ನಮ್ಮ ವಾಗ್ದಾನ ಉಳಿಸಿಕೊಳ್ಳುತ್ತೇವೆ : ಖರ್ಗೆ

ಬೆಂಗಳೂರು:

    ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ವಾಗ್ದಾನ ನೀಡಿದ್ದು, ಅದನ್ನು ಮಾಡಲಿದ್ದೇವೆ. ಇದರ ಜತೆಗೆ ನಾವು ನೀಡಿರುವ ಇತರೆ ಭರವಸೆಗಳನ್ನು ಜಾರಿ ಮಾಡುತ್ತೇವೆ. ಕಳೆದ ಬಾರಿಯ ಸರ್ಕಾರ ಇದ್ದಾಗಲೂ ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ನಾವು ಬಿಜೆಪಿಯವರ ರೀತಿ ಹೇಳುವುದೊಂದು ಮಾಡುವುದು ಮತ್ತೊಂದು ರೀತಿ ಆಡಳಿತ ಮಾಡುವುದಿಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ.

    ಪ್ರಧಾನಿ ಮೋದಿ ಅವರು ಈಗ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಅವರು ಜಪಾನ್ ಗೆ ತೆರಳಿದಾಗಲೆಲ್ಲಾ ನೋಟು ರದ್ದು ತೀರ್ಮಾನ ಪ್ರಕಟಿಸುತ್ತಾರೆ. ಕಳೆದ ಬಾರಿ ಜಪಾನ್ ಗೆ ತೆರಳಿದಾಗ ಒಂದು ಸಾವಿರ ರೂ. ಮುಖಬೆಲೆ ನೋಟು ರದ್ದು ಮಾಡಿದ್ದರು. ಈ ಬಾರಿ 2 ಸಾವಿರ ಮುಖಬೆಲೆಯ ನೋಟು ರದ್ದು ಮಾಡಿದ್ದಾರೆ. ಇದರರ್ಥ ಇದರಿಂದ ದೇಶಕ್ಕೆ ಲಾಭವೋ, ನಷ್ಟವೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವುದಿಲ್ಲ. ಮೋದಿ ಅವರ ಈ ಕೆಲಸ ದೇಶದ ಜನರಿಗೆ ತೊಂದರೆ ಆಗುತ್ತಿದೆ.

     ನಮ್ಮ ಸರ್ಕಾರ ರಾಜ್ಯದಲ್ಲಿ ದ್ವೇಷವನ್ನು ಕಿತ್ತೊಗೆದು, ಪ್ರೀತಿ, ಸೌಹಾರ್ದತೆ, ಸಾಮರಸ್ಯದ ಸರ್ಕಾರವಾಗಿದೆ. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಭರವಸೆ ಈಡೇರಿಸುತ್ತೇವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ

     ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ಜಯ ರಾಜ್ಯದ ಜನರಿಗೆ ಸಿಕ್ಕಿರುವ ಗೆಲುವು. ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಪ್ರಚಾರ ಆರಂಭವಾಗಿದ್ದು, ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಮೂಲಕ. ಇದರ ಜತೆಗೆ ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕಾ ಗಾಂಧಿ ಹಾಗೂ ಅನೇಕ ನಾಯಕರು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದು ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಇದರ ಜತೆಗೆ ಸಾಹಿತಿಗಳು, ಚಿಂತಕರು, ಸಂಘಟನೆ ನಾಯಕರುಗಳು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದು, ಧನ್ಯವಾದ ಅರ್ಪಿಸುತ್ತೇನೆ. ರಾಜ್ಯದ ಯುವಕರು, ರೈತರು, ಕಾರ್ಮಿಕರು, ಮಹಿಳೆಯರಿಗೂ ಧನ್ಯವಾದ ತಿಳಿಸುತ್ತೇನೆ.

     ಈ ಕಾರ್ಯಕ್ರಮಕ್ಕೆ ಬಂದು ನಮಗೆ ಶುಭ ಕೋರಿ ಆಶೀರ್ವಾದ ಮಾಡಲು ಬಂದಿರುವ ಎಲ್ಲಾ ಪ್ರಮುಖ ನಾಯಕರು ಹಾಗೂ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ. ನಾವು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುತ್ತೇವೆ. ಜನ ಬದಲಾವಣೆ ಬಯಸಿದ್ದು, ನಾವು ಜನರಿಗೆ ಕೊಟ್ಟಿರುವ ಭರವಸೆ, ಗ್ಯಾರಂಟಿ ಯೋಜನೆಗಳನ್ನು ಇವತ್ತೇ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಆದೇಶ ಹೊರಡಿಸಿ ಜಾರಿಗೆ ತರುತ್ತೇವೆ. ಇದು ಕನ್ನಡನಾಡಿನ ಜನತೆಗೆ ನೂತನ ಸರ್ಕಾರದ ಕೊಡುಗೆಯಾಗಿದೆ. ನಮ್ಮ ಪ್ರಮಾಳಿಕೆಯಲ್ಲಿ ಕೊಟ್ಟಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದಿನ ಐದು ವರ್ಷಗಳಲ್ಲಿ ಈಡೇರಿಸುತ್ತೇವೆ.

ರಾಹುಲ್ ಗಾಂಧಿ:

     ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃದಯಪೂರ್ವಕ ನಮನಗಳು. ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಬಹುಮತ ನೀಡಿದ್ದೀರಿ. ಕಳೆದ ಐದು ವರ್ಷಗಳಲ್ಲಿ ಎದುರಾದ ಸಮಸ್ಯೆಗಳನ್ನು ನಾವು ಕಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಷ್ಟು ದೊಡ್ಡ ಗೆಲುವು ಸಿಕ್ಕಿದೆ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಣೆ ನೋಡಿದ್ದೀರಿ. ಅನೇಕರು ಅನೇಕ ಬಗೆಯ ವಿಶ್ಲೇಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ಗೆಲವು ಸಿಗಲು ಕಾರಣ ಎಂದರೆ ಕಾಂಗ್ರೆಸ್ ಪಕ್ಷ ರಾಜ್ಯದ ಬಡವರು, ರೈತರು, ಕಾರ್ಮಿಕರು, ಶೋಷಿತರು, ದಲಿತರ ಬೆನ್ನಿಗೆ ನಿಂತಿರುವುದು.

     ನಮ್ಮ ಬಳಿ ಸತ್ಯ ಹಾಗೂ ಬಡ ಜನರಿದ್ದರು. ಬಿಜೆಪಿ ಬಳಿ ಹಣ, ಅಧಿಕಾರ, ಪೊಲೀಸ್ ಅಧಿಕಾರಿಗಳು ಎಲ್ಲವೂ ಇತ್ತು. ಅವರ ಈ ಎಲ್ಲಾ ಶಕ್ತಿಗಳನ್ನು ಕರ್ನಾಟಕದ ಜನ ಮಣಿಸಿದ್ದಾರೆ. ಜನ ಅವರ ಭ್ರಷ್ಟಾಚಾರ, ದ್ವೇಷವನ್ನು ಮಣಿಸಿದ್ದೀರಾ. ಈ ಚುನಾವಣೆಯಲ್ಲಿ ರಾಜ್ಯದ ಜನ ದ್ವೇಷವನ್ನು ಒಡೆದೋಡಿಸಿ ಪ್ರೀತಿ ಸಾಮರಸ್ಯಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಕರ್ನಾಟಕದ ಜನ ಪ್ರೀತಿ ಸಾಮರಸ್ಯದ ಅಂಗಡಿ ತೆರೆದಿದ್ದಾರೆ. ಕಳೆದ ಐದು ವರ್ಷಗಳಿಂದ ನೀವು ಭ್ರಷ್ಟಾಚಾರ ನೋಡಿದ್ದೀರಿ.

    ನಾವು ನಿಮಗೆ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಗೃಹಲಕ್ಷಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹಧನ, ಗೃಹಜ್ಯೋತಿ ಮೂಲಕ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಪ್ರತಿ ತಿಂಗಳು ಉಚಿತ, ಯುವನಿಧಿ ಮೂಲಕ ಪದವೀಧರ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ. ನಂತರ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಸಂಚಾರ ವ್ಯವಸ್ಥೆ.

     ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ನುಡಿದಂತೆ ನಡೆಯುತ್ತೇವೆ. ಮುಂದಿನ ಕೆಲವೇ ಗಂಟೆಗಳಲ್ಲಿ ರಾಜ್ಯದ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ಐದೂ ಗ್ಯಾರಂಟಿ ಯೋಜನೆಗಳು ಕಾನೂನು ರೂಪಪಡೆದು ಜಾರಿಗೆ ಬರಲಿದೆ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ಸರ್ಕಾರದ ಆದ್ಯತೆ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಯುವಕರ ಹಿತ ಕಾಪಾಡಿ ಅವರ ಭವಿಷ್ಯ ಭದ್ರಗೊಳಿಸುವುದಾಗಿದೆ.

    ನಾವು ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ಸರ್ಕಾರ ನೀಡುತ್ತೇವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರೀತಿ ಹಾಗೂ ಶಕ್ತಿ ನೀಡಿರುವ ರಾಜ್ಯದ ಎಲ್ಲಾ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಈ ಸರ್ಕಾರ ರಾಜ್ಯದ ಜನರ ಸರ್ಕಾರ, ನಿಮ್ಮ ಸರ್ಕಾರ. ಈ ಸರ್ಕಾರ ಮನಪೂರ್ವಕವಾಗಿ ನಿಮಗಾಗಿ ದುಡಿಯಲಿದ್ದಾರೆ.

ಸಿದ್ದರಾಮಯ್ಯ

     ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಮತ್ತು ಅಧಿಕಾರಕ್ಕೆ ಬರಲು ಕರ್ನಾಟಕದ 7 ಕೋಟಿ ಕನ್ನಡಿಗರ ಆಶೀರ್ವಾದವೇ ಕಾರಣವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಂಠೀರವ ಕ್ರೀಡಾಂಗಣದಲ್ಲಿ ಹೇಳಿದರು. ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ನೀಡಿದ 5 ಪ್ರಮುಖ ಗ್ಯಾರಂಟಿಗಳನ್ನು ಇವತ್ತಿನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ನೀಡಿ ಆದೇಶ ಹೊರಡಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು. ರಾಹುಲ್ ಗಾಂಧಿ ಆರಂಭಿಸಿದ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದೆ ಎಂದು ಹೇಳಿದ ಮುಖ್ಯಮಂತ್ರಿಗಳು ಪಕ್ಷದ ಶ್ರೇಯಸ್ಸಿಗೆ ಕಾರಣರಾದ ಎಲ್ಲ  ಮತ್ತು ರಾಜ್ಯದ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

     ಕನಕಪುರ ಶಾಸಕ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರ ರಾಜ್ಯದ ಉಪ-ಮುಖ್ಯಮಂತ್ರಿಯಾಗಿ ಕಿಕ್ಕಿರಿದು ಜನ ನೆರೆದಿದ್ದ ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಅವರು ಪ್ರಮಾಣ ವಚನವನ್ನು ಬೋಧಿಸಿದರು. ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ರಂದೀಪ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ನಟ ಕಮಲ್ ಹಾಸನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೊದಲಾದವರು ಹಾಜರಿದ್ದರು.

ನೂತನ ಸಚಿವರುಗಳು

ಕೆ.ಹೆಚ್.ಮುನಿಯಪ್ಪ ಮೊದಲ ಪ್ರವೇಶದಲ್ಲೇ ಸಚಿವ

      ಕರ್ನಾಟಕ ರಾಜಕೀಯ ರಂಗದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಕೆ.ಹೆಚ್.ಮುನಿಯಪ್ಪನವರು ಸುದೀರ್ಘ ರಾಜಕೀಯ ಜೀವನದ ಅನುಭವವನ್ನು ಹೊಂದಿದ್ದಾರೆ. 1960ರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆದ ಅವರು ಇಲ್ಲಿಯವರೆಗೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆದಿದ್ದಾರೆ. ಕೆ.ಹೆಚ್. ಮುನಿಯಪ್ಪನವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಮಾರ್ಚ್ 07, 1948ರಲ್ಲಿ ಜನಿಸಿದ್ದು, ಇದೀಗ ಇವರಿಗೆ 75 ವರ್ಷ ವಯಸ್ಸಾಗಿದೆ. ಇವರು ಮೊದಲು ವಕೀಲರಾಗಿ ಕಾರ್ಯನಿರ್ವಹಿಸಿದ್ದು, ಸಾಮಾಜಿಕ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ಹನುಮಪ್ಪ, ತಾಯಿ ಶ್ರೀಮತಿ ವೆಂಕಟಮ್ಮ ದಿವಂಗತರಾಗಿದ್ದಾರೆ. ಪತ್ನಿ ನಾಗರತ್ನಮ್ಮನವರು. ಇವರಿಗೆ ಓರ್ವ ಮಗ ಹಾಗೂ 4 ಪುತ್ರಿಯರಿದ್ದಾರೆ. ಮಗ ಐಎಫ್‌ಎಸ್ ಅಧಿಕಾರಿ, ಮಗಳು ಕೆಜಿಎಫ್ ಶಾಸಕಿಯಾಗಿದ್ದಾರೆ.

      ಕೆ.ಹೆಚ್ ಮುನಿಯಪ್ಪ ಅವರು 1978-83 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಳಘಟ್ಟದ ತಾಲೂಕು ವ್ಯವಸಾಯ ಸೇವಾ ಸಹಕಾರಿ ಬೋರ್ಡ್ನ ಉಪಧ್ಯಾಕ್ಷರಾಗಿ ಆಯ್ಕೆಯಾಗಿದ್ದರು. ನಂತರ 1991 ರಿಂದ ಕೋಲಾರ ಲೋಕಸಭಾ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಸಾಧಿಸಿರುವ ಮುನಿಯಪ್ಪ ಅಂದಿನಿAದ ಇಲ್ಲಿಯವರೆಗೆ ಸತತವಾಗಿ ಏಳು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದ್ದಾರೆ.

      1991ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿಯವರ ಸಾವಿನ ಅನುಕಂಪದ ಅಲೆಯಲ್ಲಿ ಭರ್ಜರಿ ಜಯಗಳಿಸಿದ ಕೆ.ಹೆಚ್ ಮುನಿಯಪ್ಪನವರು ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಸತತವಾಗಿ ಆಯ್ಕೆಯಾಗುತ್ತಲೆ ಬಂದಿದ್ದಾರೆ. ಕ್ಷೇತ್ರದಲ್ಲಿ ಸತತ ಏಳುಬಾರಿ ಗೆಲುವನ್ನು ಸಾಧಿಸಿ ಸೋಲಿಲ್ಲದ ಸರದಾರನಾಗಿರುವ ಕೆ.ಹೆಚ್. ಮುನಿಯಪ್ಪನವರು, 2004 ರ ಲೋಕಸಭಾ ಚುನಾವಣೆಯಲ್ಲಿ 5ನೇ ಬಾರಿಗೆ ಕೋಲಾರದಿಂದ ಗೆಲುವನ್ನು ಸಾಧಿಸಿ ಯುಪಿಎ ಸರ್ಕಾರದಲ್ಲಿ ಮೊದಲ ಬಾರಿಗೆ ಕೇಂದ್ರ ರಸ್ತೆ ಹಾಗೂ ಹೆದ್ದಾರಿ ರಾಜ್ಯ ಸಚಿವರಾಗಿ, 15ನೇ ಚುನಾವಣೆಯಲ್ಲಿ 6ನೇ ಬಾರಿ ಗೆಲುವು ದಾಖಲಿಸಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

      ನಂತರದಲ್ಲಿ ಸಣ್ಣ,  ಹಾಗೂ ಮಧ್ಯಮ ಕೈಗಾರಿಕೆ ಸಚಿವರಾಗಿ ಕೂಡಾ ಕೆಲಸ ಮಾಡಿದ್ದಾರೆ. 16ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದಾದ ನಂತರ ಕೆಹೆಚ್ ಮುನಿಯಪ್ಪ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನ್ನು ಕಂಡರು.

     ಇದಾದ ನಂತರ ಕೆಹಚ್ ಮುನಿಯಪ್ಪ ಅವರ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ರಾಜಕಾರಣ ಪ್ರವೇಶ ಮಾಡಿ ದೇವನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಭೇರಿ ಭಾರಿಸಿದ್ದಾರೆ. ಸದ್ಯ ಕೆಹೆಚ್ ಮುನಿಯಪ್ಪ ಅವರು ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಜೊತೆಗೆ ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಪ್ರಮುಖ ಮುಖಂಡರಾಗಿ ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದಿದ್ದಾರೆ.

ರಾಮಲಿಂಗಾ ರೆಡ್ಡಿ

     ರಾಜ್ಯ ಕಾಂಗ್ರೆಸ್‌ನಲ್ಲಿ ರಾಮಲಿಂಗಾ ರೆಡ್ಡಿ ಅವರದು ಪ್ರಭಾವಿ ಹೆಸರು. ಅವರಿಗೀಗ 69 ವರ್ಷ. ದಶಕಗಳಿಂದ ಕಾಂಗ್ರೆಸ್‌ಗೆ ನಿಷ್ಠಾವಂತರಾಗಿ ಇರುವವರ ಕೆಲವೇ ಕೆಲವು ಮುಖಂಡರಲ್ಲಿ ರಾಮಲಿಂಗಾ ರೆಡ್ಡಿ ಪ್ರಮುಖರು. ಇವರು ಈವರೆಗೆ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಸ್ಥಾನ ಪಡೆದಿದ್ದಾರೆ.

      ಜಯನಗರದಿಂದ ನಾಲ್ಕು ಬಾರಿ ಮತ್ತು ಬಿಟಿಎಂ ಲೇಔಟ್‌ನಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇವರು ಕಾಂಗ್ರೆಸ್‌ಗೆ ಬಲ ತುಂಬಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಮಲಿಂಗಾ ರೆಡ್ಡಿ ಅವರ ಶಕ್ತಿ ಅಗತ್ಯವೆನಿಸಿದೆ. ಈಗ ಉಪ ಮುಖ್ಯಮಂತ್ರಿ ಹುದ್ದೆಗೆ ಏರಿರುವ ಡಿ ಕೆ ಶಿವಕುಮಾರ್ ಅವರಿಗೆ ರಾಮಲಿಂಗಾ ರೆಡ್ಡಿ ಆಪ್ತರಾಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 2013ರಿಂದ 2018ರವರೆಗೆ ರಾಮಲಿಂಗಾ ರೆಡ್ಡಿ ಅವರು ಗೃಹ ಸೇರಿದಂತೆ ಹಲವು ಖಾತೆಗಳ ಜವಾಬ್ದಾರಿ ಹೊತ್ತಿದ್ದರು.

     ರಾಮಲಿಂಗಾ ರೆಡ್ಡಿ ಅವರು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರೂ ಹೌದು. ಮೊದಲ ಬಾರಿಗೆ 1989ರಲ್ಲಿ ಜಯನಗರ ಕ್ಷೇತ್ರದಿಂದ ಇವರು ವಿಧಾನಸಭೆ ಪ್ರವೇಶಿಸಿದ್ದರು. ಅಂದಿನಿAದ ಈವರೆಗೆ ಇವರು ಸೋಲಿನ ರುಚಿಯನ್ನೇ ಕಂಡಿಲ್ಲ. 1992ರಲ್ಲಿ ಮೊದಲ ಬಾರಿ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಎಸ್ ಎಂ ಕೃಷ್ಣ, ಧರ್ಮ ಸಿಂಗ್, ಸಿದ್ದರಾಮಯ್ಯರಂಥ ಮುಖ್ಯಮಂತ್ರಿಗಳ ಜತೆ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಬೆಂಗಳೂರು ನಗರ ಅಭಿವೃದ್ಧಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ.

     ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ಕೂಡ ಕಳೆದ ಬಾರಿ ಜಯನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಅವರ ವಿರುದ್ಧ 16 ಮತಗಳಿಂದ ಸೋತಿದ್ದಾರೆ.

     ದಿ. ಇಂದಿರಾ ಗಾಂಧಿ ಮತ್ತು ದಿ. ದೇವರಾಜ ಅರಸ್ ಅವರಿಂದ ಪ್ರಭಾವಿತರಾಗಿ ರಾಮಲಿಂಗಾ ರೆಡ್ಡಿ ಅವರು 1973ರಲ್ಲಿ ಕಾಂಗ್ರೆಸ್ ಸೇರಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದರು. 1983ರಿಂದ 1988ರವರೆಗೆ ಬೆಂಗಳೂರು ಮಹಾ ನಗರ ಪಾಲಿಕೆ ಕಾರ್ಪೊರೇಟರ್ ಆಗಿದ್ದರು. 1989ರಿಂದ 2023ರವರೆಗೆ ಇವರು ಜಯನಗರ ಮತ್ತು ಬಿಟಿಎಂ ಲೇಔಟ್‌ನಿಂದ ನಿರಂತರವಾಗಿ ಗೆದ್ದು ಬರುತ್ತಿದ್ದಾರೆ. 2021ರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರ ಕುರಿತ ಮತ್ತಷ್ಟು ವಿವರ ಹೀಗಿದೆ:
ಜನುಮ ದಿನ: 12 ಜೂನ್ 1953
ತಂದೆ: ಬಿ ವೆಂಕಟ ರೆಡ್ಡಿ ತಾಯಿ: ಪಿಳ್ಳಮ್ಮ, ಮಗ: ಶ್ರೀರಾಜ್ ರೆಡ್ಡಿ
ಮಗಳು: ಸೌಮ್ಯಾ ರೆಡ್ಡಿ, ಶಿಕ್ಷಣ: ವಿಜ್ಞಾನ ಪದವಿ
ಸಚಿವ ಹುದ್ದೆಯಲ್ಲಿ ?
1992-1994: ವೀರಪ್ಪ ಮೊಯ್ಲಿ ಸಂಪುಟದಲ್ಲಿ ಹಣಕಾಸು, ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಸಚಿವ
2002ರಿಂದ 2004: ಎಸ್ ಎಂ ಕೃಷ್ಣ ಅವರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
2013ರಿಂದ 2018: ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಾರಿಗೆ ಮತ್ತು ಗೃಹ ಸಚಿವ

ಜಮೀರ್ ಅಹ್ಮದ್:

     ಇವರ ಪೂರ್ಣ ಹೆಸರು ಬಿ.ಝೆಡ್. ಜಮೀರ್ ಅಹ್ಮದ್ ಖಾನ್. ಇತ್ತೀಚಿನ ವರ್ಷದಲ್ಲಿ ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ನಾಯಕ. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಮಹತ್ತರ ಪಾತ್ರವಹಿಸಿ ರಾಜ್ಯದ ಗಮನ ಸೆಳೆದಿದ್ದ ಜಮೀರ್ ಅಹ್ಮದ್ ಖಾನ್ ಜೆಡಿಎಸ್‌ನಲ್ಲಿದ್ದರು. ನಂತರ ಕಾಂಗ್ರೆಸ್ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ಸಚಿವರೆಂದು ಗುರುತಿಸಿಕೊಂಡವರು. ಬೆಂಗಳೂರಿನ ಹೃದಯಭಾಗದಲ್ಲಿರುವ ಚಾಮರಾಜಪೇಟೆ ಇವರ ಕಾರ್ಯಕ್ಷೇತ್ರ.

    ರಾಜ್ಯದ ಪ್ರಭಾವಶಾಲಿ ಮುಸ್ಲೀಂ ರಾಜಕಾರಣಿಯಾಗಿ ಹೊರಹೊಮ್ಮಿರುವ ಜಮೀರ್ ಅಹ್ಮದ್ ಈಗಾಗಲೇ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು. ಜೆಡಿಎಸ್‌ನಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತರಾಗಿದ್ದವರು. ಬೆಂಗಳೂರಿನಲ್ಲಿ ಕಂಟೋನ್ಮೆAಟ್ ಪ್ರದೇಶದಲ್ಲಿರುವ ಇವರ ಭರ್ಜರಿ ಮನೆ ಸದಾ ಕುತೂಹಲಕ್ಕೆ ಕಾರಣವಾಗುತ್ತಲೇ ಬಂದಿದೆ. ರಾಜಕೀಯಕ್ಕೂ ಬರುವ ಮೊದಲು ಇವರ ಕುಟುಂಬ 1927 ರಲ್ಲಿ ಅರಂಭಿಸಿದ್ದ ನ್ಯಾಷನಲ್ ಟ್ರಾವೆಲ್ಸ್ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂರನೇ ತಲೆಮಾರಿನ ಉದ್ಯಮಿಯಾಗಿದ್ದಾರೆ. ಇವರ ಕುಟುಂಬದ ಮೂಲ ತುಮಕೂರು ಜಿಲ್ಲೆಯ ಕುಣಿಗಲ್. ತುಮಕೂರಿನ ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಇವರು ಹತ್ತನೇ ತರಗತಿಯಲ್ಲಿರುವಾಗಲೇ ಶಾಲೆಯನ್ನು ಬಿಟ್ಟು ಉದ್ಯಮದಲ್ಲಿ ತೊಡಗಿಸಿಕೊಂಡವರು.

ಪ್ರಮಾಣ ವಚನ ಸ್ವೀಕರಿಸುತ್ತಿರುವ ಜಮೀರ್ ಅಹ್ಮದ್ ಖಾನ್

     ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಜಮೀರ್ ಅಹ್ಮದ್ ಖಾನ್ ಅವರನ್ನು 2005 ರಲ್ಲಿ ಚಾಮರಾಜಪೇಟೆಯ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿಸಿದ್ದರು. ಕಾಂಗ್ರೆಸ್‌ನ ಆರ್.ವಿ. ದೇವರಾಜ್ ಅವರನ್ನು ಸೋಲಿಸಿ, ವಿಧಾನಸೌಧ ಪ್ರವೇಶಿಸಿದ ಜಮೀರ್ ಅಹ್ಮದ್ ಮತ್ತೆ ಹಿಂದಿರುಗಿ ನೋಡಲಿಲ್ಲ. ಕಳೆದ 18 ವರ್ಷಗಳಲ್ಲಿ ಸುದ್ದಿಯಲ್ಲಿರುತ್ತಲೇ ಪ್ರಬಲ ರಾಜಕೀಯ ನಾಯಕರಾಗಿ ಹೊರಹೊಮ್ಮಿದ್ದಾರೆ.

     55 ವರ್ಷದ ಜಮೀರ್ ಅಹ್ಮದ್ ಜೆಡಿಎಸ್‌ನಾಯಕರೊಂದಿಗೆ ಮುನಿಸಿಕೊಂಡು, 2018 ರಲ್ಲಿ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಗೆದ್ದಿದ್ದರು. ಸಿದ್ದರಾಮಯ್ಯರ ಬೆಂಬಲಿಗರಾಗಿರುವ ಅವರು ಈಗ ಸಚಿವ ಸಂಪುಟ ಸೇರಿದ್ದಾರೆ. ಇವರ ಮಗ ಝೈದ್ ಖಾನ್ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಗುರುತಿಸಿಕೊಂಡಿದ್ದಾರೆ.

ರಾಜಕೀಯ ಬದುಕಿನ ಹಿನ್ನೋಟ?

    2005 ರಲ್ಲಿ ಚಾಮರಾಜಪೇಟೆ ಉಪ ಚುನಾವಣೆಯಲ್ಲಿ ಗೆಲುವು. ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಂಪುಟದಲ್ಲಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರಾಗಿದ್ದರು.2008 ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು.2013 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು.2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ. ಪಕ್ಷದಿಂದ ಅಮಾನತು.
2018ರ ಮಾರ್ಚ್ 25 ರಂದು ಕಾಂಗ್ರೆಸ್ ಸೇರ್ಪಡೆ. ಚಾಮರಾಜಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು.

ಪ್ರಿಯಾಂಕ್ ಖರ್ಗೆ

     ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ. ಈ ಮೂಲಕ ರಾಜ್ಯ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಇವರಿಗೆ ಸಾಥ್ ಕೊಡಲು ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಸಹಿತ ಒಟ್ಟು 8 ಮಂದಿ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ. ಅವರಲ್ಲಿ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಹ ಒಬ್ಬರು. ಇವರು ಈಗ ಮೂರನೇ ಬಾರಿ ಸಚಿವರಾಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

    ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ. ಇವರು 2013, 2018 ಹಾಗೂ ಹಾಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ವಿಧಾನಸಭೆಯನ್ನು ಪ್ರವೇಶ ಮಾಡಿದ್ದಾರೆ.

ಮೊದಲ ಗೆಲುವಲ್ಲೇ ಒಲಿದಿದ್ದ ಸಚಿವ ಸ್ಥಾನ!

    ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಮೊದಲ ಗೆಲುವಲ್ಲೇ ಸಚಿವ ಸ್ಥಾನ ಒಲಿದು ಬಂದಿತ್ತು. 2013ರಲ್ಲಿ ಇವರು ಚಿತ್ತಾಪುರ ಕ್ಷೇತ್ರದಿಂದ ಜಯ ಕಂಡಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಮೊದಲ ಹಂತದಲ್ಲಿ ಇವರು ಆಯ್ಕೆಯಾಗಿರಲಿಲ್ಲ. ಆದರೆ, 2016ರಲ್ಲಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯನ್ನು ಮಾಡಿದ್ದರು. ಆಗ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಸಚಿವ ಸಂಪುಟದ ಅತಿ ಕಿರಿಯ ವಯಸ್ಸಿನ ಸಚಿವ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು. ಆ ಸಮಯದಲ್ಲಿ ಐಟಿ & ಬಿಟಿ ಹಾಗೂ ಪ್ರವಾಸೋದ್ಯಮ ಖಾತೆಯನ್ನು ಇವರು ನಿರ್ವಹಣೆ ಮಾಡಿದ್ದರು.

ಮೈತ್ರಿ ಸರ್ಕಾರದಲ್ಲೂ ಸಚಿವ

    2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಈ ವೇಳೆ ಸಹ ಪ್ರಿಯಾಂಕ್ ಖರ್ಗೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಆಗ ಅವರು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿದ್ದರು.

ಮತ್ತೆ ಸಿದ್ದರಾಮಯ್ಯ ಸಂಪುಟಕ್ಕೆ ಪ್ರಿಯಾಂಕ್

    ಪ್ರಸಕ್ತ ಸಾಲಿನಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅವರಲ್ಲಿ ಪ್ರಿಯಾಂಕ್ ಖರ್ಗೆ ಸಹ ಒಬ್ಬರು. ವಿಶೇಷವೆಂದರೆ ಮೊದಲ 8 ಮಂದಿ ಸಚಿವರಲ್ಲಿಯೇ ಪ್ರಿಯಾಂಕ್‌ಗೆ ಅವಕಾಶ ಸಿಕ್ಕಿದೆ. ಆದರೆ, ಇನ್ನೂ ಯಾವ ಖಾತೆ ಎಂಬುದು ಮಾತ್ರ ನಿರ್ಧಾರವಾಗಿಲ್ಲ.

ವೈಯಕ್ತಿಕ ವಿವರ

    ದಲಿತ ಕುಟುಂಬದಲ್ಲಿ 1978ರ ನವೆಂಬರ್ 22ರಂದು ಜನಿಸಿದ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಧಾಬಾಯಿ ಖರ್ಗೆ ಅವರ ಪುತ್ರರಾಗಿದ್ದಾರೆ. ಶ್ರುತಿ ಪಿ. ಅವರನ್ನು ಪ್ರಿಯಾಂಕ್ ವಿವಾಹವಾಗಿದ್ದಾರೆ. ಬಿಎ ಪದವೀಧರರಾಗಿರುವ ಇವರು, ಡಿಪಿ ಗ್ರಾಫಿಕ್ಸ್, ಡಿಎನ್ ಇನ್ ಅನಿಮೇಷನ್ ಅನ್ನು ಸಹ ವ್ಯಾಸಂಗ ಮಾಡಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಪ್ರಿಯಾಂಕ್ ಪ್ರವೃತ್ತಿಯಲ್ಲಿ ಈಗ ರಾಜಕೀಯ ನಾಯಕರಾಗಿ ಜನಸೇವೆಯಲ್ಲಿ ತೊಡಗಿದ್ದಾರೆ.

ಪಕ್ಷದಲ್ಲಿ ಸ್ಥಾನಮಾನ
2022ರ ಜುಲೈನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಿಯಾಂಕ್ ರಾಜಕೀಯ ಹಾದಿ
ಈಗ ಎಐಸಿಸಿ ಅಧ್ಯಕ್ಷರಾಗಿರುವ, ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿದ್ದರೂ ಪ್ರಿಯಾಂಕ್ ಖರ್ಗೆ ಅವರು ತಳಮಟ್ಟದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅಲ್ಲದೆ,

1998: ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶ
1999: ಎನ್‌ಎಸ್‌ಯುಐ ಕಾಲೇಜು ಮಟ್ಟದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ
2001-2005: ರಾಜ್ಯ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ
2005-2007: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿ
2007-2011: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
2011-2014: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷ
2016: ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ & ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ
2018: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವ
2022ರಿಂದ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗದ ಅಧ್ಯಕ್ಷ
2023: ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವ

ಮೊದಲ ಬಾರಿ ಸೋಲು ಕಂಡಿದ್ದ ಪ್ರಿಯಾಂಕ್

    2009ರಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಆಗ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್‌ನಿAದ ಅಭ್ಯರ್ಥಿಯಾಗಿದ್ದರು. ಆ ವೇಳೆ ಬಿಜೆಪಿಯಿಂದ ವಾಲ್ಮೀಕಿ ನಾಯಕ್ ಅವರು ಸ್ಪರ್ಧೆ ಮಾಡಿದ್ದರು. ತೀವ್ರ ಹಣಾಹಣಿ ನಡುವೆ ವಾಲ್ಮೀಕಿ ನಾಯಕ್ ವಿರುದ್ಧ ಪ್ರಿಯಾಂಕ್ ಸೋಲು ಕಂಡಿದ್ದರು.

ಪರಮೇಶ್ವರ್

    ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ಸ್ವೀಕಾರ ಮಾಡಿದ್ದು, 8 ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಡಾ. ಜಿ. ಪರಮೇಶ್ವರ್ ಸಹ ಒಬ್ಬರು.

    ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯಲ್ಲಿ 1951ರ ಆಗಸ್ಟ್ 6ರಂದು ಎಚ್.ಎಂ. ಗಂಗಾಧರಯ್ಯ ಮತ್ತು ಗಂಗಮಾಳಮ್ಮ ಸಿ. ದಂಪತಿಗೆ ಜನಿಸಿದರು. ಕೃಷಿ ಕುಟುಂಬದಿAದ ಬಂದಿರುವ ಇವರು ಕೃಷಿ ವಿಜ್ಞಾನದಲ್ಲಿ ಎಂ.ಎಸ್‌ಸಿ ಪದವೀಧರರಾಗಿದ್ದಾರೆ. ಇವರು ಕನ್ನಿಕಾ ಪರಮೇಶ್ವರಿ ಅವರನ್ನು ವಿವಾಹವಾಗಿದ್ದಾರೆ. ಒಬ್ಬರು ಪುತ್ರಿ ಇದ್ದಾರೆ.

ರಾಜಕೀಯದಲ್ಲಿ ಹಲವು ಹುದ್ದೆಗಳ ನಿರ್ವಹಣೆ

    1989ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಪ್ರವೇಶ ಮಾಡಿದ ಡಾ. ಜಿ. ಪರಮೇಶ್ವರ್ ಅವರು ರಾಜಕೀಯದಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಣೆ ಮಾಡಿದ್ದಾರೆ. 1989ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದರು. 1989, 1999 ಮತ್ತು 2004ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ, ತದ ನಂತರ ಕ್ಷೇತ್ರ ಪುನರ್ವಿಂಗಡಣೆಯಾಗಿದ್ದು, 2008ರಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಬಂದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

ರೇಷ್ಮೆ ಖಾತೆಯಿಂದ ಡಿಸಿಎಂವರೆಗೆ

    1993ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರಾಗಿ ಕಾರ್ಯನಿರ್ಹವಣೆ ಮಾಡಿದ್ದರು. 1999ರಲ್ಲಿ ಜೆಡಿಎಸ್‌ನ ಗಂಗಾಹನುಮಯ್ಯ ಅವರ ವಿರುದ್ಧ 55,802 ಮತಗಳ ದಾಖಲೆ ಅಂತರದಿAದ ಜಯ ಸಾಧಿಸಿದ್ದರು.

    1999-2004: ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕೆಲಸ ಮಾಡಿದ್ದರು. 2002ರಲ್ಲಿ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ಹೊಂದುತ್ತಾರೆ.
2010-2018: ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷರಾಗಿ ಆಯ್ಕೆ
2014: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ
2015: ಗೃಹ ಸಚಿವರಾಗಿ ಕಾರ್ಯನಿರ್ವಹಣೆ
2018: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ. ಗೃಹ ಹಾಗೂ ನಗರಾಭಿವೃದ್ಧಿ ಖಾತೆ ಹೊಣೆ
2023: ಸಿದ್ದರಾಮಯ್ಯ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಆಯ್ಕೆ

     ದಲಿತ ಸಮುದಾಯ ಡಾ. ಜಿ. ಪರಮೇಶ್ವರ್ ಅವರು, ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿಯನ್ನು ಹೊಂದಿದ್ದಾರೆ. ಅಲ್ಲದೆ, ಇವರು 2018ರಲ್ಲಿ ಉಪ ಮುಖ್ಯಮಂತ್ರಿಯಾಗುವ ಮೂಲಕ ಕರ್ನಾಟಕದ 8ನೇ ಡಿಸಿಎಂ ಆಗಿ ಕಾರ್ಯನಿರ್ವಹಣೆ ಮಾಡಿದ್ದರು.

ಕ್ರೀಡೆಯಲ್ಲೂ ಆಸಕ್ತಿ

    ಡಾ. ಜಿ. ಪರಮೇಶ್ವರ್ ಅವರು ಬಹಳ ಕ್ರಿಯಾಶೀಲರು. ವಿದ್ಯಾರ್ಥಿ ಜೀವನದಲ್ಲಿಯೇ ಎನ್‌ಸಿಸಿ ಸೇರ್ಪಡೆಯಾಗಿದ್ದರು. ಅಲ್ಲದೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 10.9 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ದಾಖಲೆ ಬರೆದಿದ್ದರು. ಅಂತರ್ ಕಾಲೇಜು, ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದು, ಕೃಷಿ ವಿಜ್ಞಾನ ಕೇಂದ್ರ ಕಾಲೇಜಿನ ಪ್ರತಿನಿಧಿಯಾಗಿ ರಾಷ್ಟçಮಟ್ಟದಲ್ಲಿ ಭಾಗವಹಿಸಿದ್ದರು. ಸಿದ್ಧಾರ್ಥ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹಾವಿದ್ಯಾಲಯವು ಪರಮೇಶ್ವರ್ ಒಡೆತನದಲ್ಲಿದ್ದು, ಹಾಲಿ ಆಡಳಿತಾಧಿಕಾರಿಯಾಗಿದ್ದಾರೆ.

ಸಂಪುಟ ದರ್ಜೆ ಸಚಿವ
     ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದು, ಯಾವ ಖಾತೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಕೆ ಜೆ ಜಾರ್ಜ್

      ಇವರ ಪೂರ್ಣ ಹೆಸರು ಕೇಳಚಂದ್ರ ಜೋಸೆಫ್ ಜಾರ್ಜ್. ಇವರಿಗೀಗ 76 ವರ್ಷ. ಕಾಂಗ್ರೆಸ್ ಮುಂಚೂಣಿ ಪಡೆಯ ನಾಯಕರಲ್ಲಿ ಕೆ ಜೆ ಜಾರ್ಜ್ (ಏ ಎ ಉeoಡಿge) ಪ್ರಮುಖರು. ಕ್ರಿಶ್ಚಿಯನ್ ಸಮುದಾಯದ ಜೋಸೆಫ್ ಕೇಳಚಂದ್ರ ಚಾಕೋ ಮತ್ತು ಮರಿಯಮ್ಮ ದಂಪತಿಯ ಪುತ್ರ ಇವರು. ತಮ್ಮ ಬಾಲ್ಯವನ್ನು ಇವರು ಕಳೆದಿದ್ದು ಕೊಡಗಿನಲ್ಲಿ.

     2018ರ ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಜಾರ್ಜ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದರು. ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ, ಕರ್ನಾಟಕ ಗೃಹ ಸಚಿವ ಹೊಣೆಯನ್ನೂ ಅವರು ನಿಭಾಯಿಸಿದ್ದಾರೆ. ವೀರೇಂದ್ರ ಪಾಟೀಲ್ ಸರಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ಎಸ್. ಬಂಗಾರಪ್ಪ ಸರ್ಕಾರದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಮುಂತಾದ ಖಾತೆಗಳನ್ನು ನಿಭಾಯಿಸಿದ್ದರು.

    ತಮ್ಮ ರಾಜಕೀಯ ಜೀವನವನ್ನು ಗೋಣಿಕೊಪ್ಪಲು ಪಟ್ಟಣದಿಂದ ಆರಂಭಿಸಿದ್ದರು ಜಾರ್ಜ್. ಸುಜಾ ಇವರ ಪತ್ನಿ. ರಾಣಾ ಜಾರ್ಜ್ ಮತ್ತು ರೆನಿತಾ ಜಾರ್ಜ್ ಇವರ ಮಕ್ಕಳು.

   ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಕೆ ಜೆ ಜಾರ್ಜ್ ಅವರು, ಡಿವೈಎಸ್‌ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿದ್ದರು. ಇವರ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದ್ದವು. ಈ ಪ್ರಕರಣ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಜಾರ್ಜ್ ಮೇಲೆ ಎಫ್‌ಐಆರ್ ಕೂಡ ದಾಖಲಾಗಿತ್ತು. ಇವರ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆದಿತ್ತು. ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆ ನೀಡಿದ್ದರು. ಆ ಬಳಿಕ ಇವರಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು. ಹಾಗಾಗಿ ಸಿದ್ದರಾಮಯ್ಯ ಅವರು ಇವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದರು.

ರಾಜಕೀಯ ಬದುಕಿನ ಹಿನ್ನೋಟ?
1968ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.
1969ರಲ್ಲಿ ಗೋಣಿಕೊಪ್ಪಲು ಪಟ್ಟಣದ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆ.
1971-72ರಲ್ಲಿ ವಿರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ.
1975-78ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಖಜಾಂಚಿ
1982-85ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯದರ್ಶಿ
1985-89ರಲ್ಲಿ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರದ ಶಾಸಕ
1989-94ರಲ್ಲಿ ಬೆಂಗಳೂರಿನ ಭಾರತಿನಗರ ವಿಧಾನಸಭಾ ಕ್ಷೇತ್ರದ ಶಾಸಕ
1989-91ರಲ್ಲಿ ಸಾರಿಗೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ರಾಜ್ಯ ಸಚಿವ
1991-93ರಲ್ಲಿ ವಸತಿ ಮತ್ತು ನಗರ ಅಭಿವೃದ್ಧಿ ಖಾತೆಯ ಸಂಪುಟ ಸಚಿವ
2013ರಿಂದ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಶಾಸಕ

     2013ರ ಮೇಯಿಂದ ಅಕ್ಟೋಬರ್ 2015ರವರೆಗೆ ಕರ್ನಾಟಕ ಸರ್ಕಾರದ ಗೃಹ ಖಾತೆಯ ಸಂಪುಟದಲ್ಲಿ ಸಚಿವ
ಅಕ್ಟೊಬರ್ 2015ರಿಂದ 18ರವರೆಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆಯ ಸಚಿವ, ಗೃಹ ಸಚಿವ
ಜೂನ್ 2018ರಿಂದ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಖಾತೆಯ ಸಚಿವ
ಮೇ 2023ರಿಂದ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ.

ಸತೀಶ್ ಜಾರಕಿಹೊಳಿ :

     ಇವರ ಪೂರ್ಣ ಹೆಸರು ಸತೀಶ್ ಲಕ್ಷ÷್ಮಣರಾವ್ ಜಾರಕಿಹೊಳಿ. ಬೆಳಗಾವಿಯ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬವಾಗಿರುವ ಜಾರಕಿಹೊಳಿ ಕುಟುಂಬದ ಸದಸ್ಯರಾಗಿರುವ ಸತೀಶ್ ಪ್ರಗತಿಪರ ರಾಜಕಾರಣಿ. ಬೆಳಗಾವಿ ಜಿಲ್ಲೆಯ ಯಮಕನಮರಡಿ ಇವರ ಕಾರ್ಯಕ್ಷೇತ್ರ. ಸದ್ಯ ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನೆಡೆಸುತ್ತಿದ್ದಾರೆ. ವಾಲ್ಮೀಕಿ ಸಮಾಜದ ನಾಯಕರೂ ಆಗಿರುವ ಇವರು ಸದಾ ಹಿಂದುಳಿದ ಜಾತಿಗಳ ಪರವಾಗಿ ದನಿ ಎತ್ತುತ್ತಾ ಬಂದವರು.

     ಬೆಳಗಾವಿಯ ಸತೀಶ್ ಶುಗರ್ಸ್ ಕಂಪನಿ ಮಾಲೀಕರಾಗಿರುವ, 60ನೇ ವರ್ಷದ ಸತೀಶ್ ಸತೀಶ್ ಜಾರಕಿಹೊಳಿ ಜನತಾ ದಳದ ಮೂಲಕ ರಾಜಕೀಯ ಪ್ರವೇಶಿಸಿದವರು ಮೂಢನಂಬಿಕೆ, ಮೌಢ್ಯಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿಕೊಂಡೇ ಬಂದಿರುವ ಇವರು ಮಾಧ್ಯಮ ಲೋಕದಲ್ಲಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ದ್ವಿತೀಯ ಪಿಯುಸಿ ಓದಿರುವ ಸತೀಶ್ ಜಾರಕಿಹೊಳಿಗೆ ಪುಸ್ತಕಗಳೆಂದರೆ ಬಲು ಪ್ರೀತಿ. ಓದಿನಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುತ್ತಾರೆ.

     ಇತ್ತೀಚೆಗೆ ಹಿಂದೂ ಪದದ ಮೂಲದ ಕುರಿತು ಇವರು ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರ ಬೆಂಬಲಿಗರೆAದೇ ಗುರುತಿಸಿಕೊಂಡಿರುವ ಇವರು ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ಅವರ ಜತೆ ಇವರೂ ?ಕೈ? ಹಿಡಿದಿದ್ದರು! ಗೋಕಾಕ್‌ನಲ್ಲಿ ನೆಲೆಸಿರುವ ಇವರು ಹುಟ್ಟಿದ್ದು 1962ರಲ್ಲಿ. ತಂದೆ ಲಕ್ಷ÷್ಮಣರಾವ ಜಾರಕಿಹೊಳಿ ಹಾಗೂ ತಾಯಿ ಬೀಮವ್ವ ಜಾರಕಿಹೊಳಿ. ಇವರ ಮೂಲ ವೃತ್ತಿ ಕೃಷಿ ಹಾಗೂ ಉದ್ಯಮ. ಶಕುಂತಲಾ ಅವರನ್ನು ಮದುವೆಯಾಗಿರುವ ಇವರು ಓರ್ವಪುತ್ರ ಮತ್ತು ಓರ್ವ ಪುತ್ರಿಯನ್ನು ಹೊಂದಿದ್ದಾರೆ. ಇವರ ಸಹೋದರರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಸಕ್ರೀಯ ರಾಜಕಾರಣದಲ್ಲಿದ್ದಾರೆ.

ರಾಜಕೀಯ ಬದುಕಿನ ಹಿನ್ನೋಟ?
1999 ರ ವರೆಗೆ ಜೆಡಿಎಸ್, ಜನತಾ ದಳದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.
1998 ರಿಂದ 2008ರ ತನಕ ವಿಧಾನ ಪರಿಷತ್ ಸದಸ್ಯರಾಗಿದ್ದರು.
2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎನ್. ಧರಂ ಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿದ್ದರು.
2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.
2013 ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ, ಸಣ್ಣ ಕೈಗಾರಿಕಾ ಖಾತೆ ಸಚಿವರಾಗಿದ್ದರು.
2018 ರಲ್ಲಿ ಮತ್ತೆ ಗೆಲುವು. ಮೈತ್ರಿ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ನಿರ್ವಹಣೆ.
2021 ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ.

ಎಂ.ಬಿ ಪಾಟೀಲ್

     ಇವರ ಪೂರ್ಣ ಹೆಸರು ಮಲ್ಲನಗೌಡ ಬಸನಗೌಡ ಪಾಟೀಲ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಲ್ಲಿ ಇವರು ಪ್ರಮುಖಕರು. ಈ ಬಾರಿಯ ಚುನಾವಣೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನೆಡೆಸಿದವರು. ವಿಜಯಪುರ ಜಿಲ್ಲೆ ಬಬಲೇಶ್ವರ ಎಂ.ಬಿ. ಪಾಟೀಲ್ ಅವರ ಕಾರ್ಯಕ್ಷೇತ್ರ. ಈ ಭಾಗದಲ್ಲಿ ಇವರೇ ಕಾಂಗ್ರೆಸ್‌ನ ಪ್ರಭಾವಶಾಲಿ ನಾಯಕರು.

     ಸಿವಿಲ್ ಎಂಜಿನಿಯರಿಂಗ್ ಪದವೀಧರರಾದ ಎಂ.ಬಿ.ಪಾಟೀಲ್ ಹುಟ್ಟಿದ್ದು ವಿಜಯಪುರದ ತಾಲೂಕಿನ ತೊರವಿಯಲ್ಲಿ. ತಮ್ಮ 27ನೇ ವಯಸ್ಸಿನಲ್ಲಿಯೇ (1991ರಲ್ಲಿ) ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ತ್ರಿಕೋಟಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದಿದ್ದರು. ಆ ನಂತರ 1998 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. 2004 ರಿಂದ ಸತತವಾಗಿ ಗೆಲ್ಲುತ್ತಲೇ (ಐದು ಬಾರಿ) ಬಂದಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಹಲವಾರು ಏತ ನೀರಾವರಿ ಯೋಜನೆಗಳನ್ನು ರೂಪಿಸಿ ಗಮನ ಸೆಳೆದಿದ್ದರು. ನಂತರ 2018 ರಲ್ಲಿ ರಚನೆಯಾದ ಸಮ್ಮಿಶ್ರ ಸರ್ಕಾರಗದಲ್ಲಿ ಗೃಹ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

     ಪರಿಸರದ ಬಗ್ಗೆ ಅಪಾರದವಾದ ಕಾಳಜಿ ಹೊಂದಿರುವ ಎಂ.ಬಿ.ಪಾಟೀಲ್ ಬರಡು ಜಾಗದಲ್ಲಿ ಮರಗಳನ್ನು ಬೆಳೆಸುವ ಆಂದೋಲನ ನಡೆಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾ ಪಾಟೀಲರವರನ್ನು ಮದುವೆಯಾಗಿರುವ ಎಂ.ಬಿ.ಪಾಟೀಲರಿಗೆ ಬಸನಗೌಡ ಹಾಗೂ ಧ್ರುವ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬ ವಿಜಯಪುರದಲ್ಲಿ ವಾಸವಾಗಿದೆ.

ರಾಜಕೀಯ ಬದುಕಿನ ಹಿನ್ನೋಟ?
1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ 27ನೇ ವಯಸ್ಸಿನಲ್ಲಿ ತಿಕೋಟಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಸ್ಪರ್ಧಿಸಿ ಪ್ರಥಮ ಬಾರಿಗೆ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
1994 ಮತ್ತು 1999ರಲ್ಲಿ ನಡೆದ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಿವಾನಂದ ಪಾಟೀಲರ ವಿರುದ್ಧ ಸೋತರು.
1998ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿAದ ಲೋಕಸಭೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.
2004ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
2008, 2013ಮತ್ತು 2018ರಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು.
ಇದಲ್ಲದೆ ಎಐಸಿಸಿ, ಕೆಪಿಸಿಸಿ ಸಮನ್ವಯ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap