ತುಮಕೂರು:
ನದಿ, ತೊರೆ, ಹಳ್ಳ, ಕೆರೆ, ಜಲಾಶಯಗಳ ಪಾತ್ರದಲ್ಲಿ ಮರಳು ಗಣಿಗಾರಿಕೆ ನಡೆಸಿ ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ಪೂರೈಕೆ ಮಾಡುವ ಹೊಸ ಮರಳು ನೀತಿ ಈಗ ರಾಜ್ಯದಲ್ಲಿ ಜಾರಿಗೆ ಬಂದಿದೆ. 2020ರ ಹೊಸ ಮರಳು ನೀತಿಗೆ ಸರ್ಕಾರ ಅನುಮೋದನೆ ನೀಡುವ ಮೂಲಕ ನವೆಂಬರ್ 9 ರಿಂದ ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2021 ಅಸ್ತಿತ್ವಕ್ಕೆ ಬಂದಿದೆ.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಮರಳು ಶೇಖರಣೆ ಮಾಡಿ ಮಾರಾಟ ಮಾಡಲು ಹೊಸ ಮರಳು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಗ್ರಾಮ ಪಂಚಾಯತಿಗಳಿಗೆ ಶೇ.2ರಷ್ಟು ನಿಧಿ ನೀಡಲು ಹೇಳಲಾಗಿದೆ. ಸರ್ಕಾರಕ್ಕೆ ಬರುವ ಶೇ.50 ರಷ್ಟು ರಾಯಲ್ಟಿಯಲ್ಲಿ ಶೇ.25ನ್ನು ಆಯಾ ಪಂಚಾಯತಿಗಳಿಗೆ ನೀಡಲಾಗುವುದು. ಸರ್ಕಾರದ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಮತ್ತು ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ನೀಡುವ ಅಧಿಕಾರವನ್ನು ಆಯಾ ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದೆ ಎಂದು ಕಾನೂನು ಸಚಿವರು ಹೇಳಿದ್ದಾರೆ.
ನ.9 ರಿಂದ ಹೊಸ ಮರಳು ನೀತಿ ಜಾರಿಗೆ ಬರುವುದರೊಂದಿಗೆ ಹಲವು ಗೊಂದಲಗಳನ್ನು ಹುಟ್ಟು ಹಾಕಿದೆ. ಮೂರು ವರ್ಷಗಳ ಹೊಸ ಮರಳು ನೀತಿಯ ಗೊಂದಲಕ್ಕೆ ಕಾನೂನು ಚೌಕಟ್ಟಿನಲ್ಲಿ ತೆರೆ ಎಳೆದಿರಬಹುದಾದರೂ ಮುಂದೆ ಉದ್ಭವಿಸುವ ಸಮಸ್ಯೆಗಳು ಗ್ರಾಮ ಮಟ್ಟದಲ್ಲಿ ಲಂಚ ರುಶುವತ್ತು ಮತ್ತಷ್ಟು ಬೃಹದಾಕಾರವಾಗಿ ಬೆಳೆಯಲು ಅವಕಾಶ ನೀಡಲೂಬಹುದು. ಇದೆಲ್ಲಕ್ಕಿಂತ ಹೆಚ್ಚಾಗಿ ಕಳೆದ ಎರಡು ದಶಕಗಳ ಅವಧಿಯಲ್ಲಿ ವ್ಯಾಪಕವಾಗಿದ್ದ ಮರಳು ದಂಧೆ ಮರುಕಳಿಸಬಹುದು.
ಈ ಒಂದು ದಶಕದ ಅವಧಿಯಲ್ಲಿ ಜಿಲ್ಲೆಯ ಹಲವು ಭಾಗಗಳಲ್ಲಿ ಮರಳನ್ನು ಲೂಟಿ ಮಾಡಲಾಯಿತು. ಕೆರೆ-ಕಟ್ಟೆ ಮತ್ತು ಹಳ್ಳ ಹರಿಯುವ ಪ್ರದೇಶಗಳಲ್ಲಿ ಮರಳನ್ನು ದೋಚಲಾಯಿತು. ಎಲ್ಲೆಲ್ಲಿ ಮರಳು ಲಭ್ಯವಿತ್ತೋ ಅಂತಹ ಕಡೆಗಳಿಗೆಲ್ಲಾ ರಾತ್ರೋರಾತ್ರಿ ಮರಳು ಗಣಿಗಾರಿಕೆ ವ್ಯಾಪಿಸಿ ಬಿಟ್ಟಿತ್ತು. ಕೆಲವೇ ತಿಂಗಳುಗಳ ಅವಧಿಯಲ್ಲಿ ಕೆರೆ-ಕಟ್ಟೆಗಳ ಪಾತ್ರದಲ್ಲಿದ್ದ ಮರಳು ನಿಕ್ಷೇಪ ಬರಿದಾಯಿತು. ಸುಮಾರು 2017ರ ಸಮಯಕ್ಕೆ ಭೀಕರ ಬರಗಾಲವೂ ಎದುರಾಗಿ ಎಲ್ಲ ಕಡೆ ಆಹಾಕಾರ ಉಂಟಾಯಿತು. 1000 ಅಡಿ ಕೊರೆದರೂ ನೀರು ಸಿಗದಂತಾಗಿ ಅಂತರ್ಜಲ ಬತ್ತಿ ಹೋಗಿ ತೆಂಗು, ಅಡಕೆ ಮರಗಳೆಲ್ಲಾ ಒಣಗಿ ಬಿಟ್ಟವು. ಜನತೆಗೆ ಮರಳು ನಿಕ್ಷೇಪದ ಅರಿವು ಬಂದಿದ್ದು ಆಗಲೆ. ಆದರೆ ಆ ವೇಳೆಗಾಗಲೇ ಎಲ್ಲ ಕಡೆ ಮರಳನ್ನು ಲೂಟಿಗೈಯ್ಯಲಾಗಿತ್ತು. ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಊರ ಬಾಗಿಲು ಹಾಕಿದರು ಎಂಬಂತೆ ಮರಳು ನಿಕ್ಷೇಪ ಬರಿದಾದ ಮೇಲೆ ಮರಳು ಗಣಿಗಾರಿಕೆಯ ಮೇಲೆ ನಿಷೇಧ ಹೇರಲಾಯಿತು.
ಕಳೆದ ವರ್ಷದಿಂದ ಉತ್ತಮ ಮಳೆಯಾಗುತ್ತಿದೆ. ಹಳ್ಳ-ಕೊಳ್ಳಗಳು ತುಂಬಿಕೊಳ್ಳುತ್ತಿವೆ. ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಹೇಮಾವತಿ ನದಿ ನೀರಿನ ಹರಿವು ಹಾಗೂ ಮಳೆಯ ನೀರಿನ ಕಾರಣದಿಂದಾಗಿ ಬಹಳಷ್ಟು ಕಡೆ ಜಲವರ್ಗ ವೃದ್ಧಿಯಾಗಿದೆ. ಕೆರೆ-ಕಟ್ಟೆಗಳು ಜೀವ ಪಡೆದುಕೊಂಡಿವೆ. ಬೇಸಿಗೆಯ ಕಾಲಕ್ಕೆ ಸಹಜವಾಗಿ ಇಲ್ಲೆಲ್ಲಾ ನೀರು ಬತ್ತಿ ಹೋಗಬಹುದು. ಆಗ ಲಭ್ಯವಾಗುವ ಮರಳಿನ ಮೇಲೆ ಅನೇಕರ ಕಣ್ಣು ನೆಟ್ಟಿರುತ್ತದೆ. ಮರಳು ಸಂಗ್ರಹಣೆ ಮತ್ತು ಸಾಗಾಣಿಕೆಗೆ ಅವಕಾಶ ಕಲ್ಪಿಸಿರುವುದರಿಂದ ಈ ಹಿಂದೆ ಇದೇ ದಂಧೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಮತ್ತೆ ಅದೇ ಚಾಳಿ ಮರುಕಳಿಸಲೂಬಹುದು.
ಕೆರೆ, ಕಟ್ಟೆ, ಜಲಾಶಯಗಳು ರೈತರ ಜೀವನಾಡಿಗಳು. ಈ ಕೆರೆ, ಕಟ್ಟೆಗಳ ಅಂಗಳದಲ್ಲಿದ್ದ ಮರಳು ನಿಕ್ಷೇಪವನ್ನು ರಾಜಾರೋಷವಾಗಿ ಲೂಟಿ ಮಾಡಲಾಯಿತು. ಕೊರಟಗೆರೆ ತಾಲ್ಲೂಕಿನ ಜಯಮಂಗಲಿ ನದಿ ಪಾತ್ರದಲ್ಲಿದ್ದ ಮರಳನ್ನು ತುಮಕೂರು ಹಾಗೂ ಬೆಂಗಳೂರಿನವರೆಗೂ ಸಾಗಿಸಲಾಯಿತು. ತುಮಕೂರು ಹೊರ ವಲಯದ ಬೆಳಗುಂಬ ಹಾಗೂ ಆಜೂಬಾಜಿನ ರಸ್ತೆಗಳಲ್ಲಿ ಮರಳು ಲಾರಿಗಳ ಓಡಾಟದಿಂದಾಗಿ ಗುಂಡಿ-ಗುದ್ದರಗಳು ಉಂಟಾದವು. ಕಂದಾಯ ಹಾಗೂ ಪೊಲೀಸ್ ಇಲಾಖೆಯಲ್ಲಿನ ಕೆಲವರು ಕೆಲವೇ ತಿಂಗಳಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆದರು. ಮರಳು ಲಾರಿಗಳನ್ನು ಅಡ್ಡಗಟ್ಟಿ ಹಣ ಮಾಡುವ ದಂಧೆ ವ್ಯಾಪಕವಾಯಿತು. ರಾಜಕಾರಣಿಗಳ ಹಿಂಬಾಲಕರೆ ಹೆಚ್ಚಿನದಾಗಿ ಈ ದಂಧೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ಗಮನಾರ್ಹ. ರಾಜಕಾರಣಿಗಳ ಮಕ್ಕಳು ಮತ್ತು ಹಿಂಬಾಲಕರು ಗಣಿ ದಂಧೆಯಲ್ಲಿ ಭಾಗಿಯಾಗಿದ್ದರಿಂದಲೆ ಕಾನೂನು ಕಟ್ಟಳೆಗಳೆಲ್ಲವೂ ಗಾಳಿಗೆ ತೂರಿ ಹೋದವು. ಅಧಿಕಾರಿಗಳು ನಾಮಕಾವಸ್ಥೆಗೆ ಎಂಬಂತೆ ಕಾರ್ಯಾಚರಣೆ ಮಾಡಿದರು.
ಆದರೆ ಈ ಕಾರ್ಯಾಚರಣೆ ಹೆಸರಿನಲ್ಲಿ ಲಕ್ಷ ಲಕ್ಷಗಳ ಹಣ ಲೂಟಿಯಾದದ್ದು ಮಾತ್ರ ಸತ್ಯ.
ಮರಳು ನಿಕ್ಷೇಪ ಬರಿದಾದ ನಂತರ ಜಾರಿಯಾದ ಕಠಿಣ ನೀತಿಗಳು ಹಾಗೂ ಮರಳಿನ ಅಲಭ್ಯತೆಯ ಪರಿಣಾಮ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ಬಿದ್ದಿತು. ಲಭ್ಯವಿರುವ ಮರಳಿನ ಪ್ರಮಾಣ ಮತ್ತು ಬೇಡಿಕೆಯ ನಡುವಿನ ಭಾರಿ ಅಂತರವು ಅಕ್ರಮ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ಹೆಚ್ಚಳಕ್ಕೆ ಕಾರಣವಾಗಿದೆ. ಮರಳು ಗಣಿಗಾರಿಕೆ ಮಾಫಿಯಾ ಸ್ವರೂಪ ಪಡೆದುಕೊಳ್ಳಲು ಈ ಬೇಡಿಕೆಯ
ಎಂ ಸ್ಯಾಂಡ್ ಬಳಕೆ ಹೆಚ್ಚಳ
ಹಳ್ಳ-ಕೊಳ್ಳ, ನದಿ ಪಾತ್ರಗಳಲ್ಲಿ ನೈಸರ್ಗಿಕ ಮರಳು ಖಾಲಿಯಾದಂತೆಲ್ಲಾ ಮರಳಿನ ಬೇಡಿಕೆ ಹೆಚ್ಚಾಯಿತು. ನಿರ್ಮಾಣ ಕಾಮಗಾರಿಗಳು ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗತೊಡಗಿದವು. ಮರಳಿನ ಬೇಡಿಕೆ ತೀವ್ರವಾಗುತ್ತಿದ್ದಂತೆ ಎಂ-ಸ್ಯಾಂಡ್ ಮರಳು ಬಳಕೆಗೆ ಬಂದಿತು. 2016 ರಿಂದ ಹೆಚ್ಚು ಬಳಕೆಗೆ ಬರಲಾರಂಭಿಸಿದ ಎಂ-ಸ್ಯಾಂಡ್ ಕಟ್ಟಡ ನಿರ್ಮಾಣ ಕಾಮಗಾರಿಯ ಕೊರತೆ ನೀಗಿಸಿತು ಎನ್ನಬಹುದು. ಇಷ್ಟಾದರೂ ಮರಳಿನ ಬೇಡಿಕೆ ಎಲ್ಲ ಕಡೆ ಇದ್ದೇ ಇದೆ. ನಿರ್ಮಾಣ ಕ್ಷೇತ್ರವು ಈಗ ನೈಸರ್ಗಿಕ ಮರಳಿನ ಬದಲು ಕ್ರಷರ್ ಮೂಲಕ ತಯಾರಿಸುವ ಅಥವಾ ಎಂ-ಸ್ಯಾಂಡ್ ಬಳಕೆಯನ್ನೇ ಹೆಚ್ಚು ಅವಲಂಬಿಸಿದೆ. ಎಂ- ಸ್ಯಾಂಡ್ ಕೃತಕ ಮರಳಿನ ಒಂದು ರೂಪವಾಗಿದ್ದು, ಗಟ್ಟಿ ಕಲ್ಲುಗಳನ್ನು, ಬಂಡೆಗಳನ್ನು ಸೂಕ್ಷ್ಮ ಕಣಗಳಾಗಿ ಪುಡಿ ಮಾಡಿ ತಯಾರಿಸಲಾಗುತ್ತದೆ. ನಂತರ ಅದನ್ನು ತೊಳೆದು ನುಣ್ಣಗೆ ಶ್ರೇಣೀಕರಿಸಲಾಗುತ್ತದೆ. ಇದನ್ನು ಕಾಂಕ್ರೀಟ್ ಮತ್ತು ಗಾರೆ ಮಿಶ್ರಣದ ಉತ್ಪಾದನೆಯಲ್ಲಿ ನಿರ್ಮಾಣ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಕರಡು ರೂಪದಲ್ಲಿಯೆ ಇದ್ದ ಹೊಸ ಮರಳು ನೀತಿ ಇದೀಗ ದಿಢೀರ್ ಕಾನೂನಾಗಿ ಪರಿವರ್ತನೆಗೊಂಡಿದೆ. ಇಷ್ಟು ವರ್ಷಗಳ ಕಾಲ ತೆವಳುತ್ತಾ ಸಾಗಿದ್ದ ಈ ನೀತಿ ಈಗ ಕಾನೂನಿನ ಸ್ವರೂಪ ಪಡೆದುಕೊಂಡಿರುವುದರ ಹಿಂದೆ ಮುಂಬರುವ ಚುನಾವಣೆಗಳ ದೃಷ್ಟಿ ಇರಬಹುದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಹೊಸ ಮರಳು ನೀತಿಯ ಪರ- ವಿರೋಧದ ಚರ್ಚೆಗಳು ಏನೇ ಇರಲಿ ಜನತೆಗೆ ಹೊರೆಯಾಗದಂತೆ ಸುಲಭವಾಗಿ ಮರಳು ಸಿಗುವಂತಾಗಲಿ. ಈ ನೀತಿ ಮತ್ತಷ್ಟು ಅಕ್ರಮಗಳಿಗೆ ಅವಕಾಶ ನೀಡದಿರಲಿ ಎಂಬುದು ಪ್ರಜ್ಞಾವಂತರ ಆಶಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ