ನವದೆಹಲಿ:
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿವಾದನೆ ಸಲ್ಲಿಸಿದ ವಿಷಯವಾಗಿ ಸ್ಪೀಕರ್ ಓಂ ಬಿರ್ಲಾ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ವಾಕ್ಸಮರ ನಡೆಯಿತು.
ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಗೆ ಧನ್ಯವಾದ ಸಲ್ಲಿಸಿದ್ದನ್ನು ಪ್ರಶ್ನಿಸಿದ್ದ ರಾಹುಲ್ ಗಾಂಧಿ, “ಸ್ಪೀಕರ್ ಆಗಿರುವ ನೀವು ಲೋಕಸಭೆಯಲ್ಲಿ ನೀವೇ ಅಂತಿಮ, ಹಾಗಿದ್ದಾಗಲೂ ಪ್ರಧಾನಿ ಮೋದಿ ಅವರಿಗೆ ತಲೆಬಾಗಿ ಅಭಿವಾದನೆ ಸಲ್ಲಿಸಿದ್ದೇಕೆ? ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಓಂ ಬಿರ್ಲಾ, ಹಿರಿಯರಿಗೆ ನಮಸ್ಕರಿಸುವ ಸಂಪ್ರದಾಯ/ ಪದ್ಧತಿಯನ್ನು ತಾವು ಇನ್ನೂ ಹೊಂದಿರುವುದಾಗಿ ರಾಹುಲ್ ಗಾಂಧಿ ಮಾತಿಗೆ ತೀಕ್ಷ್ಣವಾಗಿ ಉತ್ತರಿಸಿದರು. ಆದರೆ ಸ್ಪೀಕರ್ ಮಾತನ್ನು ಅರ್ಥ ಮಾಡಿಕೊಳ್ಳದ ರಾಹುಲ್ ಗಾಂಧಿ ಸದನದಲ್ಲಿ ಸ್ಪೀಕರ್ ಹುದ್ದೆಯಲ್ಲಿರುವವರೇ ದೊಡ್ಡವರು ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ನೀವು ಹೇಳಿದ್ದೇ ಅಂತಿಮ, ನೀವು ಹೇಳಿದ್ದು ಭಾರತದ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತದೆ. ಸಭಾಧ್ಯಕ್ಷರ ಸ್ಥಾನದಲ್ಲಿ ಇಬ್ಬರು ಒಂದು ಸಭಾಧ್ಯಕ್ಷರು ಮತ್ತೊಂದು ಓಂ ಬಿರ್ಲಾ ಕುಳಿತಿದ್ದಾರೆ ಎನಿಸುತ್ತದೆ.
“ನೀವು ಸಭಾಧ್ಯಕ್ಷರಾಗಿ ಆಯ್ಕೆಗೊಂಡಾಗ ನಾನು ಒಂದು ಅಂಶವನ್ನು ಗಮನಿಸಿದೆ. ನಿಮಗೆ ಹಸ್ತಲಾಘವ ನೀಡಿ ಅಭಿನಂದಿಸಿದ ನನಗೆ ಹಸ್ತಲಾಘವ ನೀಡಿದಿರಿ, ಆದರೆ ಮೋದಿ ನಿಮಗೆ ಹಸ್ತಲಾಘವ ನೀಡಿದಾಗ, ನೀವು ತಲೆ ಬಾಗಿ ನಮಸ್ಕರಿಸಿದಿರಿ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿಯ ಈ ಹೇಳಿಕೆ ಸದನದಲ್ಲಿ ಕೋಲಾಹಲ ಉಂಟುಮಾಡಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಧ್ಯಪ್ರವೇಶಿಸಿ ಸಭಾಧ್ಯಕ್ಷರ ವಿರುದ್ಧದ ಆರೋಪ ಇದಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಓಂ ಬಿರ್ಲಾ, “ಪ್ರಧಾನಿ ಈ ಸದನದ ನಾಯಕ, ವೈಯಕ್ತಿಕವಾಗಿ, ಸಾರ್ವಜನಿಕ ಜೀವನದಲ್ಲಿ ಮತ್ತು ಈ ಹುದ್ದೆಯಲ್ಲಿ ನಾನು ಹಿರಿಯರಿಗೆ ತಲೆಬಾಗಬೇಕು ಮತ್ತು ಸಮಾನರನ್ನು ಸಮಾನವಾಗಿ ಕಾಣಬೇಕು ಎಂಬುದನ್ನು ನನ್ನ ನನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳು ಹೇಳುತ್ತದೆ. ಅದನ್ನು ನಾನು ಕಲಿತಿದ್ದೇನೆ ಎಂದು ಸ್ಪೀಕರ್ ಹೇಳಿದ್ದಾರೆ.
ಹಿರಿಯರಿಗೆ ನಮಸ್ಕರಿಸುವುದು ಮತ್ತು ಅಗತ್ಯವಿದ್ದರೆ ಅವರ ಪಾದಗಳನ್ನು ಮುಟ್ಟುವುದು ನನ್ನ ಸಂಸ್ಕೃತಿ ಎಂಬುದನ್ನು ನಾನು ಸಭಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಹೇಳಬಲ್ಲೆ ಎಂದು ಬಿರ್ಲಾ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.