ತುಮಕೂರು : ಹೊರರಾಜ್ಯಗಳಿಂದ ಬಂದವರ ಸಂಖ್ಯೆ 24 ಕ್ಕೆ ಏರಿಕೆ!!

 ತುಮಕೂರು:

      ಕೊರೊನಾ ಲಾಕ್‍ಡೌನ್ ಕಾರಣದಿಂದ ದೇಶದ ವಿವಿಧ ರಾಜ್ಯಗಳಲ್ಲೇ ಉಳಿದುಹೋಗಿದ್ದ ಮೂಲತಃ ತುಮಕೂರು ನಗರದ ನಿವಾಸಿಗಳು ಮತ್ತೆ ತುಮಕೂರು ನಗರಕ್ಕೆ ವಾಪಸ್ಸಾಗುತ್ತಿದ್ದು, ಇಂಥವರ ಸಂಖ್ಯೆ 24 ಕ್ಕೆ ಏರಿದೆ.

      ಮೇ 9 ರಿಂದ ಹೊರರಾಜ್ಯಗಳಿಂದ ತುಮಕೂರು ನಗರಕ್ಕೆ ಬರುವ ಪ್ರಕ್ರಿಯೆ ಆರಂಭವಾಗಿದ್ದು, ಅಂದಿನಿಂದ ಮೇ 12 ರವರೆಗೆ 24 ಜನರು ಹಿಂತಿರುಗಿದ್ದು, ಅವರೆಲ್ಲರನ್ನೂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

9 ಮಹಿಳೆಯರು:

      ಮೇ 9 ರಂದು ಒಬ್ಬರು, 10 ರಂದು ಐವರು, 11 ರಂದು ಮೂವರು ಹಾಗೂ ಮೇ 12 ರಂದು 15 ಜನರು ತುಮಕೂರು ನಗರಕ್ಕೆ ವಾಪಸ್ಸಾಗಿದ್ದಾರೆ. ಸರಿಸುಮಾರು 20 ರಿಂದ 70 ವರ್ಷ ವಯೋಮಾನದ ಇವರಲ್ಲಿ, 9 ಜನ ಮಹಿಳೆಯರೂ ಇದ್ದಾರೆ.

      ವಿವಿಧ ಕಾರಣಗಳಿಂದ ಇವರುಗಳು ಗುಜರಾತ್, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ತೆರಳಿದ್ದು, ಲಾಕ್‍ಡೌನ್ ಆದಾಗಿನಿಂದಲೂ ಅಲ್ಲೇ ಅನಿವಾರ್ಯವಾಗಿ ಉಳಿದಿದ್ದರು.

      ಲಾಕ್‍ಡೌನ್ ಸಡಿಲಿಕೆ ಬಳಿಕ ಅಲ್ಲಿಂದ ತಮ್ಮ ಸ್ವಸ್ಥಳವಾದ ತುಮಕೂರು ನಗರಕ್ಕೆ ಅವರುಗಳು ವಾಪಸ್ಸಾಗಿದ್ದಾರೆ. ಇವರುಗಳು ತುಮಕೂರು ನಗರಕ್ಕೆ ಬಂದ ತಕ್ಷಣವೇ ಅಧಿಕಾರಿಗಳ ತಂಡದವರು ಇವರ ಆರೋಗ್ಯ ತಪಾಸಣೆ ಮಾಡಿಸಿದ್ದು, ಸ್ಯಾಂಪಲ್‍ಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಲಾಗಿದೆ. ಬಳಿಕ ಇವರನ್ನು ತುಮಕೂರು ನಗರದ ವಿವಿಧ ಖಾಸಗಿ ಲಾಡ್ಜ್‍ಗಳಲ್ಲಿ ಮತ್ತು ಸರ್ಕಾರಿ ಹಾಸ್ಟೆಲ್‍ಗಳಲ್ಲಿ 14 ದಿನಗಳ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇವರೆಲ್ಲರೂ ಅಧಿಕಾರಿಗಳ ತಂಡದ ನಿಗಾದಲ್ಲಿ ಇದ್ದಾರೆ. ಇವರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸದಿದ್ದರೆ, ಬಳಿಕ ಅವರವರ ಮನೆಗಳಿಗೆ ಕಳಿಸಲಾಗುವುದು. ಈಗ ಬಂದಿರುವ ಈ 24 ಜನರಲ್ಲಿ ವಲಸೆ ಕಾರ್ಮಿಕರು ಯಾರೂ ಇಲ್ಲ. ಇವರೆಲ್ಲರೂ ಪ್ರವಾಸದ ಕಾರಣದಿಂದಲೋ ಅಥವಾ ಉದ್ಯೋಗದ ಕಾರಣದಿಂದಲೋ ಹೊರ ರಾಜ್ಯಗಳಿಗೆ ಹೋಗಿದ್ದವರೆನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap