ಬೆಂಗಳೂರು:
ಲೋಕಸಭೆ ಚುನಾವಣೆ 2024ರ ಮೊದಲ ಹಂತದ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತದಾನ ಮತ್ತು ಫಲಿತಾಂಶದ 48 ಗಂಟೆ ಮೊದಲು ಮದ್ಯ ಮಾರಾಟ ಮಾಡುವಂತಿಲ್ಲ ಎಂದು ನಗರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಮತದಾನದ ದಿನ ಹಾಗೂ ಫಲಿತಾಂಶದ ದಿನದ 48 ಗಂಟೆಗಳ ಮೊದಲು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಮಂಗಳವಾರ ಆದೇಶ ಹೊರಡಿಸಿದ್ದು, ಏಪ್ರಿಲ್ 24ರ ಸಂಜೆ 6 ರಿಂದ ಏಪ್ರಿಲ್ 26 ರ ಮಧ್ಯರಾತ್ರಿ 12 ರವರೆಗೆ ಮತ್ತು ನಂತರ ಜೂನ್ 3 ರಂದು ಮಧ್ಯರಾತ್ರಿ 12 ರಿಂದ ಜೂನ್ 5 ರ ಮಧ್ಯರಾತ್ರಿ 12 ರವರೆಗೆ ಮದ್ಯ ಮಾರಾಟ ನಿಷೇಧ ಜಾರಿಯಲ್ಲಿರುತ್ತದೆ.
ಈ ಅವಧಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ, ಬಳಕೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ವೈನ್ ಸ್ಟೋರ್‌ಗಳು, ಬಾರ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಕ್ಲಬ್‌ಗಳು ಅಥವಾ ಮದ್ಯ ಮಾರಾಟ ಮಾಡುವ ಯಾವುದೇ ಖಾಸಗಿ ಸ್ಥಳಗಳನ್ನು ನಿಷೇಧದ ಸಮಯದಲ್ಲಿ ಮುಚ್ಚಬೇಕು. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುವುದು. ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.