ಬೆಂಗಳೂರು:
ಮೂವರು ಐಟಿ ಅಧಿಕಾರಿಗಳಿಂದ ಮನೆಯಲ್ಲಿ ಮಹಜರು ಪ್ರಕ್ರಿಯೆ ಮುಂದುವರೆದಿದ್ದು, 38 ಗಂಟೆಗಳಿಂದ ನಿರಂತರ ಕಾರ್ಯಚರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ಲಾಕರ್‌ನಲ್ಲಿ ಎರಡು ಸೂಟ್ ಕೇಸ್ ಪತ್ತೆಯಾಗಿತ್ತು. ಇದರಲ್ಲಿ ಆಸ್ತಿ ಪಾಸ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳು ಕಂಡು ಬಂದಿತ್ತು. ಚಿನ್ನಾಭರಣ, ಆಸ್ತಿ ಪತ್ರಗಳು, ನಗದು ಹಣ ಸೇರಿ ಎಲ್ಲವನ್ನೂ ಕ್ರೋಢೀಕರಿಸಿ ಅಧಿಕಾರಿಗಳು ಲೆಕ್ಕ ಹಾಕುತ್ತಿದ್ದು, ಎಲ್ಲಾ ಪ್ರಾಪರ್ಟಿಗಳನ್ನು ಲೆಕ್ಕ ಹಾಕಿ ಐಟಿ ಅಧಿಕಾರಿಗಳು ಜಪ್ತಿ ಮಾಡಲಿದ್ದಾರೆ.
ಪತ್ತೆಯಾದ ಬಹುಕೋಟಿ ಹಣದ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಕಲೆ ಹಾಕೋದೇ ಸವಾಲಾಗಿ ಪರಿಣಮಿಸಿದ್ದು, ಹಣದ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಗುತ್ತಿಲ್ಲ. ಎಷ್ಟೇ ಪ್ರಶ್ನೆ ಕೇಳಿದರೂ ಅಂಬಿಕಾಪತಿ ಹಣದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಮನೆಯಲ್ಲಿ ಸಿಕ್ಕಿರುವ ಎಲ್ಲಾ ಚಿನ್ನಾಭರಣದ ಮೌಲ್ಯಮಾಪನದ ಜೊತೆಗೆ ಅಂಬಿಕಾಪತಿ ಸಂಬಂಧಿಯ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಒಂದು ಕಡೆ ಮಾನ್ಯತಾ ಟೆಕ್ ಪಾರ್ಕ್ ನ ಅಂಬಿಕಾಪತಿ ಮನೆಯಲ್ಲಿ ಪಿತೃಪಕ್ಷವನ್ನು ಆಚರಣೆ ಮಾಡಲಾಗ್ತಿದ್ದು, ಅದರ ಮಧ್ಯೆಯೂ ಐಟಿ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಮನೆಯಲ್ಲೆ ಇರುವ ಅಂಬಿಕಾಪತಿ ಮತ್ತು ಅಶ್ವಥಮ್ಮ ದಂಪತಿ ಪಿತೃಪಕ್ಷ ಆಚರಣೆಗೆ ತಯಾರಿ ನಡೆಸಿದ್ದು, ಆ ಮಧ್ಯೆಯೂ ಐವರು ಅಧಿಕಾರಿಗಳು ವಶಕ್ಕೆ ಪಡೆದಿರುವ ಪ್ರಾಪರ್ಟಿ ದಾಖಲೆಗಳನ್ನು ಮಹಜರು ಮಾಡಿದ್ದಾರೆ.
ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ಗಂಡ ಅಂಬಿಕಾಪತಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನಾಗಿದ್ದು, ಅಶ್ವಥಮ್ಮ ಅವರ ಸಂಬಂಧಿಯೊಬ್ಬರಿಗೆ ಸೇರಿದ ಪ್ಲಾಟ್‌ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಬಾಕ್ಸ್‌ನಲ್ಲಿ ತುಂಬಿಸಿಟ್ಟಿದ್ದ ಕಂತೆ ಕಂತೆ ಹಣದಲ್ಲಿ ಸುಮಾರು 42 ಕೋಟಿಗೂ ಅಧಿಕ ಹಣ ಪತ್ತೆಯಾಗಿದ್ದು, ಈ ಹಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ.