ಹಾಸನ:
ಸೌಜನ್ಯ ಪ್ರಕರಣದಲ್ಲಿ ಆರೋಪಿಗಳಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದು, ಇದೀಗ ನ್ಯಾಯಾಲಯವಷ್ಟೇ ಮರು ತನಿಖೆಗೆ ಆದೇಶಿಸಬಹುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಸೋಮವಾರ ಹೇಳಿದರು.
ಕುಟುಂಬ ಸಮೇತ ಅರಸೀಕೆರೆ ತಾಲೂಕಿನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ದರ್ಶನ ಪಡೆದ ಬಳಿಕ ಮಾತನಾಡಿದ ಸಚಿವರು, ಸಿಬಿಐ ತನಿಖೆಯ ಬಳಿಕವೂ ಇನ್ನೂ ಬಾಕಿ ಏನು ಉಳಿಯಲು ಸಾಧ್ಯ? ಈ ಹಂತದಲ್ಲಿ ರಾಜ್ಯ ಸರ್ಕಾರದ ನಿಲುವಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮರು ತನಿಖೆಗೆ ಆಗ್ರಹಿಸುವವರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿವೃದ್ಧಿ ಯೋಜನೆಗಳ ಮೇಲೆ ಗ್ಯಾರಂಟಿ ಯೋಜನೆಗಳ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಆರೋಪ ಕುರಿತು ಮಾತನಾಡಿ, ಎಸ್‌ಸಿ / ಎಸ್‌ಟಿಗಳು ಕೂಡ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಬರುವುದರಿಂದ ಎಸ್‌ಸಿಪಿ / ಟಿಎಸ್‌ಪಿ ಅನುದಾನವನ್ನು ಬಳಕೆಯಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಸೌಜನ್ಯಾ ಪ್ರಕರಣ ಸಂಬಂಧ ಮಾತನಾಡಿದ್ದರು. ಪ್ರತಿಭಟನೆ ನಡೆಸುತ್ತಿರುವವರ ಬೇಡಿಕೆಯನ್ನು ಸರ್ಕಾರ ಮರುಪರಿಶೀಲಿಸಲಿದೆ ಎಂದು ಹೇಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ