ರಾಜ್ಯಕ್ಕೆ ಯಾವ ಕೊಡುಗೆ ಕೊಡಲಾಗಿದೆಯೆಂದು ರೋಡ್ ಶೋ ಮಾಡುತ್ತೀರಿ : ಸಿದ್ದರಾಮಯ್ಯ

ತುಮಕೂರು :

     ಸನ್ಮಾನ್ಯ ನರೇಂದ್ರ ಮೋದಿಯವರೆ, ಬೆಂಗಳೂರು- ಮೈಸೂರು ಹೆದ್ದಾರಿ ಉದ್ಘಾಟಿಸುವ ನೆಪದಲ್ಲಿ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದೀರಿ. ತಮಗೆ ಸ್ವಾಗತ. ತಮ್ಮ ಪಕ್ಷಕ್ಕೆ ಸೋಲುವ ಭೀತಿ ಹುಟ್ಟಿಕೊಂಡಿದೆ. ಹಾಗಾಗಿ ತಾವು ದೇಶದ ಪ್ರಧಾನಿ ಎಂಬುದನ್ನು ಮರೆತು ಚುನಾವಣೆಗಳನ್ನು ನಡೆಸುವುದಕ್ಕಾಗಿಯೆ ಬಿಜೆಪಿಯು ತಮ್ಮನ್ನು ನೇಮಿಸಿದೆ ಎಂಬಂತೆ ವರ್ತಿಸುತ್ತಿದ್ದೀರಿ.

    ಖೊ ಖೊ ಆಟದಲ್ಲಿ ಖೊಕ್ ಕೊಡುವ ಹಾಗೆ ತಾವು ಮತ್ತು ತಮ್ಮ ಗೃಹ ಸಚಿವರು ಆಡುತ್ತಿದ್ದೀರಿ. ಅಮಿತ್ ಶಾ ಅವರು ಡೆಲ್ಲಿಗೆ ಬಂದು ನಿಮಗೆ ಖೊಕ್ ಕೊಟ್ಟ ಕೂಡಲೆ ನೀವು ಕರ್ನಾಟಕಕ್ಕೆ ಓಡಿ ಬರುತ್ತೀರಿ, ನೀವು ಹೋಗಿ ಅವರಿಗೆ ಖೊಕ್ ಕೊಟ್ಟ ಕೂಡಲೆ ಅವರು ಹಾರಿ ಬರುತ್ತಾರೆ. ನಿಮ್ಮ ಈ ವರ್ತನೆಯಂತೂ ಚರಿತ್ರೆಯಲ್ಲಿ ದಯನೀಯವಾಗಿ ದಾಖಲಾಗುತ್ತದೆ ಎಂಬುದನ್ನು ಮರೆಯಬೇಡಿ.

    ತಾವು ಹಾಗೂ ತಮ್ಮ ಇಡೀ ಸಚಿವ ಸಂಪುಟ ಹಾಗೂ ಕರ್ನಾಟಕ ದಕ್ಷಿಣದ ರಾಜ್ಯಗಳ ಜನರು ಕಟ್ಟುವ ತೆರಿಗೆಯಲ್ಲಿ ಸಿಂಹಪಾಲು ಪಡೆದು ಆಡಳಿತ ನಡೆಸುತ್ತಿರುವ ನಿಮ್ಮ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರನ್ನೂ ಕರೆ ತನ್ನಿ ಅಡ್ಡಿಯಿಲ್ಲ. ತಾವು ಬಂದಷ್ಟೂ ಬಂದು ಇಲ್ಲಿ ಸುಳ್ಳು ಹೇಳಿದಷ್ಟೂ ನಮಗೆ ಅನುಕೂಲವೆ.

    ಯಾಕೆಂದರೆ ತಮ್ಮ ಜನಪ್ರಿಯತೆಯು ನೆಲಕಚ್ಚಿ ಹೋಗಿದೆ. ಜನರು ಎಷ್ಟು ದಿನ ಸುಳ್ಳು ಮತ್ತು ಮೋಸದ ಮಾತುಗಳನ್ನು ಕೇಳಿಸಿಕೊಳ್ಳಲು ಸಾಧ್ಯ? ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂದು ಕಿಂದರ ಜೋಗಿಯ ಹಿಂದೆ ಹೋದ ಗೃಹಿಣಿಗೆ ಈತ ಕೇವಲ ಮಾತುಗಾರ, ಮೋಸಗಾರ ಮತ್ತು ಸುಳ್ಳುಗಾರನೆ ಹೊರತು ಬೇರೇನೂ ಅಲ್ಲ ಎಂದು ಮನವರಿಕೆಯಾದ ಹಾಗೆ ಜನರಿಗೆ ಸತ್ಯ ಏನೆಂದು ಗೋಚರವಾಗುತ್ತಿದೆ.

   ತಾವು ಮತ್ತು ತಮ್ಮ ಗೃಹ ಸಚಿವರಾದ ಅಮಿತ್ ಶಾ ಅವರು ಪದೇ ಪದೇ ಕರ್ನಾಟಕಕ್ಕೆ ಬರಲು ಪ್ರಾರಂಭಿಸಿದ ಮೇಲೆ ಕನ್ನಡದ ನ್ಯೂಸ್ ಚಾನೆಲ್‌ಗಳ ಟಿಆರ್‌ಪಿ ತಳ ಕಚ್ಚುತ್ತಿದೆ. 2023 ರ 4ನೇ ವಾರದಲ್ಲಿ ಎಲ್ಲ ಟಿವಿ ನ್ಯೂಸ್ ಚಾನೆಲ್‌ಗಳ ಟಿಆರ್‌ಪಿ 250 ರಷ್ಟು ಇದ್ದದ್ದು 9ನೇ ವಾರಕ್ಕೆ ಬರುವ ವೇಳೆಗೆ 244 ಕ್ಕೆ ಕುಸಿದಿದೆ. ಬಹುತೇಕ ನ್ಯೂಸ್ ಚಾನೆಲ್‌ಗಳಲ್ಲಿ ನಿಮ್ಮ ಭಜನೆ ನಡೆಯುತ್ತಿರುವುದನ್ನು ಮನಗಂಡು ಜನರು ನ್ಯೂಸ್ ನೋಡುವುದನ್ನೆ ಕೈ ಬಿಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ತಮ್ಮ ಜನಪ್ರಿಯತೆ ಕುಸಿದು ತಳ ಮುಟ್ಟಿದೆ. ಜನರ ಕಿವಿಗೆ ಅದೆಷ್ಟು ಸಾರಿ ನೀವುಗಳು ಹೂ ಇಡಲು ಸಾಧ್ಯ ಹೇಳಿ?

    ರಾಜ್ಯದ ಕನಿಷ್ಠ 4.5 ಲಕ್ಷ ಮನೆಗಳಲ್ಲಿ ಕೋವಿಡ್‌ನಿಂದ ಮನೆಯ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಜನರು ಬದುಕುವುದಕ್ಕೆ ಸಾಧ್ಯವಿಲ್ಲದಷ್ಟು ಬೆಲೆಗಳು ಏರಿಕೆಯಾಗಿವೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕಾರಣಕ್ಕೆ ಜನರ ಜೀವನ ಮುಳ್ಳಿನ ಮೇಲಿನ ನಡಿಗೆಯಂತಾಗಿದೆ. ವಿದ್ಯಾವಂತ ಯುವಕ, ಯುವತಿಯರ ನಿರುದ್ಯೋಗದ ಪ್ರಮಾಣ ತೀವ್ರವಾಗಿ ಹೆಚ್ಚಳ ಕಂಡಿದೆ. ಹೀಗಿರುವಾಗ ಮತ್ತೆ ಮತ್ತೆ ನೀವು ಕುಟ್ಟುವ ತೌಡಿನಂತಹ ಮಾತುಗಳನ್ನು ಜನರು ಎಷ್ಟು ಬಾರಿ ಕೇಳಿಯಾರು?

    ನಾನು ಹೊಸದಾದ ಪ್ರಶ್ನೆಗಳನ್ನು, ವಿಷಯಗಳನ್ನು ಕೇಳುತ್ತಲೆ ಇರುತ್ತೇನೆ. ಅವುಗಳಿಗೆ ಉತ್ತರವನ್ನು ನೀವು ನೀಡಬೇಕು. ಏಕೆಂದರೆ ನೀವು ಕರ್ನಾಟಕದ ಋಣದಲ್ಲಿದ್ದೀರಿ. 4.75 ಲಕ್ಷ ಕೋಟಿಗಳನ್ನು ರಾಜ್ಯದಿಂದ ಲೂಟಿ ಮಾಡಿ ನಮಗೆ ಕೇವಲ 37 ಸಾವಿರ ಕೋಟಿ ಮಾತ್ರ ತೆರಿಗೆ ಪಾಲು ಕೊಡುತ್ತಿದ್ದೀರಿ. ಉತ್ತರ ಪ್ರದೇಶದ ಈ ಬಾರಿಯ ಬಜೆಟ್ ಗಾತ್ರ 6 ಲಕ್ಷದ 9 ಸಾವಿರ ಕೋಟಿ. ಇದರಲ್ಲಿ ಕೇಂದ್ರ ಸರ್ಕಾರ ಕೊಡುವ ತೆರಿಗೆ ಪಾಲು 1.83 ಲಕ್ಷ ಕೋಟಿ ರೂಪಾಯಿಗಳು. ಅವರ ಬಜೆಟ್‌ನ ಶೇ.33 ರಷ್ಟನ್ನು ತೆರಿಗೆ ಪಾಲಿನ ಮೂಲಕವೆ ನೀಡುತ್ತಿದ್ದೀರಿ. ನಮ್ಮ ರಾಜ್ಯದ ಬಜೆಟ್ ಗಾತ್ರ 3.09 ಲಕ್ಷ ಕೋಟಿ ನಮ್ಮ ರಾಜ್ಯಕ್ಕೆ ನೀಡುವ ತೆರಿಗೆ ಪಾಲು 37 ಸಾವಿರ ಕೋಟಿ. ಶೇ.11.5 ರಷ್ಟು ಮಾತ್ರ. ನಿಮ್ಮ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ಜನರು ಹಸಿವು, ಅಪೌಷ್ಠಿಕತೆಯಿಂದ, ಅಭಿವೃದ್ಧಿಹೀನತೆಯಿಂದ ನರಳ ಬೇಕಾಗಿದೆ. ಸಾಲದ ಶೂಲಕ್ಕೆ ಸಿಕ್ಕ ಮೀನಿನಂತಾಗಿದೆ.

    2018 ರ ಮಾರ್ಚ್ ವೇಳೆಗೆ ಗುಜರಾತಿನ ಸಾಲ 2.69 ಲಕ್ಷ ಕೋಟಿಗಳಷ್ಟಿತ್ತು. ಕರ್ನಾಟಕದ ಸಾಲ 2.45 ಲಕ್ಷ ಕೋಟಿಗಳಷ್ಟು ಇತ್ತೆಂದು ಕೇಂದ್ರ ಸರ್ಕಾರವೆ ಉತ್ತರ ಕೊಟ್ಟಿದೆ. ಆದರೆ ಈಗ ರಾಜ್ಯದ ಸಾಲ 6 ಲಕ್ಷ ಕೋಟಿ ದಾಟುತ್ತಿದೆ. ಗುಜರಾತಿನ ಸಾಲ 3.4 ಲಕ್ಷ ಕೋಟಿಗಳಷ್ಟಿದೆ. ಈ 3.4 ಲಕ್ಷ ಕೋಟಿಯೆ ಹೆಚ್ಚಾಯಿತೆಂದು ಅಲ್ಲಿನ ಅರ್ಥಶಾಸ್ತçಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 2018 ರಲ್ಲಿ ನಮ್ಮ ರಾಜ್ಯಕ್ಕಿಂತ 24 ಸಾವಿರ ಕೋಟಿಗಳಷ್ಟು ಹೆಚ್ಚು ಸಾಲ ಮಾಡಿದ್ದ ರಾಜ್ಯ ಈಗ ನಮಗಿಂತಲೂ 2.6 ಲಕ್ಷ ಕೋಟಿ ಕಡಿಮೆ ಸಾಲ ಮಾಡಲು ನಿಮ್ಮ ಸರ್ಕಾರ ಕರ್ನಾಟಕಕ್ಕೆ ಮಾಡಿದ ದ್ರೋಹವೆ ಕಾರಣ.

    ನೀವು ಗುಜರಾತು, ರಾಜಸ್ತಾನ, ಬಿಹಾರ, ಉತ್ತರಪ್ರದೇಶ ರಾಜ್ಯಗಳಿಗೆ ಈಗ ಕೊಡುತ್ತಿರುವುದಕ್ಕಿಂತ ಹೆಚ್ಚು ಕೊಡಬೇಕೆಂದು ನಾನೂ ಒತ್ತಾಯಿಸುತ್ತೇನೆ. ಅದನ್ನು ನಿಮ್ಮ ಪಾಲಿನಲ್ಲಿ ಕೊಡಿ. 45 ಲಕ್ಷ ಕೋಟಿಯ ಕೇಂದ್ರದ ಬಜೆಟ್‌ನಲ್ಲಿ ರಾಜ್ಯಗಳಿಗೆ ಕೊಡುವುದು 11 ಲಕ್ಷ ಕೋಟಿ ಮಾತ್ರ. ಉಳಿದ 34 ಲಕ್ಷ ಕೋಟಿ ನಿಮ್ಮ ಬಳಿಯೇ ಉಳಿಯುತ್ತದೆ ಅದರಲ್ಲಿ ಇನ್ನೂ ಯಥೇಚ್ಛವಾಗಿ ಕೊಡಿ ಯಾರು ಬೇಡ ಅಂದರು. ಕರ್ನಾಟಕದಂತಹ ರಾಜ್ಯಗಳು ಕಾಮಧೇನುಗಳೆಂದು ಹಾಲು ಹಿಂಡಿಕೊಳ್ಳುವ ಬದಲು ಕೆಚ್ಚಲು ಕೊಯ್ದು ರಕ್ತ ಹೀರುವ ಕೆಲಸ ಮಾಡುತ್ತಿದ್ದೀರಿ ಹಾಗಾಗಿ ನೀವು ನಮ್ಮ ಋಣದಲ್ಲಿದ್ದೀರಿ. ಆದ್ದರಿಂದ ನಮ್ಮ ಜನರ ಪ್ರಶ್ನೆಗಳಿಗೆ ನೀವು ಉತ್ತರ ಕೊಡಲೇಬೇಕು.

    ನೀವು ಬರುತ್ತೀರೆಂದು ಮಂಡ್ಯ ನಗರದಲ್ಲಿನ ಮರಗಳನ್ನೆಲ್ಲ ಕಡಿದು ಹಾಕಲಾಗಿದೆ. ಮರ ಇದ್ದರೆ ಯಾವ ತೊಂದರೆಯಾಗುತ್ತಿತ್ತು ನಿಮಗೆ. ಆ ಮರಗಳ ನೆರಳಿನಲ್ಲಿಯೆ ಅನೇಕ ಗಣ್ಯರು ಇದುವರೆಗೆ ಓಡಾಡಿದ್ದರಲ್ಲವೆ? ಅನೇಕ ಜನರಿಗೆ ಬದುಕು ಕೊಟ್ಟಿದ್ದ ಮರಗಳನ್ನೆ ಕತ್ತರಿಸಿ ಹಾಕಿದ್ದಾರೆ.

1. ದೇಶದ ಜಿಡಿಪಿಗೆ ಬೆಂಗಳೂರಿನ ಕೊಡುಗೆ ಅಪಾರವಾದುದು. 2022 ರಲ್ಲಿ ಸುಮಾರು 10 ಲಕ್ಷ ಕೋಟಿಗೂ ಹೆಚ್ಚು ಅಮೂಲ್ಯವಾದ ಕೊಡುಗೆಯನ್ನು ನೀಡಿದೆ. ಹೈದರಾಬಾದ್ ಮತ್ತು ಚೆನ್ನೈಗಳಿಗಿಂತ 2.5 ಯಿಂದ 3.5 ಲಕ್ಷ ಕೋಟಿಗಳಿಗೂ ಹೆಚ್ಚಿನ ಕೊಡುಗೆಯನ್ನು ರಾಷ್ಟ್ರೀಯ ಜಿಡಿಪಿಗೆ ಕೊಡುತ್ತಿದೆ. ಇಷ್ಟೆಲ್ಲ ಇದ್ದರೂ ಕೇಂದ್ರ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಏನು ಕೊಟ್ಟಿದೆ?

2. 2035 ರ ವೇಳೆಗೆ ಬೆಂಗಳೂರಿನ ಆರ್ಥಿಕತೆ 300 ಬಿಲಿಯನ್ ಡಾಲರುಗಳಿಗೆ ಏರಿಕೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಈ ನಗರದ ಮೇಲೆ ಜನಸಂಖ್ಯೆಯ ಒತ್ತಡವೂ ಹೆಚ್ಚಾಗುತ್ತಿದೆ. ಅದರ ಒಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರವಾಗಿ ಬೆಳೆಯಲಿದೆ. ಇದನ್ನೆಲ್ಲ ಮನಗಂಡೆ ನಾವು ಮೇಕೆದಾಟು ಯೋಜನೆಯನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೇವೆ.

     ಆದರೆ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಯನ್ನು ಕಾಲ ಕೆಳಗೆ ಹಾಕಿಕೊಂಡು ಕೂತಿದೆ. ಮೇಕೆದಾಟು; ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದ ಜಲ ಸಚಿವರು ನೀಡಿರುವ ಉತ್ತರ ಪರಮ ಧಾಷ್ಟö್ಯದಿಂದ ಕೂಡಿದೆ. “ DPR of the project was submitted by Government of Karnataka to CWC …However, since the DPR has not yet been accepted by CWMA, appraisal process of the project has not been taken up by CWC””. ಎಂದು ಉತ್ತರ ನೀಡಿದೆ.

    2018 ರಿಂದಲೂ ಡಿಪಿಆರ್ ಪೆಂಡಿಂಗ್ ಇದೆ. ಕೇಂದ್ರ ಜಲ ಆಯೋಗ ಮತ್ತು ಕಾವೇರಿ ನದಿ ನೀರು ಪ್ರಾಧಿಕಾರವು ಕರ್ನಾಟಕದ ಡಿಪಿಆರ್ ಅನ್ನು ಮುಟ್ಟಿಯೆ ಇಲ್ಲ ಎಂದು ಉತ್ತರ ಕೊಟ್ಟು ಕರ್ನಾಟಕಕ್ಕೆ ಅವಮಾನ ಮಾಡಿದೆ. ಇಷ್ಟಿದ್ದರೂ ನೀವು ಯಾವ ಮುಖ ಹೊತ್ತು ರೋಡ್ ಶೋ ಮಾಡುತ್ತೀರಿ ಮೋದಿಯವರೆ? ಬೆಂಗಳೂರು ದುಡಿಯುವ ಸಂಪತ್ತು ಬೇಕು ನಿಮಗೆ ಆದರೆ ಬೆಂಗಳೂರಿಗೆ ಕುಡಿಯುವ ನೀರು ಕೊಡಲು ನಿಮ್ಮಿಂದ ಆಗುತ್ತಿಲ್ಲ. ನಾಡಿನ ಲಕ್ಷಾಂತರ ಜನರು ಮೇಕೆದಾಟು ನಮ್ಮ ಜೊತೆ ಪಾದಯಾತ್ರೆ ಮಾಡಿದ್ದಾರೆ. ನಿಮ್ಮ ಅಸೀಮ ನಿರ್ಲಕ್ಷö್ಯದಿಂದ ನಾಡು ವಿಪರೀತ ಅವಮಾನ ಅನುಭವಿಸುತ್ತಿದೆ.

3. ಮೆಟ್ರೊ ಯೋಜನೆ ಕಾಂಗ್ರೆಸ್ ಸರ್ಕಾರದ ಕೊಡುಗೆ. ಈ ಯೋಜನೆ ಮುಂದುವರೆದುಕೊAಡು ಹೋಗುತ್ತಿದೆಯೆ ಹೊರತು ಇದರಲ್ಲಿ ಮೋದಿ ಸರ್ಕಾರದ ವಿಶೇಷ ಕೊಡುಗೆ ಏನೂ ಇಲ್ಲ.

4. ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದಲ್ಲಿ ಯುಪಿಎ ಸರ್ಕಾರದ ಕೊಡುಗೆ ದೊಡ್ಡದಿದೆ. ಯುಪಿಎ ಸರ್ಕಾರ ದಿನಾಂಕ:04-03-2014 ರಂದು ಬೆಂಗಳೂರಿನಿಂದ ವಯಾ ರಾಮನಗರ, ಮಂಡ್ಯ, ಮೈಸೂರು, ಹುಣಸೂರು, ಕುಶಾಲನಗರ, ಮಡಿಕೇರಿ ಮತ್ತು ಬಂಟ್ವಾಳದವರೆಗೆ ಒಟ್ಟು 376 ಕಿ.ಮೀ.ಗಳನ್ನು ರಾಷ್ಟ್ರೀಯ ಹೆದ್ದಾರಿ-275 ಎಂದು ಘೋಷಣೆ ಮಾಡಿದ್ದು ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರಲ್ಲವೆ? ಅಂದಿನ ಯು.ಪಿ.ಎ. ಸರ್ಕಾರ 2014 ರಲ್ಲಿ ಇನ್ ಪ್ರಿನ್ಸಿಪಲ್ ಹಣಕಾಸಿಗೆ ಅನುಮೋದನೆ ನೀಡಿದ್ದು ನಿಜವಲ್ಲವೆ? ಭೂ ಸ್ವಾಧೀನ ಮತ್ತು ಇತರ ಸೌಲಭ್ಯಗಳನ್ನು ನೀಡಿದ್ದು ರಾಜ್ಯ ಸರ್ಕಾರವಲ್ಲವೆ? ಒಟ್ಟು ಯೋಜನಾ ವೆಚ್ಚದಲ್ಲಿ ಶೇ.50 ರಷ್ಟು ಭೂಸ್ವಾಧೀನಕ್ಕೆ ಖರ್ಚಾಗಿದೆ. ಯೋಜನೆಗಾಗಿ ಗುತ್ತಿಗೆದಾರ ಶೇ. 60 ರಷ್ಟು ಸಾಲ ತಂದು ಹಾಕಿದ್ದಾನೆ. ಹಾಕಿದ ಬಂಡವಾಳಕ್ಕೆ ಒಂದಕ್ಕೆ ಎರಡರಂತೆ ಟೋಲ್ ಸಂಗ್ರಹ ಮಾಡಲಾಗುತ್ತದೆಯಲ್ಲವೆ?

5. ಬೆಂಗಳೂರಿನಿಂದ ಮೈಸೂರಿಗೆ ಒಂದು ಕಡೆಗೆ 119 ಕಿ.ಮೀ. ರಂತೆ ಲೆಕ್ಕ ಹಾಕಿದರೂ ಎರಡೂ ಕಡೆಗೆ 238 ಕಿ.ಮೀ. ಆಗುತ್ತದೆ. ಆದರೆ ಟೋಲ್ ಕಟ್ಟಬೇಕಾದ ಮೊತ್ತವು ಸಾಧಾರಣವಾಗಿ ದೇಶದಲ್ಲಿ ಕಿ.ಮೀ.ಗೆ 0.80 ಪೈಸೆಗಳಿದ್ದರೆ ಬೆಂಗಳೂರಿನಿಂದ ಮೈಸೂರಿಗೆ ಓಡಾಡುವ ಜನರು ಕಾರುಗಳಲ್ಲಿ ಓಡಾಡಿದರೆ ಕಿ.ಮೀ.ಗಳಿಗೆ ರೂ.2.50 ಗಳಿಗೂ ಹೆಚ್ಚು ಪಾವತಿಸಬೇಕಾಗಿದೆ. ಸಣ್ಣ ಕಾರೊಂದು ಮೈಸೂರಿಗೆ ಹೋಗಿ ಬರಲು ಕನಿಷ್ಠ 500 ರೂ ಗಳನ್ನು ಪಾವತಿಸಬೇಕಾಗಿದೆ.

    ಬಸ್ಸುಗಳು ಕನಿಷ್ಠ ಇದರ ಎರಡರಷ್ಟಾದರೂ ಪಾವತಿಸಬೇಕು. ಇದನ್ನು ಜನರ ಪ್ರಯಾಣ ದರಗಳ ಮೇಲೆ ಹೇರಲಾಗುತ್ತದೆ. ಕಂಟ್ರಾಕ್ಟರು ಸಾಲ ಮಾಡಿ ರಸ್ತೆ ಮಾಡಿದರೆ, ರಾಜ್ಯ ಸರ್ಕಾರ ಭೂಮಿ ಕೊಟ್ಟರೆ ನಿಮ್ಮ ಕೊಡುಗೆ ಏನು ಹೇಳಿ? ಟೋಲ್‌ಗಳನ್ನು ನಿರ್ಮಿಸಿ ಜನರನ್ನು ಅಡ್ಡಡ್ಡ ಸುಲಿಗೆ ಮಾಡುವುದು ಬಿಟ್ಟರೆ ನಿಮ್ಮ ಕೊಡುಗೆ ಏನು? ಕರ್ನಾಟಕಕ್ಕೆ ವರ್ಷಕ್ಕೆ 5 ಸಾವಿರ ಕೋಟಿ ರೂಗಳನ್ನು ರಸ್ತೆ ನಿರ್ಮಾಣಕ್ಕೆ ಕೊಡುತ್ತಿದ್ದೇವೆಂದು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದೀರಿ. ಆದರೆ 4 ಸಾವಿರ ಕೋಟಿ ರೂಗಳನ್ನು ನಮ್ಮ ಜನರು ಕಟ್ಟುವ ಟೋಲ್‌ಗಳಿಂದ ಲೂಟಿ ಮಾಡುತ್ತೀರಿ. ಹಾಗಿದ್ದ ಮೇಲೆ ನೀವು ಕೊಟ್ಟಿದ್ದೆಷ್ಟು ಹೇಳಿ?

6. ಮೈಸೂರು- ಬೆಂಗಳೂರು ರಸ್ತೆಗೆ ಟೋಲ್ ಶುಲ್ಕ ಸಂಗ್ರಹವನ್ನು ಕೈಬಿಡಬೇಕು ಹಾಗೂ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮುಂತಾದ ನಗರ ಪಟ್ಟಣಗಳ ಜನರ ವ್ಯಾಪಾರ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸುತ್ತೇನೆ.

7. ಬೆಂಗಳೂರು- ಮೈಸೂರು ಹೆದ್ದಾರಿ ಯೋಜನೆ ಜಾರಿಗೆ ಬರಲು ಕಾರಣರಾದ ಆಸ್ಕರ್ ಫರ್ನಾಂಡಿಸ್ ಅವರು, ಮನಮೋಹನಸಿಂಗ್ ಅವರು ಮತ್ತು ಈ ಯೋಜನೆಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟ ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಪ್ರಧಾನಮಂತ್ರಿಯಾಗಿ ತಾವು ಪ್ರಸ್ತಾಪಿಸಬೇಕೆಂದು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ತಾವು ಕೇವಲ ಬಿಜೆಪಿಯ ಚುನಾವಣಾ ಏಜೆಂಟರೆಂದು ನಮ್ರವಾಗಿ ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ.

ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap