ತುರುವೇಕೆರೆ:
ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಪಕ್ಷದ ಕೊಡುಗೆ ಏನಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಪ್ರಶ್ನಿಸಿದರು.
ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಗುರುವಾರ ತಾಲೂಕು ಬ್ಲಾಕ್ ಕಾಂಗ್ರೆಸ್‍ನಿಂದ ಆಯೋಜಿಸಿದ್ದ ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.40 ರಷ್ಟು ಸರ್ಕಾರ ಇದೆ ಎಂದು ರಾಜ್ಯದ ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಮೋದಿಯವರು ನಮ್ಮ ಸರ್ಕಾರವನ್ನು ಶೇ.10 ಪಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಈಗ ರಾಜ್ಯದ ಜನರಿಗೆ ಪ್ರಧಾನಿಯವರು ಏನು ಉತ್ತರ ನೀಡುತ್ತಾರೆ ಎಂದು ಕುಟುಕಿದರು.
ಕಳೆದ ಒಂದು ವರ್ಷದಿಂದ ಬೀದಿಯಲ್ಲಿ ರೈತರು ವಾಸ ಮಾಡಿಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಪ್ರಧಾನಿಗಳು 5 ರಾಜ್ಯಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆ ಅಷ್ಟೆ. ನಮ್ಮ ಅಭ್ಯರ್ಥಿ ಆರ್.ರಾಜೇಂದ್ರ ಈ ಬಾರಿ ನೂರಕ್ಕೆ ನೂರರಷ್ಟು ಗೆಲವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಒಗ್ಗಾಟ್ಟಾಗಿ ಕೆಲಸ ಮಾಡಿದರೇ ಎಲ್ಲಾ ಚುನಾವಣೆಗಳಲ್ಲೂ ಗೆಲವು ಸಾಧಿಸಬಹುದು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮಾತನಾಡಿ, ತುರುವೇಕೆರೆ ತಾಲ್ಲೂಕಿನ ಕಾಂಗ್ರೆಸ್ ಮುಖಂಡರೆಲ್ಲಾ ಒಗ್ಗೂಡಿ ನನ್ನನ್ನು ಆಶೀರ್ವದಿಸುವ ಮೂಲಕ ತಾಲ್ಲೂಕಿನಲ್ಲಿ ನನಗೆ ಮೊದಲ ಪ್ರಾಶಸ್ತದ ಮತ ನೀಡಿ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಷಡಕ್ಷರಿ, ಲಕ್ಕಪ್ಪ, ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಜಿಲ್ಲಾಧ್ಯಕ್ಷ ಷಪಿಅಹಮದ್, ಮುಖಂಡರಾದ ಚೌದ್ರಿರಂಗಪ್ಪ, ಗೀತಾರಾಜಣ್ಣ, ವಸಂತಕುಮಾರ್, ಸುಬ್ರಮಣಿ ಶ್ರೀಕಂಠೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್ ಮತ್ತು ನಾಗೇಶ್, ಗುಡ್ಡೇನಹಳ್ಳಿ ಮಂಜುನಾಥ್, ನಂಜುಂಡಪ್ಪ, ಎಂ.ಡಿ.ಮೂರ್ತಿ, ವೇಣುಗೋಪಾಲ್, ಮಾಳೆ ಕೃಷ್ಣಪ್ಪ, ಸ್ವರ್ಣಕುಮಾರ್ ಸೇರಿದಂತೆ ಪಪಂ ಹಾಗೂ ಗ್ರಾಪಂ ಸದಸ್ಯರುಗಳು, ಮುಖಂಡರುಗಳು ಪಾಲ್ಗೊಂಡಿದ್ದರು.
ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಗುರುವಾರ ತಾಲೂಕು ಬ್ಲಾಕ್ ಕಾಂಗ್ರೆಸ್‍ನಿಂದ ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಸದಸ್ಯರ ಸಭೆ ಏರ್ಪಡಿಸಲಾಗಿತ್ತು.
ಬೆಮೆಲ್‍ಕಾಂತರಾಜು ಕಚೇರಿಗೆ ಭೇಟಿ :
ಡಾ.ಜಿ.ಪರಮೇಶ್ವರ್, ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ ಮುದ್ದಹನುಮೇಗೌಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಷಫಿಅಹಮದ್, ಅಭ್ಯರ್ಥಿ ರಾಜೇಂದ್ರ ಅವರುಗಳು ಸಭೆಗು ಮುನ್ನ ಪಟ್ಟಣದಲ್ಲಿರುವ ವಿಧಾನ ಪರಿಷತ್ ಸದಸ್ಯ ಬೆಮೆಲ್‍ಕಾಂತರಾಜು ಅವರ ಕಚೇರಿಗೆ ಭೇಟಿ ನೀಡಿ ರಾಜಕೀಯ ಚರ್ಚೆ ಮಾಡಿದರು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಸಹ ಬೆಮೆಲ್ ಕಾಂತರಾಜು ಕಚೇರಿಗೆ ಭೇಟಿ ನೀಡಿ, ಔಪಚಾರಿಕವಾಗಿ ಮಾತನಾಡಿ ಸಭೆಗೆ ಹಾಜರಾಗದೆ ಹಾಗೆಯೆ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ