ಯಾವ ಕ್ಷೇತ್ರದಲ್ಲಿ ….. ಯಾರಿಗೆ ಮಣೆ ಹಾಕಲಿದೆ ಬಿಜೆಪಿ….!

ಬೆಂಗಳೂರು:

     ವಿಧಾನಸಭಾ ಚನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಆಡಳಿತಾರೂಢ ಬಿಜೆಪಿಯು ತನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
    
    ಭಾನುವಾರ ಸಂಜೆ ದೆಹಲಿಯಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದರೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಸಭೆಯಲ್ಲಿ ಮೋದಿ ಸೇರಿದಂತೆ ಹಲವು  ನಾಯಕರು ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಲವು ಸಲಹೆ ಸೂಚನೆಗಳನ್ನು ನೀಡಿರುವದರಿಂದ ಅವುಗಳನ್ನು ಮುಂದಿಟ್ಟುಕೊಂಡು ಇಂದು ಮತ್ತೊಮ್ಮೆ ಹಿರಿಯ ನಾಯಕರ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ಪಕ್ಷದ ಅಲಿಖಿತ ನಿಯಮದಂತೆ 75 ವರ್ಷ ವಯಸ್ಸಾದವರಿಗೆ ಟಿಕೆಟ್ ನೀಡಬೇಕೆ ಅಥವಾ ಬೇಡವೇ? ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್ ನೀಡಬೇಕೇ ಅಥವಾ ಗೆಲುವಿನ ಸಾಧ್ಯತೆ ನೋಡಿ ಸಡಿಲಿಕೆ ಮಾಡಬೇಕೇ? ಆಡಳಿತ ವಿರೋಧಿ ಅಲೆ ಹಿನ್ನೆಲೆಯಲ್ಲಿ ಹಲವು ಹಾಲಿ ಶಾಸಕರನ್ನು ಕೈಬಿಡಬೇಕೇ ಅಥವಾ ಅವರಿಗೇ ಮಣೆ ಹಾಕಬೇಕೆ ಎಂಬಿತ್ಯಾದಿ ಅಂಶಗಳ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ಕೆಲ ಗೊಂದಲಗಳು ಮುಂದುವರೆದಿದೆ. ಈ ಗೊಂದಲಗಳಿಗೆ ಸೋಮವಾರ ಪರಿಹಾರ ಕಂಡುಕೊಂಡ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

     ಈ ಬಾರಿಯ ಚುನಾವಣೆಯಲ್ಲಿ ಗುಜರಾತ್ ರಾಜ್ಯದ ಮಾದರಿಯನ್ನು ಅನುಸರಿಸಿ ಕನಿಷ್ಠ 25 ಮಂದಿ ಹಾಲಿ ಶಾಸಕರ ಕೈಬಿಡಲು ನಿರ್ಧರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಯಕ ಬಂಡಾಯ ಎದುರಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಗುಜರಾತ್‌ನಲ್ಲಿ, ಡಿಸೆಂಬರ್ 2022 ರ ಚುನಾವಣೆ ವೇಳೆ ಪಕ್ಷವು ಸುಮಾರು 40 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು.

    ಗುಜರಾತ್ ರಾಜ್ಯದಲ್ಲಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಣಕ್ಕಿಳಿದಿದ್ದ ಬಹುತೇಕ ಹೊಸಬರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಯುವ ಮತ್ತು ಹೊಸ ಮುಖಗಳಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತನೆ ನಡೆಸುತ್ತಿದೆ.

 

    ಗುಜರಾತ್ ಮಾದರಿ ಕರ್ನಾಟಕದಲ್ಲಿ ಕೆಲಸ ಮಾಡದಿರಬಹುದು ಎಂದು ಈ ಮೊದಲು ಭಾವಿಸಲಾಗಿತ್ತು. ಆದರೆ ಪಕ್ಷವು 100 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಬಹುದು ಎಂಬ ಸಮೀಕ್ಷೆಗಳ ಭವಿಷ್ಯ, ತಜ್ಞರ ಸಲಹೆಗಳ ಬಳಿಕ ಪಕ್ಷದ ವರಿಷ್ಠರು ಕೆಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ.

    ಕೆಲವು ಕ್ಷೇತ್ರಗಳಲ್ಲಿ ಪಕ್ಷದ ವರಿಷ್ಠರು ಬದಲಾವಣೆಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ಬಂಡಾಯಗಳು ಆರಂಭವಾಗುವ ಸಾಧ್ಯತೆಗಳಿವೆ. ಆದರೆ, ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಪಕ್ಷದ ಉದ್ಧೇಶವಾಗಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

    ಕುತೂಹಲಕಾರಿ ವಿಚಾರವೆಂದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸ ಮುಖಗಳನ್ನು ಪರಿಚಯಿಸುವ ಬಗ್ಗೆ ಪಕ್ಷದ ಕಾರ್ಯಕರ್ತರೂ ಕೂಡ ಉತ್ಸುಕರಾಗಿರುವುದು. ಬಿಜೆಪಿಯನ್ನು ಕೇಡರ್ ಆಧಾರಿತ ಪಕ್ಷ ಎಂದು ಹೇಳಲಾಗುತ್ತದೆ. ನಮ್ಮ ಕೆಲವು ಶಾಸಕರು 70 ವರ್ಷ ದಾಟಿ ಸಚಿವರಾಗಿ ಸೇವೆ ಸಲ್ಲಿಸಿದ್ದರೂ ಚುನಾವಣೆಗೆ ಸ್ಪರ್ಧಿಸಲು ಬಯಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ ನಮಗೆ ಸಂತೋಷವಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದರು.

    ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ಅವರಿಗೆ 50 ವರ್ಷ ವಯಸ್ಸಾಗಿದ್ದು,  ಎಚ್‌ಡಿ ದೇವೇಗೌಡ ಅವರು ರು ವಿರೋಧ ಪಕ್ಷದ ನಾಯಕರಾದಾಗ ಅವರಿಗೆ 39 ವರ್ಷ ವಯಸ್ಸಾಗಿತ್ತು. ಹೀಗಾಗಿ ಯುವಕರನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

    ಶನಿವಾರ ಮತ್ತು ಭಾನುವಾರ ನವದೆಹಲಿಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರದವರು ಭಾಗವಹಿಸಿದ್ದರು. ಸಚಿವರು ಪ್ರಹ್ಲಾದ್ ಜೋಶಿ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap