ಕೊಪ್ಪಳ:
ಬಿಜೆಪಿ ರೆಬೆಲ್ ಸಂಸದ ಕರಡಿ ಸಂಗಣ್ಣ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿದ್ದು ಕಾಂಗ್ರೆಸ್ ಸೇರುತ್ತಾರೆ ಎಂಬ ವಿಷಯಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಧಾನಗೊಂಡಿರುವ ಸಂಗಣ್ಣ ಕರಡಿ ಅವರು ಬಿಜೆಪಿ ಪ್ರಚಾರದಿಂದ ದೂರ ಉಳಿದಿದ್ದಾರೆ. ಈ ಹಿನ್ನಲೆಯಲ್ಲಿ ಕರಡಿ ಸಂಗಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು.
ಭೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸವದಿ, ಕಾಂಗ್ರೆಸ್ ಪಕ್ಷಕ್ಕೆ ಬರುವುದರ ಬಗ್ಗೆ ನಾವು ಮಾತಾಡಿಲ್ಲ. ಅದಕ್ಕೆ ಇನ್ನೂ ಸಮಯ ಇದೆ ಅದನ್ನ ಸಂಗಣ್ಣ ಅವರು ತೀರ್ಮಾನ ಮಾಡ್ತಾರೆ. ಅವರೂ ರಾಜಕೀಯ ನೆಲೆ ಹುಡುಕಿ ಕೊಳ್ಳಬೇಕು ಅದನ್ನ ಅವರು ಹಾಗೂ ಅವರ ಕುಟುಂಬ ಸದಸ್ಯರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ. ಸಂಸದ ಸಂಗಣ್ಣ ಕರಡಿ, ನಾನು ಸ್ನೇಹಿತರು. ಕುಶಲೋಪರಿ ವಿಚಾರಿಸಲು ಅವರ ಮನೆಗೆ ಬಂದಿರುವೆ. ಪಕ್ಷ ಬದಲಾವಣೆ, ರಾಜಕೀಯ ನಡೆ ಬಗ್ಗೆ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಕೆ ಇರುವ ಕಾರಣ ಕೊಪ್ಪಳಕ್ಕೆ ಬಂದಿರುವೆ. ಸಂಗಣ್ಣ ಕರಡಿ ನನ್ನ ಸ್ನೇಹಿತ. ಬಿಜೆಪಿಯಲ್ಲಿ ತತ್ವ, ಸಿದ್ಧಾಂತ ಬದಿಗಿರಿಸಿದ್ದಾರೆ. ಹೊಸ ರಾಜಕಾರಣ ಶುರುವಾಗಿದೆ. ಸಂಗಣ್ಣ ಸಾಕಷ್ಟು ಕೆಲಸ ಮಾಡಿದ್ದಾರೆ. ಇನ್ನೊಂದು ಬಾರಿ ಅವಕಾಶ ನೀಡಬಹುದಿತ್ತು. ಈಗ ಕಾಲ ಮಿಂಚಿದೆ. ಅವರ ಬದಲು ಬೇರೆಯವರಿಗೆ ಟಿಕೆಟ್ ನೀಡಿದ್ದಾರೆ. ನಾನು ಬೇರೆ ಪಕ್ಷದಲ್ಲಿ ಇದ್ದರೂ ಕೊಪ್ಪಳಕ್ಕೆ ಬಂದಾಗ ಅವರ ಮನೆಗೆ ಬರುತ್ತೇನೆ. ಅವರು ಬೆಳಗಾವಿಗೆ ಬಂದಾಗ ನಮ್ಮ ಮನೆಗೆ ಬರುತ್ತಾರೆ ಎಂದರು.
ನಾನು ಈ ಹಿಂದೆ ಸಂಗಣ್ಣನನ್ನು ಬಿಜೆಪಿಗೆ ಕರೆ ತಂದಿದ್ದೆ. 15 ವರ್ಷ ಬಿಜೆಪಿಯಲ್ಲಿ ಇದ್ದುಕೊಂಡು ಕ್ಷೇತ್ರದ ಸೇವೆ ಮಾಡಿದ್ದಾರೆ. ನಮ್ಮ ನಡುವೆ ಸ್ನೇಹ ಇರುವ ಕಾರಣ ನಾನು ಬಂದಿರುವೆ. ಕಾಂಗ್ರೆಸ್ಗೆ ಬರುವಂತೆ ನಾನೂ ಕರೆದಿಲ್ಲ. ಅವರೂ ಹೇಳಿಲ್ಲ. ರಾಜಕೀಯ ನೆಲೆ ಕಂಡುಕೊಳ್ಳಬೇಕಿದೆ. ಬಿಜೆಪಿಯಲ್ಲಿದ್ದುಕೊಂಡು ಅಥವಾ ಬೇರೆಡೆ ಹೋಗಿ ಕಂಡುಕೊಳ್ಳಬೇಕೆಂಬ ನಿರ್ಧಾರ ತೆಗೆದುಕೊಳ್ಳಬೇಕಾದವರು ಸಂಗಣ್ಣ ಹಾಗೂ ಅವರ ಕುಟುಂಬದವರು. ಕಾಲ ಎಲ್ಲ ನಿರ್ಧರಿಸಲಿದೆ. ಅವರಿಗೆ ಒಳ್ಳೆಯ ಭವಿಷ್ಯ ಸಿಗಲಿ ಎಂಬುದು ನನ್ನ ಅಪೇಕ್ಷೆ ಎಂದು ಮಾಹಿತಿ ನೀಡಿದರು.