ಲಖನೌ:
ತಾಯಿಯಾದವಳು ತನ್ನ ಮಕ್ಕಳ ರಕ್ಷಣೆಗಾಗಿ ಏನು ಬೇಕಾದರೂ ಮಾಡುತ್ತಾಳೆ ಎಂಬುದಕ್ಕೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಘಟನೆಯೇ ಸಾಕ್ಷಿ. ಇಲ್ಲಿನ ಮಹಿಳೆಯೊಬ್ಬಳು ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆಯನ್ನು ಸ್ಥಳದಲ್ಲಿದ್ದ ಜನರು ರೆಕಾರ್ಡ್ ಮಾಡಿದ್ದು, ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಮಹಿಳೆ ವ್ಯಕ್ತಿಯನ್ನು ಚಪ್ಪಲಿಯಿಂದ ಹೊಡೆಯುವುದು ಸೆರೆಯಾಗಿದೆ. ವ್ಯಕ್ತಿ ತನ್ನ ಸೈಕಲ್‍ನಲ್ಲಿ ಹೋಗುವಾಗ ತಡೆದು ನಿಲ್ಲಿಸಿದ ಮಹಿಳೆ ಚಪ್ಪಲಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಆತನ ಕೈ ಹಿಡಿದುಕೊಂಡು ಆತನ ಕೆನ್ನೆಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ. ಪೆಟ್ಟು ತಿಂದ ವ್ಯಕ್ತಿ ಮಹಿಳೆಯ ಬಳಿ ತನ್ನನ್ನು ಬಿಟ್ಟುಬಿಡುವಂತೆ ಬೇಡಿಕೊಂಡಿದ್ದಾನೆ.
ಹಮೀರ್‌ಪುರದ ಮುಸ್ಕಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆಯುವುದಾಗಿ ವರದಿಯಾಗಿದೆ. ವೈರಲ್ ಆಗಿರುವ ವಿಡಿಯೊವನ್ನು ಗಮನಿಸಿದ ಪೊಲೀಸರು ಯುವಕನನ್ನು ಗುರುತಿಸಿ ಬಂಧಿಸಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಆ ವ್ಯಕ್ತಿ ಹುಡುಗಿಗೆ ಕಿರುಕುಳ ನೀಡುತ್ತಿದ್ದರಿಂದ ಹುಡುಗಿಯ ತಾಯಿ ಕಠಿಣ ಕ್ರಮ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. ಘಟನೆಯ ಬಗ್ಗೆ ಹುಡುಗಿ ತನ್ನ ತಾಯಿಗೆ ದೂರು ನೀಡಿದ್ದಾಳೆ. ನಂತರ ಮಹಿಳೆ ತನ್ನ ಮಗಳನ್ನು ಆ ಸ್ಥಳಕ್ಕೆ ಕರೆದೊಯ್ದಳು. ಅಲ್ಲಿ ಆ ವ್ಯಕ್ತಿಯನ್ನು ಮಗಳು ತೋರಿಸಿದಾಗ ಮಹಿಳೆ ಆ ವ್ಯಕ್ತಿಯನ್ನು ಹಿಡಿದು ರಸ್ತೆಯ ಮಧ್ಯದಲ್ಲಿ ಥಳಿಸಿದ್ದಾಳೆ.
ಏಟು ತಿಂದ ಯುವಕನನ್ನು ಬಂದಾ ನಿವಾಸಿ ಶಿವ ಕುಮಾರ್ ಸಾಹು ಎಂದು ಗುರುತಿಸಲಾಗಿದ್ದು, ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹುಡುಗಿ ಅಥವಾ ಆಕೆಯ ಕುಟುಂಬ ಸದಸ್ಯರು ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯುವಕನನ್ನು ವಶಕ್ಕೆ ಪಡೆದು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗಿದೆ. ಹುಡುಗಿ ಅಥವಾ ಆಕೆಯ ಕುಟುಂಬ ಸದಸ್ಯರಿಂದ ದೂರು ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
