ಬೆಂಗಳೂರು
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಉಪಹಾರ ಸೇವಿಸಿದರು.
ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಮಿತ್ ಶಾ ಅವರು ಬಿಜೆಪಿ ಯುವ ಮುಖಂಡ ಬಿ ವೈ ವಿಜಯೇಂದ್ರ ಜೊತೆಗೆ ನಡೆದುಕೊಂಡ ಆಪ್ತತೆಯ ರೀತಿ, ನೀಡಿರುವ ಪ್ರಾಮುಖ್ಯತೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕಾವೇರಿಗೆ ಆಗಮಿಸಿದ ಅಮಿತ್ ಶಾ ಕಾರಿನಿಂದ ಇಳಿಯುತ್ತಲೇ ಯಡಿಯೂರಪ್ಪನವರು ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಲು ಮುಂದಾದರು. ಆಗ ಅಮಿತ್ ಶಾ ನನಗಲ್ಲ, ನಿಮ್ಮ ಮಗನಿಗೆ ನೀಡಿ ಎಂದು ಪಕ್ಕದಲ್ಲಿದ್ದ ವಿಜಯೇಂದ್ರ ಕಡೆಗೆ ಕೈತೋರಿಸಿದರು. ಒಂದು ಕ್ಷಣ ಯಡಿಯೂರಪ್ಪನವರಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ, ನಗುತ್ತಾ ಸುಮ್ಮನಾಗಿಬಿಟ್ಟರು.
ಆಗ ಅಮಿತ್ ಶಾ ಮತ್ತೊಮ್ಮೆ ವಿಜಯೇಂದ್ರಗೆ ಹೂವಿನ ಗುಚ್ಚ ಕೊಡಿ ಎಂದು ಮತ್ತೊಮ್ಮೆ ಸನ್ನೆ ಮಾಡಿದರು. ಆಗ ಯಡಿಯೂರಪ್ಪ ಹೂಗುಚ್ಛವನ್ನು ವಿಜಯೇಂದ್ರಗೆ ನೀಡಿದರು. ಅಷ್ಟೇ ಅಲ್ಲ ಅಮಿತ್ ಶಾ ವಿಜಯೇಂದ್ರರ ಬೆನ್ನುತಟ್ಟಿ ಆಲಂಗಿಸಿ ಫೋಸ್ ನೀಡಿದರು. ಕೊನೆಗೆ ಮತ್ತೊಂದು ಹೂಗುಚ್ಛವನ್ನು ಯಡಿಯೂರಪ್ಪ ಬಳಿಯಿಂದ ತೆಗೆದುಕೊಂಡರು.
ಬಿ.ವೈ. ವಿಜಯೇಂದ್ರ ಅವರಿಗೆ ನೀಡಿದರು. ಇಂದು ಬೆಳಗ್ಗೆ ಯಡಿಯೂರಪ್ಪನವರ ಕಾವೇರಿ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಖುದ್ದು ಬಿ ವೈ ವಿಜಯೇಂದ್ರ ಅವರೇ ಪೊಂಗಲ್, ಉಪ್ಪಿಟ್ಟು, ರಸ್ ಮಲಾಯ್ ಖಾದ್ಯಗಳನ್ನು ಬಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು.
ಅಮಿತ್ ಶಾ ಜತೆಗೆ ಯಡಿಯೂರಪ್ಪ ರಾಜ್ಯ ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಿದರು. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಉಭಯ ನಾಯಕರು ಸಮಾಲೋಚಿಸಿದ್ದು, ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಣತಂತ್ರದ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.
ಉಪಾಹಾರ ಕೂಟ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಅಮಿತ್ ಶಾ ನನ್ನನ್ನು ಮಾತನಾಡಿಸಿದ್ದು, ಆಪ್ತತೆಯಿಂದ ಬರಮಾಡಿಕೊಂಡಿದ್ದು, ಬೆನ್ನುತಟ್ಟಿದ್ದು ಶಕ್ತಿ ಮತ್ತು ಸ್ಪೂರ್ತಿ ಸಿಕ್ಕಂತಾಗಿದೆ. ಪಕ್ಷದ ಕೆಲಸ ಮಾಡಲು ಇನ್ನಷ್ಟು ಹುರುಪು ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಮಿತ್ ಶಾ ನಮ್ಮ ಮನೆಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ನಾಯಕರು ಚರ್ಚೆ ಮಾಡಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷರು, ಯಡಿಯೂರಪ್ಪನವರು ಸಮಾಲೋಚನೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅತಂತ್ರ ಸೃಷ್ಟಿಸಲು ಬಿಡಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನ ಮನೆ ಮನೆಗೆ ತಲುಪಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಬಿಎಸ್ ವೈ, ಅಮಿತ್ ಶಾ ನಡುವೆ ರಾಜಕೀಯ ಬಿಟ್ಟು ಬೇರೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಕೇಂದ್ರ ನಾಯಕರು ತೀರ್ಮಾನ ಮಾಡಬೇಕು. ಈಗಾಗಲೇ ನಾನು ಶಿಕಾರಿಪುರ ಕ್ಷೇತ್ರದಲ್ಲಿ ಒಂದು ಸುತ್ತು ಪ್ರವಾಸ ಮಾಡಿದ್ದೇನೆ. ಶೀಘ್ರದಲ್ಲೇ ಶಿಕಾರಿಪುರದಲ್ಲಿ ಮತ್ತೊಂದು ಸುತ್ತಿನ ಪ್ರವಾಸ ಆರಂಭಿಸುತ್ತೇನೆ.
ಯಡಿಯೂರಪ್ಪನವರನ್ನು ಕಡೆಗಣಿಸಿಲ್ಲ:
ನಮ್ಮ ತಂದೆ ಯಡಿಯೂರಪ್ಪನವರನ್ನು ಬಿಜೆಪಿ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ, ಪ್ರಾಮುಖ್ಯತೆ ನೀಡುತ್ತಿಲ್ಲ, ಅವರನ್ನು ಹೈಕಮಾಂಡ್ ಸೈಡ್ ಲೈನ್ ಮಾಡುತ್ತಿದೆ ಎಂಬಿತ್ಯಾದಿ ಮಾತುಗಳು, ಚರ್ಚೆಗಳೆಲ್ಲವೂ ಸುಳ್ಳು. ಯಡಿಯೂರಪ್ಪನವರಿಗೆ ಪಕ್ಷದಲ್ಲಿ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ