ನವದೆಹಲಿ:
ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಆರ್ಟಿಕಲ್ 370 ಹಿಂತೆಗೆತವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
ಆರ್ಟಿಕಲ್ 370 ನ್ನು ರದ್ದುಗೊಳಿಸಿರುವುದು ಸಂವಿಧಾನಾತ್ಮಕವಾಗಿ ಕ್ರಮಬದ್ಧವಾಗಿದೆಯೋ ಇಲ್ಲವೋ ಎಂಬ ಪ್ರಶ್ನೆ ತನ್ನ ಮುಂದಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಆರ್ಟಿಕಲ್ 370 ಕುರಿತು ಬ್ರೆಕ್ಸಿಟ್ ಮಾದರಿಯ ಜನಾಭಿಪ್ರಾಯ ಸಂಗ್ರಹಣೆ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತ ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿದ್ದು, ಜನರ ಅಭಿಪ್ರಾಯಗಳನ್ನು ಸ್ಥಾಪಿತ ಸಂಸ್ಥೆಗಳ ಮೂಲಕವಷ್ಟೇ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಕೋರ್ಟ್ ಹೇಳಿದೆ.
ಆರ್ಟಿಕಲ್ 370 ರದ್ದುಗೊಳಿಸಿರುವ ಕ್ರಮ ಬ್ರೆಕ್ಸಿಟ್ ಮಾದರಿಯ ರಾಜಕೀಯ ನಡೆಯಾಗಿದೆ, ಬ್ರೆಕ್ಸಿಟ್ ನಲ್ಲಿ ಬ್ರಿಟೀಷ್ ಪ್ರಜೆಗಳ ಅಭಿಪ್ರಾಯವನ್ನು ಜನಾಭಿಪ್ರಾಯ ಸಂಗ್ರಹದ ಮೂಲಕ ಪಡೆಯಲಾಗಿತ್ತು ಎಂದು ವಾದ ಮಾಡುವಾಗ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಬ್ರೆಕ್ಸಿಟ್ ಮಾದರಿಯ ಜನಾಭಿಪ್ರಾಯ ಸಂಗ್ರಹಣೆ ಪ್ರಶ್ನೆ ಇಲ್ಲ ಎಂದು ಹೇಳಿದೆ.