ಬೆಂಗಳೂರು:
ಕುಡಿದ ಅಮಲಿನಲ್ಲಿ ಕರ್ನಾಟಕ ಮತ್ತು ಕನ್ನಡ ಮಾತನಾಡುವ ಜನರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಜುಲೈ 17 ರಂದು ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಡೆಲಿವರಿ ಎಕ್ಸಿಕ್ಯೂಟಿವ್ ರಂಜಿತ್ ಮ್ಯಾಥ್ಯೂ ಅವರು ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ಮಾಡಿದ್ದ ಟಿ-ಶರ್ಟ್ ತಲುಪಿಸಲು ವಿಳಾಸ ದೃಢೀಕರಣಕ್ಕಾಗಿ ಪಶ್ಚಿಮ ಬಂಗಾಳದ ಮಿಥುನ್ ಸರ್ಕಾರ್ ಎಂಬ ಗ್ರಾಹಕನಿಗೆ ಕರೆ ಮಾಡಿದ್ದಾರೆ.
ಈ ವೇಳೆ ವಿನಾಕಾರಣ ಕನ್ನಡದ ವಿಚಾರವಾಗಿ ಮಾತು ಆರಂಭಿಸಿದ್ದ ಮಿಥುನ್, “ನಾವು ಶೇ.70ರಷ್ಟು ಹಿಂದಿಯವರು ಕರ್ನಾಟಕದಲ್ಲಿದ್ದೇವೆ. ನಿಮ್ಮದು ಅತಿಯಾಗಿದೆ. ನಾವು ಇಲ್ಲಿಂದ ಹೋದರೆ ನೀವು ಕನ್ನಡದವರಿಗೆ ಟೊಮೆಟೋ ಖರೀದಿಸುವುದಕ್ಕೂ 10 ರೂಪಾಯಿ ಇರುವುದಿಲ್ಲ. ನಾವು ಬೆಂಗಾಳಿಗಳು ಮಾಡುವ ಊಟವನ್ನು ನೀವು ಕನ್ನಡಿಗರು ಕಲ್ಪಿಸಿಕೊಳ್ಳಲೂ ಸಹ ಆಗುವುದಿಲ್ಲ. ನೀವು ರಾಗಿ ಮುದ್ದೆ, ಇಡ್ಲಿ, ದೋಸೆ, ವಾರದಲ್ಲೊಮ್ಮೆ ಚಿಕನ್ ತಿನ್ನುತ್ತೀರಿ ಅಷ್ಟೇ. ನನ್ನ ಕಾಲ್ ರೆಕಾರ್ಡ್ ಮಾಡಿಕೋ, ನನ್ನ ಫೋನ್ ನಂಬರ್ ತೆಗೆದುಕೋ, ಬೇಗೂರು ನನ್ನ ವಿಳಾಸ, ನೀನು ಬಂದು ಭೇಟಿಯಾಗಿ ನಾನು ಬುಕ್ ಮಾಡಿರುವ ಆರ್ಡರ್ ಕೊಟ್ಟು ಹೋಗು” ಎಂದು ಧಮ್ಕಿ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತ ಆಡಿಯೋ ತುಣುಕು ಹಾಗೂ ಆರೋಪಿಯ ವಿಳಾಸಸಹಿತ ಡೆಲಿವರಿ ಎಕ್ಸಿಕ್ಯೂಟಿವ್ ದೂರು ನೀಡಿದ್ದು, ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯ ಫೋನ್ ನಂಬರ್ ಆಧರಿಸಿ ಪತ್ತೆ ಹಚ್ಚಿ ಗುರುವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ತ್ರಿಪುರದವರಾದ ಮಿಥುನ್ ಸರ್ಕಾರ್ ಕಳೆದ ಒಂಬತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಘಟನೆಯ ಸಮಯದಲ್ಲಿ ತಾನು ಮದ್ಯದ ಅಮಲಿನಲ್ಲಿದ್ದೆ ಎಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.