ಬೆಂಗಳೂರು:
ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ ಮಂಕಾಗಿದೆ. ಮೋದಿಯವರು ರಾಜ್ಯದಲ್ಲಿ ಪ್ರಚಾರ ಮಾಡಿದ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿರುವುದು ಇದಕ್ಕೆ ಸಾಕ್ಷಿ. ಇನ್ನೂ ಮುಂದೆ ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಕಿವಿ ಮಾತು ಹೇಳಿದರು.
ಶುಕ್ರವಾರ ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ 28 ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ. ಯಾವ ಪ್ರಧಾನಿ ಕೂಡಾ ರಾಜ್ಯದ ಚುನಾವಣೆಗೆ ಇಷ್ಟು ಬಾರಿ ಬಂದ ನಿದರ್ಶನ ಇಲ್ಲ. ಆದರೆ ಮೋದಿ ಪ್ರವಾಸ ಮಾಡಿದ ಕಡೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರು. ಈ ಹಿನ್ನಲೆಯಲ್ಲಿ ನರೇಂದ್ರ ಮೋದಿ ಅವರನ್ನು ಜಾಸ್ತಿ ಅವಲಂಬಿತರಾಗಬೇಡಿ ಆಗಬೇಡಿ ಎಂದು ಬಿಜೆಪಿಗೆ ಸಲಹೆ ನೀಡಿದರು.
ನರೇಂದ್ರ ಮೋದಿ ಪಾಪ್ಯುಲಾರಿಟಿ ಇದೆ. ಅದರಲ್ಲಿ ಡೌಟ್ ಇಲ್ಲ. ಆದರೆ ಅದು ಇವಾಗ ಮಂಕಾಗಿದೆ. ಕರ್ನಾಟಕದಿಂದ ಶುರುವಾಗಿದೆ ನಿಮ್ಮ ಅವನತಿ. ನರೇಂದ್ರ ಮೋದಿ ಹೊಗಳುವುದು ಬಿಟ್ಟರೆ ಬಿಜೆಪಿಗೆ ಏನಿದೆ? ಎಂದು ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್ ನಲ್ಲಿ ಎರಡು ಬಾರಿ ಸಿಎಂ ಆಗಲು ಅವಕಾಶ ಸಿಕ್ತು, ಅದಕ್ಕೆ ಪಕ್ಷಕ್ಕೆ ಋಣಿ ಆಗಿದ್ದೇನೆ ಎಂದರು.
ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ಮು ಘೋಷಿಸಿ ಜಾರಿ ಮಾಡಿತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್ ನ ಬದ್ಧತೆ ಮತ್ತು ಸಿದ್ಧಾಂತ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿರುವ ಕಾರಣದಿಂದ ಹೀನಾಯವಾಗಿ ಸೋಲು ಕಾಣಬೇಕಾಯಿತು ಎಂದರು.
ಇಷ್ಟು ದಿನವಾದ್ರೂ ಬಿಜೆಪಿ ವಿಪಕ್ಷ ನಾಯಕರ ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿ ಇಷ್ಟು ರಾಜಕೀಯ ದಿವಾಳಿ ಆಗುತ್ತೆ ಎಂದು ಗೊತ್ತಿರಲಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕ ಇಲ್ಲ ಅಂತ ನಮಗೆ ವ್ಯಥೆ ಇದೆ. ವಿಧಾನಸಭೆಯಲ್ಲಿ ಹೆಚ್ಡಿ ಕುಮಾರಸ್ವಾಮಿಯವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕ ಇರಬೇಕು. ಕೋಮುವಾದ ವಿರೋಧಿಸಿ ಜನ ನಮಗೆ ಅವಕಾಶ ಕೊಟ್ಟಿದ್ದಾರೆ.
7 ಜಿಲ್ಲೆಗಳಲ್ಲಿ ಬಿಜೆಪಿಯ ಒಬ್ಬ ಅಭ್ಯರ್ಥಿಯೂ ಗೆಲ್ಲಲು ಆಗಲಿಲ್ಲ.
ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಮಾಡಬಾರದನ್ನು ಮಾಡಿದರು. ಅದಕ್ಕಾಗಿಯೇ ಜನ ನಿಮ್ಮನ್ನು ಅಲ್ಲಿ ಕೂರಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ, ವಿಪಕ್ಷದಲ್ಲೇ ಇರಬೇಕು. ಬಿಜೆಪಿಯವರು ಜನಪರ ಕೆಲಸ, ಬಡವರ ಪರ ಕೆಲಸ ಮಾಡಲ್ಲ ಎಂದು ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.