ಬೆಂಗಳೂರು
ಕರ್ನಾಟಕದ ಮಹದಾಯಿ ಕುಡಿಯುವ ನೀರು ಯೋಜನೆಗೆ ಗೋವಾ ವಿರೋಧ ವ್ಯಕ್ತಪಡಿಸುತ್ತಿದೆ. ಈಗ ಗೋವಾ-ತಮ್ನಾರ್ ಟ್ರಾನ್ಸ್‌ಮಿಷನ್ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಈ ಮೂಲಕ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಮರಗಳಿಗೆ ಕೊಡಲಿ ಹಾಕುವುದು ತಪ್ಪಲಿದೆ.
ಗೋವಾ ರಾಜ್ಯದ ದಕ್ಷಿಣ ಭಾಗಕ್ಕೆ ಛತ್ತೀಸ್‌ಗಢ ರಾಜ್ಯದ ತಮ್ನಾರ್ ಮೂಲಕ ವಿದ್ಯುತ್ ತರುವ ಯೋಜನೆ ಇದಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟದ ಮೂಲಕ ಈ ವಿದ್ಯುತ್ ಲೈನ್ ಹಾದು ಹೋಗಬೇಕಿತ್ತು. ಈ ಯೋಜನೆಗೆ ಒಪ್ಪಿಗೆ ನೀಡಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಈ ಜಿಟಿಟಿಪಿಎಲ್ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಅಲ್ಲದೇ ಈ ಯೋಜನೆಗೆ ಶಿಫಾರಸು ಮಾಡಿದ ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಗೋವಾ ರಾಜ್ಯಕ್ಕೆ ವಿದ್ಯುತ್ ಒದಗಿಸುವ ಈ ಯೋಜನೆ ಕರ್ನಾಟಕದ ಉತ್ತರ ಕನ್ನಡ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಮೂಲಕ ಸಾಗುತ್ತದೆ. ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾದು ಹೋಗುವ ವಿದ್ಯುತ್ ಲೈನ್‌ನಿಂದಾಗಿ 72,000 ಮರಗಳನ್ನು ಕಡಿಯಬೇಕಿತ್ತು.
ಮಹದಾಯಿ ಕುಡಿಯುವ ನೀರಿನ ಯೋಜನೆಯಿಂದ ಅರಣ್ಯ ನಾಶವಾಗುತ್ತದೆ ಎಂದು ಯೋಜನೆಗೆ ಕ್ಯಾತೆ ತೆಗೆದಿರುವ ಗೋವಾ ರಾಜ್ಯ ನಮ್ಮ ಪಶ್ಚಿಮ ಘಟ್ಟದಲ್ಲಿ ಮರಗಳನ್ನು ಕಡಿದು ವಿದ್ಯುತ್ ಲೈನ್ ತೆಗೆದುಕೊಂಡು ಹೋಗಲು ಮುಂದಾಗಿತ್ತು. ಅರಣ್ಯ ನಾಶದ ಹಿನ್ನಲೆಯಲ್ಲಿ ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿತ್ತು.
ಈ ಯೋಜನೆಯಿಂದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಸುಮಾರು 174 ಹೆಕ್ಟೇರ್ ಅರಣ್ಯ ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ದಟ್ಟ ಕಾಡಿನ ನಡುವೆಯೇ ವಿದ್ಯುತ್ ಲೈನ್ ತೆಗೆದುಕೊಂಡು ಹೋಗಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಕರ್ನಾಟಕದ ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿ, ಆನೆ, ಕಪ್ಪು ಚಿರತೆ, ಕರಡಿ ಸೇರಿದಂತೆ ಅಪರೂಪದ ಪ್ರಾಣಿ, ಪಕ್ಷಿಗಳಿವೆ. ಈ ಪ್ರದೇಶದಲ್ಲಿ ಅರಣ್ಯ ನಾಶ ಮಾಡಿ ವಿದ್ಯುತ್ ಲೈನ್ ತೆಗೆದುಕೊಂಡು ಹೋದರೆ ಪ್ರಾಣಿ, ಪಕ್ಷಿಗಳಿಗೆ ಅಪಾಯವಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದರು.
ಈ ಯೋಜನೆಗೆ ಕರ್ನಾಟಕ ಮಾತ್ರವಲ್ಲ ಗೋವಾದಲ್ಲಿಯೂ ವಿರೋಧ ವ್ಯಕ್ತವಾಗಿತ್ತು. ಗೋವಾ-ತಮ್ನಾರ್ ಟ್ರಾನ್ಸ್‌ಮಿಷನ್ ಯೋಜನೆಯನ್ನು ಪಶ್ಚಿಮ ಘಟ್ಟದ ಮೂಲಕ ಅನುಷ್ಠಾನಗೊಳಿಸುವುದನ್ನು ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಸಹ ಅರ್ಜಿ ಸಲ್ಲಿಕೆಯಾಗಿದೆ.
ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆಯ ಪರಿಷ್ಕೃತ ವರದಿ ತಯಾರು ಮಾಡಿದ್ದಾರೆ. ಧಾರವಾಡ, ಹಳಿಯಾಳ, ದಾಂಡೇಲಿ ಮೂಲಕ ಯೋಜನೆ ಶಿಫಾರಸು ಮಾಡಲಾಗಿದೆ. ಬೆಳಗಾವಿಯನ್ನು ಯೋಜನೆಯಿಂದ ಕೈ ಬಿಡಲಾಗಿದೆ. ಈ ಕುರಿತು ಶಿಫಾರಸು ಸಹ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು.
ಈ ಯೋಜನೆ ಗೋವಾದ ಮೊಲ್ಲೆಮ್ ವನ್ಯಜೀವಿ ಅಭಯಾರಣ್ಯದ ಮೂಲಕ ಹಾದುಹೋಗುತ್ತದೆ. ಯೋಜನೆಗೆ ಗೋವಾದ ಎಸ್‌ಬಿಡಬ್ಲ್ಯುಎಲ್ ತನ್ನ ತಾತ್ವಿಕ ಅನುಮೋದನೆಯನ್ನು ನೀಡಿದ್ದನ್ನು ಸಹ ಪರಿಸರವಾದಿಗಳು ಟೀಕಿಸಿದ್ದರು. ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ ಯೋಜನೆಯ ಮೂಲಕ ಗೋವಾದ 1,192 ಮೆಗಾವ್ಯಾಟ್‌ನ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೋವಾ ಸರ್ಕಾರ ಹೇಳಿತ್ತು.