ಗಾಜಾ ಮೇಲಿನ ಇಸ್ರೇಲ್‌ ದಾಳಿ ಬಗ್ಗೆ ವಿಶ್ವಸಂಸ್ಥೆ ಹೇಳಿದ್ದೇನು ….!

ಜಿನೆವಾ:

     ಗಾಝಾ ಪಟ್ಟಿಯಲ್ಲಿ ಬಾಂಬ್‍ದಾಳಿಯಿಂದ ನಾಶಗೊಂಡಿರುವ ಮನೆಗಳನ್ನು ಮರು ನಿರ್ಮಿಸುವ ಕಾರ್ಯ ಮುಂದಿನ ಶತಮಾನಕ್ಕೂ ವಿಸ್ತರಿಸಬಹುದು ಎಂದು ವಿಶ್ವಸಂಸ್ಥೆ ಗುರುವಾರ ಬಿಡುಗಡೆಗೊಳಿಸಿದ ವರದಿ ಹೇಳಿದೆ.

     ಗಾಝಾದಲ್ಲಿ ಈ ಹಿಂದಿನ ಘರ್ಷಣೆಗಳ ಪ್ರವೃತ್ತಿಗಳನ್ನು ಗಮನಿಸಿದರೆ, ಅಕ್ಟೋಬರ್ 7ರಿಂದ ಮುಂದುವರಿದಿರುವ ಯುದ್ಧದಲ್ಲಿ ಹಾನಿಗೊಂಡಿರುವ ಮನೆಗಳನ್ನು ಮರು ನಿರ್ಮಿಸಲು ಕನಿಷ್ಠ 80 ವರ್ಷ ಬೇಕಾಗಬಹುದು.

    ಗಾಝಾ ಪಟ್ಟಿಯ ಮೇಲೆ ಸುಮಾರು 7 ತಿಂಗಳಿಂದ ಮುಂದುವರಿದಿರುವ ಬಾಂಬ್ ದಾಳಿಯಿಂದಾಗಿ ಕೋಟ್ಯಂತರ ಡಾಲರ್ ನಷ್ಟ ಸಂಭವಿಸಿದ್ದು ಜನನಿಬಿಡ ಪ್ರದೇಶದ ಬಹುತೇಕ ಬಹುಮಹಡಿ ಕಟ್ಟಡಗಳು ನೆಲಸಮಗೊಂಡಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಸಶಸ್ತ್ರ ಹೋರಾಟಗಾರರು ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಪ್ರತೀಕಾರ ದಾಳಿಯಲ್ಲಿ ಸುಮಾರು 80,000 ಮನೆಗಳು ನಾಶಗೊಂಡಿರುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಪೂರ್ಣ ಹಾನಿಗೊಂಡಿರುವ ಎಲ್ಲಾ ಮನೆಗಳ ಮರುನಿರ್ಮಾಣಕ್ಕೆ ಸುಮಾರು 80 ವರ್ಷ ಬೇಕಾಗಬಹುದು.

    ಆದರೆ, ನಿರ್ಮಾಣ ಕಾಮಗಾರಿಗೆ ವಸ್ತುಗಳನ್ನು ಐದು ಪಟ್ಟು ಕ್ಷಿಪ್ರವಾಗಿ ಪೂರೈಸಿದರೆ 2040ರ ಒಳಗೆ ಮುಗಿಸಬಹುದು ಎಂದು ಗಾಝಾದಲ್ಲಿ ಆಗಿರುವ ವಿನಾಶದ ಬಗ್ಗೆ ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ(ಯುಎನ್‍ಡಿಪಿ) ನಡೆಸಿರುವ ಪರಿಶೀಲನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಯುಎನ್‍ಡಿಪಿ ಮೌಲ್ಯಮಾಪನವು ಪ್ರಸ್ತುತ ಸಂಘರ್ಷದ ಅವಧಿಯನ್ನು ಆಧರಿಸಿ ಯುದ್ಧದ ಸಾಮಾಜಿಕ-ಆರ್ಥಿಕ ಪ್ರಭಾವವನ್ನು ಪರಿಗಣಿಸಿದೆ.

   `ಅಸಾಮಾನ್ಯ ಮಟ್ಟದಲ್ಲಿ ಮಾನವ ನಷ್ಟಗಳು, ಆರ್ಥಿಕ ಹಾನಿ, ಕಡಿಮೆ ಅವಧಿಯಲ್ಲಿ ಬಡತನ ಮಟ್ಟದಲ್ಲಿ ತೀವ್ರ ಏರಿಕೆಯು ಮುಂದಿನ ಪೀಳಿಗೆಯ ಭವಿಷ್ಯವನ್ನು ಅಪಾಯಕ್ಕೆ ತಳ್ಳುವ ಗಂಭೀರ ಅಭಿವೃದ್ಧಿಯ ಬಿಕ್ಕಟ್ಟನ್ನು ಉಂಟು ಮಾಡುತ್ತದೆ ಎಂದು ಯುಎನ್‍ಡಿಪಿ ನಿರ್ವಾಹಕ ಅಚಿಮ್ ಸ್ಟೈನರ್ ಹೇಳಿದ್ದಾರೆ.

    ಒಂದು ವೇಳೆ ಯುದ್ಧವು 9 ತಿಂಗಳು ನಡೆದರೆ, 2023ರ ಅಂತ್ಯದಲ್ಲಿ ಗಾಝಾದ ಜನಸಂಖ್ಯೆಯ 38.8%ದಷ್ಟು ಇದ್ದ ಬಡತನ ಮಟ್ಟವು 60.7%ಕ್ಕೆ ಏರಲಿದೆ. ಮಧ್ಯಮ ವರ್ಗದ ಬಹುತೇಕ ಜನರನ್ನು ಬಡತನ ರೇಖೆಯ ಕೆಳಗೆ ತಳ್ಳಲಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

 

Recent Articles

spot_img

Related Stories

Share via
Copy link
Powered by Social Snap