ಕಲಬುರಗಿ
ನೀವು ಕಾಂಗ್ರೆಸ್ ಗೆ ವೋಟ್ ಹಾಕಲು ಬರದೇ ಇದ್ದರೂ ಪರವಾಗಿಲ್ಲ. ನಾನು ಸತ್ತ ಮೇಲೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ನನ್ನನ್ನು ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ ಹೂಳಿದರೆ ಮಣ್ಣು ಹಾಕಲು ಬನ್ನಿ. ಇದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಬುಧವಾರ ಕಲಬುರಗಿ ಜಿಲ್ಲೆಯ ಅಫಜಲ್ಪುರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಪಕ್ಷಕ್ಕೆ ಮತ ಹಾಕಲು ಬಯಸದಿದ್ದರೂ ಪರವಾಗಿಲ್ಲ. ನಾನು ಸತ್ತರೆ ನಮ್ಮ ಕೆಲಸಗಳನ್ನು ನೆನಪು ಮಾಡಿಕೊಂಡು ಮಣ್ಣು ಹಾಕಲು ಬನ್ನಿ. ಆಗ ಜನರು ನೋಡಪ್ಪ ಆತನ ಅಂತ್ಯಕ್ರಿಯೆಗೆ ಎಷ್ಟು ಜನ ಬಂದರೂ ಅಂತ ಹೇಳಬೇಕು ಎಂದು ಭಾವುಕರಾಗಿ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿದ್ದಾರೆ.
ನಾನು ಅಫಜಲ್ ಪುರದಿಂದಲೇ ಸೋತಿದ್ದೇನೆ ಎಂದು ಹೇಳಲಾರೆ. ಯಾಕೆಂದರೆ ನನ್ನ ಸೋಲಿಸಲು ಬಿಡೀ ದೇಶವೇ ಒಗ್ಗಟ್ಟಾಗಿತ್ತು. ಶಾ, ಆರ್ ಎಸ್ ಎಸ್,ಸೂಲಿಬೆಲೆ ಎಲ್ಲಿ ಸೇರಿ ಇಲ್ಲೇ ಕ್ಯಾಂಪ್ ಮಾಡಿ ನನ್ನನ್ನ ಟಾರ್ಗೆಟ್ ಮಾಡಿದ್ದರು. ಆದರೂ, ಕಲಬುರಗಿ ಜನ ನನ್ನ ಕೈಬಿಡಲ್ಲ ಎಂದು ಭಾವಿಸಿದ್ದೆ, ಸೋಲಾಯಿತು. ಈಗಲೂ ಕೂಡಾ ಮೋದಿ ಅಲ್ಲಿ ಇಲ್ಲಿ ಹೇಳಿಕೊಳ್ಳುತ್ತಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ನಾಚಿಕೆಯಾಗಬೇಕು ಅವರಿಗೆ. ಎಂತಹ ಪ್ರಧಾನಿ ಇವರು. ಕಾಂಗ್ರೆಸ್ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ ಹೊರತು ಮಾಂಗಲ್ಯ ಸೂತ್ರ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್ ಸಿ , ಎಸ್ ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಯೋಜನೆಗಳನ್ನು ಹೇಳಿದ್ದೇವೆ. ಆದರೆ, ನಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಸಿದ್ದಾಂತ ಇದ್ದಂತೆ ಇದೆ ಎಂದಿದ್ದಾರೆ. ಯಾರೂ ಇಂತಹ ಮಾತು ಅಡುವುದಿಲ್ಲ. ಆದರೆ ಮೋದಿಗೆ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ನಮ್ಮ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದೇನೆ. ನೋಡೋಣ ಅವರು ಬಂದರೆ ನಾನು ಚರ್ಚೆ ಮಾಡುತ್ತೇನೆ ಎಂದು ಖರ್ಗೆ ಹೇಳಿದರು.
ದುರ್ದೈವದಿಂದಾಗಿ ಕಳೆದ ಸಲ ನನಗೆ ಹಿನ್ನೆಡೆಯಾಯಿತು. ಇದರಿಂದ ತಾಪತ್ರಯ ಆಗಿತ್ತು. ಆದದ್ದು ಆಗಿ ಹೋಗಿದೆ. ಅದನ್ನೇ ಪದೇ ಪದೇ ಹೇಳಿದರೂ ಚೆನ್ನಾಗಿರುವುದಿಲ್ಲ. ಕಳೆದ ಸಲದ ಸೋಲಿನಿಂದ ಹೊರಗೆ ಬನ್ನಿ ಆದದ್ದೂ ಆಯ್ತು ಈ ಸಲ ನೀವೆಲ್ಲ ಸೇರಿ ಬಿಜೆಪಿಗೆ ಮುಖಭಂಗ ಮಾಡಿ ಇದು ಮೋದಿಗೂ ಗೊತ್ತಾಗಲಿ ಎಂದು ಮನವಿ ಮಾಡಿದರು.
ಬ್ಯಾರೇಜ್, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಕೋಚ್ ಫ್ಯಾಕ್ಟರಿ, ಕೇಂದ್ರಿಯ ವಿವಿ ಗಳನ್ನು ಸ್ಥಾಪಿಸಿದ್ದೇನೆ. ಇದನ್ನು ಯಾರೂ ನನಗೆ ಹೇಳಿರಲಿಲ್ಲ. ಆದರೆ ಈ ಭಾಗದ ಅಭಿವೃದ್ದಿಗಾಗಿ ನಾನು ಮಾಡಿದ್ದೇನೆ. ಕಲಬುರಗಿಯಿಂದ ಬೆಂಗಳೂರಿಗೆ ಚಥುಷ್ಪಥ ರಸ್ತೆ ನಿರ್ಮಾಣವಾಗಬೇಕು ಸಿಎಂ ಸಿದ್ದರಾಮಯ್ಯ ಅದನ್ನೂ ಮಾಡುತ್ತಾರೆ ಎನದನುವ ಭರವಸೆ ಇದೆ. ಮೆಜಾರಿಟಿ ಇಲ್ಲದಿದ್ದರೂ ಕೂಡಾ ಆರ್ಟಿಕಲ್ 371 J. ಜಾರಿಗೆ ತಂದಿದ್ದೇವೆ ಇದರಿಂದಾಗಿ ಸಾವಿರಾರು ನಿರುದ್ಯೋಗಿಗಳು ನೌಕರಿ ಪಡೆದುಕೊಂಡಿದ್ದಾರೆ ಎಂದರು.