ಬೆಂಗಳೂರು:
ರಸ್ತೆಗಳಲ್ಲಿ ಅಪಾಯಕಾರಿಯಾಗಿ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ಎಲ್ಲೆಡೆ ಹೆಚ್ಚುತ್ತಿದೆ. ಇದರಿಂದಾಗಿ ಅದೆಷ್ಟೋ ಜೀವಗಳು ಪ್ರತಿನಿತ್ಯಂಬಂತೆ ಬಲಿಯಾಗುತ್ತಿವೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇನ್ನು ರೀಲ್ಸ್ ಹುಚ್ಚಿಗಾಗಿ ರಸ್ತೆಯಲ್ಲಿ ಅಪಾಯಕಾರಿ ಬೈಕ್ ಸ್ಟಂಟ್ ನಡೆಸುವ ಕ್ರೇಝ್ ಗೇನೂ ಕಡಿಮೆ ಇಲ್ಲ. ಅಂತಹುದ್ದೇ ಒಂದು ಶಾಕಿಂಗ್ ಘಟನೆಯ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋ ಬೆಂಗಳೂರಿನ ಬನಶಂಕರಿ 2ನೇ ಸ್ಟೇಜ್ ನಲ್ಲಿ ಇಬ್ಬರು ಯುವಕರು ಅಪಾಯಕಾರಿ ಬೈಕ್ ಸ್ಟಂಟ್ ನಲ್ಲಿ ತೊಡಗಿರುವ ವಿಡಿಯೋ ಎಂದು ತಿಳಿದುಬಂದಿದ್ದು, ಈ ಯುವಕರು ವಾಹನ ನಿಬಿಡ ರಸ್ತೆಯಲ್ಲಿ ಅಪಾಯಕಾರಿ ಬೈಕ್ ಸ್ಟಂಟ್ ನಡೆಸುತ್ತಾ ಹುಚ್ಚಾಟ ಮೆರೆದಿದ್ದಾರೆ.
ಈ ಅಪಾಯಕಾರಿ ಬೈಕ್ ಸ್ಟಂಟ್ ಹುಚ್ಚಾಟದ ವಿಡಿಯೋವನ್ನು @karnatakaportfolio ಎಂಬ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಯುವಕರು ಅಪಾಯಕಾರಿ ವ್ಹೀಲಿಂಗ್ ಹುಚ್ಚಾಟ ನಡೆಸುತ್ತಿದ್ದ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದವರು ಯುವಕರಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದಾಗ ಆ ಯುವಕರು ಇವರತ್ತಲೇ ಗುರಾಯಿಸಿದ್ದಾರೆ.
ಕೆಎ 01 ವಿ 5613 ನೋಂದಣಿಯ ಸ್ಕೂಟರ್ ನಲ್ಲಿ ಸಣ್ಣಪ್ರಾಯದ ಯುವಕರಿಬ್ಬರು ಬನಶಂಕರಿ 2ನೇ ಹಂತದ ಮೊನೋ ಟೈಪ್ ಬಳಿ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಅಪಾಯಕಾರಿ ವ್ಹೀಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದು, ಇವರು ಹೀಗೆ ಮಾಡುವ ಮೂಲಕ ತಮ್ಮ ಜೀವವನ್ನು ಮಾತ್ರವಲ್ಲದೇ ಇತರರ ಪ್ರಾಣಕ್ಕೂ ಅಪಾಯಕಾರಿಯಾಗುವ ರೀತಿಯಲ್ಲಿ ವರ್ತಿಸಿದ್ದಾರೆ. ಇಂತಹ ವಾಹನ ನಿಬಿಡ ರಸ್ತೆಗಳಲ್ಲಿ ಮಕ್ಕಳು ಇಂತಹ ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವುದು ಅವರ ಜೀವಕ್ಕೇ ಅಪಾಯಕಾರಿʼ ಎಂದು ಈ ವಿಡಿಯೋ ಶೇರ್ ಮಾಡವ ಸಂದರ್ಭದಲ್ಲಿ ಬರೆಯಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆ, ಬೆಂಗಳೂರು ನಗರದಲ್ಲಿ ರಸ್ತೆ ಸುರಕ್ಷತ ಮತ್ತು ರಸ್ತೆ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಹಲವರ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ವಿಡಿಯೋಗ ಪ್ರತಿಕ್ರಿಯಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು, ಇದನ್ನು ಬನಶಂಕರಿ ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿದ್ದು ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಡಿಯೋ ನೋಡಿದ ಹಲವು ನೆಟ್ಟಿಗರು ಈ ಹುಡುಗರ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
“ಬೆಂಗಳೂರು ಸಂಚಾರ ಪೊಲೀಸರು ಈ ಸ್ಕೂಟರನ್ನು ವಶಪಡಿಸಿಕೊಂಡು ಆ ಹುಡುಗರ ಹೆತ್ತವರಿಗೆ ದಂಡ ವಿಧಿಸಬೇಕು, ಎಷ್ಟು ದಂಡ ವಿಧಿಸಬೇಕೆಂದರೆ, ಆ ಹೆತ್ತವರು ಆ ಹುಡುಗರಿಗೆ ಪ್ರತಿನಿತ್ಯ ಹೊಡೆಯುವಷ್ಟು..!ʼ ಎಂದು ಒಬ್ಬ ಎಕ್ಸ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ. “ಈ ರೀತಿಯ ವಾಹನ ಸವಾರರು ಪಾದಚಾರಿಗಳು ಮತ್ತು ಬೇರೆ ವಾಹನ ಸವಾರರ ಪಾಲಿಗೆ ಅಪಾಯಕಾರಿಗಳಾಗಿರುವುದರಿಂದ ಇವರ ವಿರುದ್ಧ ದಯವಿಟ್ಟು ಕ್ರಮ ಕೈಗೊಳ್ಳಿʼ ಎಂದು ಇನ್ನೊಬ್ಬರು ಕಮಂಟ್ ಮಾಡಿದ್ದಾರೆ. ಈ ರೀತಿಯ ಹುಚ್ಚಾಟಗಳನ್ನು ನಡೆಸುವವರ ವಾಹನಗಳನ್ನು ವಶಪಡಿಸಿಕೊಂಡು, ಅಂತವರ ಡ್ರೈವಿಂಗ್ ಲೈಸನ್ಸನ್ನು ರದ್ದುಪಡಿಸಬೇಕೆಂಬ ಆಗ್ರಹವೂ ಸಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.








