ಮಾಸ್ಕೊ:
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉತ್ತರ ಕೊರಿಯಾ ಅಧಿನಾಯಕ ಕಿಮ್ ಜಾಂಗ್ ಉನ್ ಜೊತೆ ರಷ್ಯಾದಲ್ಲಿ ಇದೇ ಏಪ್ರಿಲ್ ತಿಂಗಳ ಕೊನೆಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ರಷ್ಯಾ ಸರ್ಕಾರದ ಹೇಳಿಕೆ ಗುರುವಾರ ತಿಳಿಸಿದೆ.
ಪುಟಿನ್ ಮತ್ತು ಕಿಮ್ ಅವರು ಏ.24ರಂದು ವ್ಲಾಡಿವೊಸ್ತೊಕ್‌ನಲ್ಲಿ ಸಭೆ ನಡೆಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ವ್ಲಾಡಿವೊಸ್ತೊಕ್‌ನ ರೈಲ್ವೆ ನಿಲ್ದಾಣದಲ್ಲಿ ಉತ್ತರ ಕೊರಿಯಾ ಅಧಿಕಾರಿ ಕಿಮ್ ಅವರು ಬುಧವಾರ ಭದ್ರತಾ ಕ್ರಮಗಳನ್ನು ಪರಿಶೀಲಿಸುತ್ತಿರುವುದು ಕಂಡು ಬಂದಿತ್ತು.
ಉತ್ತರ ಚೀನಾ ಮಾರ್ಗವಾಗಿ ರೈಲಿನ ಮೂಲಕ ಕಿಮ್ ಅವರು ವ್ಲಾದಿವೊಸ್ತೊಕ್‌ಗೆ ತೆರಳಲಿದ್ದಾರೆ. ಅಮೆರಿಕ ಜತೆಗಿನ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಮಾತುಕತೆಗಳು ವಿಫಲವಾಗಿರುವ ನಡುವೆಯೂ ರಷ್ಯಾ ಮತ್ತು ಚೀನಾದೊಂದಿಗೆ ತನ್ನ ಬಲಿಷ್ಠ ಸಂಬಂಧಗಳನ್ನು ತೋರಿಸಿಕೊಳ್ಳಲು ಕಿಮ್ ಅವರು ರೈಲು ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಕೊರಿಯಾ ದ್ವೀಪಕಲ್ಪದಲ್ಲಿ ಅಮೆರಿಕ-ದಕ್ಷಿಣ ಕೊರಿಯಾ ಸೇನಾ ಸಮರಾಭ್ಯಾಸ ನಿಲ್ಲಿಸುವುದು ಹಾಗೂ ಆರ್ಥಿಕ ದಿಗ್ಬಂಧನಗಳನ್ನು ತೆಗೆದು ಹಾಕಿದರೆ ಇದಕ್ಕೆ ಪ್ರತಿಯಾಗಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಪ್ರಯತ್ನಿಸಲಾಗುವುದು ಎಂದು ಸಿಂಗಪುರದಲ್ಲಿ ಕಳೆದ ಜೂನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ನಡೆದ ಮಾತುಕತೆ ವೇಳೆ ಕಿಮ್ ಒಪ್ಪಿಕೊಂಡಿದ್ದರು.