಿಜೆಪಿ ನಾಯಕರ ಮೇಲೆಯೇ ಬಿದ್ದಿದೆ. ಮಾಜಿ ಹಜ್ ಮತ್ತು ವಕ್ಫ್ ಬೋರ್ಡ್ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬಕ್ಕೆ ವಕ್ಫ್ ಬೋರ್ಡ್ ಶಾಕ್ ನೀಡಿದೆ. ಜೊಲ್ಲೆ ದಂಪತಿಯ ಕಿರಿಯ ಪುತ್ರನಿಗೆ ಸೇರಿದ ಜಮೀನಿನ ಪಹಣಿ ಪತ್ರದಲ್ಲಿ “ವಕ್ಫ್ ಆಸ್ತಿ” ಎಂದು ನಮೂದಿಸಲಾಗಿದೆ.
ಶಶಿಕಲಾ ಜೊಲ್ಲೆ ಅವರು ತಾವು ಸಚಿವೆಯಾಗಿದ್ದ ಸಮಯದಲ್ಲೇ ತಮ್ಮ ಪುತ್ರನ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದು ಆಗಿದ್ದು ವಿಪಾರ್ಯಾಸವಾಗಿದೆ. ಅಲ್ಲದೇ, ಇವರ ಅವಧಿಯಲ್ಲಿ ಅನೇಕ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದು ಮಾಡಲಾಗಿದೆ.
ಶಾಸಕಿ ಶಶಿಕಲಾ ಜೊಲ್ಲೆ ಅವರು 2021 ರಿಂದ 2023ವರೆಗೂ ಬಿಜೆಪಿ ಸರ್ಕಾರದಲ್ಲಿ ಹಜ್ ಮತ್ತು ವಕ್ಫ್ ಬೋರ್ಡ್ ಸಚಿವರಾಗಿದ್ದರು. ಇವರ ಅವಧಿಯಲ್ಲಿ, ಅಂದರೆ 2021ರಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕವಲೂರು, ಹೂವಿನಾಳ ಕುಕನೂರು, ಯಲಬುರ್ಗಾ ತಾಲೂಕಿನ ಹಲವು ರೈತರ ಜಮೀನು ಪಹಣಿಯ ಕಾಲಂ 11ರಲ್ಲಿ ವಕ್ಫ್ ಬೋರ್ಡ್ ಅಂತ ಹೆಸರು ನಮೂದಾಗಿದೆ. ಅದು ಕೂಡ ರೈತರಿಗೆ ನೋಟಿಸ್ ನೀಡದೆ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದಾಗಿದೆ. ಬಳಿಕ, ವಕ್ಫ್ ಬೋರ್ಡ್ 2023ರಲ್ಲಿ ಅನೇಕ ರೈತರಿಗೆ ನೋಟಿಸ್ ನೀಡಿದ್ದು, ತಮ್ಮ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದೆ.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಬಿಡುಗಡೆ ಮಾಡಿದ್ದ ದಾಖಲೆಗಳ ಪ್ರಕಾರ, 2023ರಲ್ಲಿ ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಲಾಗಿತ್ತು. ವಿಜಯಪುರ ಜಿಲ್ಲೆಯ, ವಿಜಯಪುರ ತಾಲೂಕಿನ ಮೇಲ್ಭಾಗಾಯತ್ ಹಳ್ಳಿಯ ಅಶೋಕ್, ಗೋವಿಂದ, ಬಿಡನಾಳ ಜಹಮನ್ ಲಹೋರಿ, ಬಸವರಾಜ, ಉಮಾ, ದಯಾನಂದ್ ರೋವತ್ತಪ್ಪ ಎಂಬುವರಿಗೆ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಲಾಗಿತ್ತು.
ಕರ್ನಾಟಕ ಸರ್ಕಾರ ನೀಡಿರುವ ನಿರ್ದೇಶನ ಮೇರೆಗೆ ಕರ್ನಾಟಕ ವಕ್ಫ್ ಬೋರ್ಡ್ 2022ರ ಅಕ್ಟೋಬರ್ 17 ರಂದು ವಿಜಯಪುರದ ಜಿಲ್ಲೆಯ ರೈತರಿಗೆ ನೋಟಿಸ್ ನೀಡಿದೆ. “ರೈತರು ತಮ್ಮ ಜಮೀನಿನ ದಾಖಲೆಗಳ ಸಮೇತ 2022ರ ಅಕ್ಟೋಬರ್ 30 ರಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಂದೆ ಹಾಜರಾಗಬೇಕು. ಗೈರು ಹಾಜರಾದರೂ ವಿಚಾರಣೆ ಮುಂದುವರೆಯಲಿದ್ದು ಮತ್ತು ಆದೇಶ ಹೊರಡಿಸಲಾಗುತ್ತದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ”.
