ಮಕ್ಕಳ ಬಿಸಿಯೂಟಕ್ಕೆ ಹುಳು ಬಿದ್ದ ಪಡಿತರ

ಗುಬ್ಬಿ:

ಹಳ್ಳ ಹಿಡಿದ ಅಕ್ಷರ ದಾಸೋಹ : ಅಸಹಾಯಕತೆ ತೋರಿದ ಶಿಕ್ಷಕರು

     ಕಳೆದ 2 ವರ್ಷಗಳಿಂದ ಇಡೀ ದೇಶ ಕೊರೋನದ ಸಂಕಷ್ಟದಲ್ಲಿ ನಲುಗಿ ಹೋಗಿದ್ದರೂ ನಮ್ಮ ಸರ್ಕಾರದ ವ್ಯವಸ್ಥೆಗಳು ಇನ್ನೂ ಸರಿ ಹೋಗಿಲ್ಲ ಎನ್ನುವುದಕ್ಕೆ ಕರ್ನಾಟಕ ಸರ್ಕಾರದ ಬಿಸಿಯೂಟ ಕಾರ್ಯಕ್ರಮವೇ ಸಾಕ್ಷಿಯಾಗಿದೆ.

ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸರ್ಕಾರ ಪೂರೈಸಿರುವ ಅಕ್ಕಿ, ಬೇಳೆ, ಗೋಧಿಗೆ ಹುಳು ಬಿದ್ದಿದ್ದು, ಮಕ್ಕಳು ತಿನ್ನಲು ಯೋಗ್ಯವಾಗಿಲ್ಲ.

ತಾಲ್ಲೂಕಿನ ಸುಮಾರು 20 ಶಾಲೆಗಳಿಗೆ ಪತ್ರಿಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿ ಶಾಲೆಯ ಮುಖ್ಯಸ್ಥರು ಪಡಿತರ ಸಾಮಗ್ರಿಗಳನ್ನು ಪತ್ರಿಕೆಗೆ ತೋರಿಸಿ ಉತ್ತಮ ಆಹಾರ ಧಾನ್ಯಗಳನ್ನು ನೀಡದೆ ಹುಳು ಬಿದ್ದಿರುವ ಬಗ್ಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ.

ಸರ್ಕಾರ ಕೊಟ್ಟಿದ್ದನ್ನು ಶಾಲೆಗಳಿಗೆ ವಿತರಿಸುತ್ತೇವೆ, ಹುಳು ಬಿದ್ದ ಬೇಳೆಯನ್ನು ನೀರಿನಲ್ಲಿ ನೆನೆಹಾಕಿ ಹುಳುಗಳನ್ನು ಬೇರ್ಪಡಿಸಿ ಅಡುಗೆ ಮಾಡಿ ಬಡಿಸುವಂತೆ ಇಲ್ಲಿನ ಅಧಿಕಾರಿಗಳು ಹೇಳುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಮುಖ್ಯ ಶಿಕ್ಷಕರೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಹುಳು ಆಯುವ ಬಿಸಿಯೂಟ ಸಿಬ್ಬಂದಿ:

ಬಿಸಿಯೂಟ ಯೋಜನೆಯಲ್ಲಿ ಪ್ರತಿ ಶಾಲೆಯಲ್ಲಿ ಅಡುಗೆ ತಯಾರಕರು ಹಾಗೂ ಅವರಿಗೆ ಸಹಾಯಕರು ಇದ್ದು, ಸರ್ಕಾರ ಇವರುಗಳಿಗೆ ಸುಮಾರು 6 ತಿಂಗಳಿನಿಂದ ಸಂಬಳ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿದೆ. ಆದರೂ ಅಡುಗೆ ತಯಾರಕರು ಹಾಗೂ ಸಹಾಯಕರು ಅಕ್ಷರ ದಾಸೋಹಕ್ಕೆಂದು ನೀಡುವ ಪಡಿತರದಲ್ಲಿರುವ ಕಸ-ಕಡ್ಡಿ, ಹುಳುಗಳನ್ನು ಆಯಲು ಶ್ರಮಿಸುತ್ತಿದ್ದಾರೆ.

ಜೈ ಹನುಮಾನ್ ಏಜೆನ್ಸಿಯಿಂದ ಪೂರೈಕೆ :

ತಾಲ್ಲೂಕಿನಾದ್ಯಂತ ಜೈ ಹನುಮಾನ್ ಏಜೆನ್ಸಿಯ ಶ್ರೀನಿವಾಸ್ ಅವರು ಆಹಾರ ನಿಗಮದಿಂದ ಗುಬ್ಬಿ ತಾಲ್ಲೂಕಿನ ಅನುದಾನಿತ ಹಾಗೂ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಬಿಸಿಯೂಟಕ್ಕೆ ಬೇಕಾದಂತಹ ಪದಾರ್ಥಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆದಿದ್ದು ಸಹಾಯಕ ನಿರ್ದೇಶಕರ ಅನುಮತಿ ಮೇರೆಗೆ ಆಯಾ ಶಾಲೆಗಳಿಗೆ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ.

ಮೊದಲು ಪರೀಕ್ಷಿಸಬೇಕು :

ಆಹಾರ ಪದಾರ್ಥಗಳನ್ನು ವಿತರಿಸುವ ಮೊದಲು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಪ್ರತಿಯೊಂದು ಆಹಾರ ಪದಾರ್ಥಗಳನ್ನು ಪರೀಕ್ಷಿಸುವುದು ಅವರ ಜವಾಬ್ದಾರಿ. ಆದರೇ ಇವರ ಬೇಜವಾಬ್ದಾರಿ ತನದಿಂದ ಇಡೀ ತಾಲ್ಲೂಕಿನ ಬಿಸಿಯೂಟ ಸೇವಿಸುವ ಮಕ್ಕಳು ಅಕ್ಕಿ, ಬೇಳೆ, ಗೋಧಿಯನ್ನು ಹುಳು ಸಮೇತ ತಿನ್ನುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ತನಿಖೆಗೆ ಆಗ್ರಹ :

ಶಾಲಾಭಿವೃದ್ದಿ ಸಮಿತಿಯ ಕೆಲ ಅಧ್ಯಕ್ಷರನ್ನು ಶಾಲೆಗೆ ಕರೆಸಿ ಶಾಲೆಯ ಅವ್ಯವಸ್ಥೆಯ ಬಗ್ಗೆ ವಿಚಾರಿಸಿದಾಗ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಲ್ಲದೆ, ಪಡಿತರ ಮೇಲ್ವಿಚಾರಣೆಯ ಅಧಿಕಾರಿಯ ಬೇಜವಾಬ್ದಾರಿಯನ್ನು ತಮ್ಮ ಸಿಟ್ಟಿನ ಮೂಲಕ ಬೈದುಕೊಂಡರು.

ಮಕ್ಕಳ ಊಟಕ್ಕೆ ಕಳಪೆ ಪಡಿತರ ನೀಡಿ ಪ್ರತಿ ತಿಂಗಳು ಗುತ್ತಿಗೆದಾರನಿಂದ ಎಷ್ಟು ಲಂಚ ಪಡೆಯುತ್ತಿದ್ದಾರೆ ಎಂಬುದು ತನಿಖೆಯಾಗಲಿ ಅವರು ಎಂದು ಕಿಡಿಕಾರಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಲಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದು, 2 ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಪೋಷಕರು ದೂರುತ್ತಿದ್ದಾರೆ.

ಹೋರಾಟದ ಎಚ್ಚರಿಕೆ :

ಗುಬ್ಬಿ ನಗರದ ಬಂಗ್ಲೋಪಾಳ್ಯ ಶಾಲೆಯ ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷರಾದ ತಿಮ್ಮರಾಜು ಅವರು ಅಕ್ಷರ ದಾಸೋಹದ ಪಡಿತರ ಧಾನ್ಯದಲ್ಲಿ ಹುಳುಗಳು ಇರುವುದನ್ನು ಗಮನಿಸಿ, ಈ ಶಾಲೆಯಲ್ಲಿ ಹರಿಜನ, ಕೂಲಿ ಕಾರ್ಮಿಕರು, ರೈತಾಪಿ ವರ್ಗದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಯಾರೂ ಅನ್ನವಿಲ್ಲವೆಂದು ಶಾಲೆಗೆ ಬರುತ್ತಿಲ್ಲ.

ಸರ್ಕಾರ ನೀಡುವ ಈ ಸೌಲಭ್ಯವನ್ನು ಭ್ರಷ್ಟ ಅಧಿಕಾರಿಗಳು ಅವರ ಅನುಕೂಲಕೋಸ್ಕರ ಮಕ್ಕಳಿಗೆ ಹುಳುಬಿದ್ದ ಪಡಿತರವನ್ನು ನೀಡುತ್ತಿದ್ದು ಈ ಬಗ್ಗೆ ಮೇಲಧಿಕಾರಿಗಳು ಜಾಗೃತರಾಗಿ ಕೂಡಲೇ ಕ್ರಮ ವಹಿಸದಿದ್ದರೆ ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿದರು.

ಸರ್ಕಾರ ವಿತರಿಸುತ್ತಿರುವ ಪಡಿತರ ಪದಾರ್ಥಗಳು ಮಕ್ಕಳಿಗೆ ಅಡುಗೆ ತಯಾರಿಸಲು ಯೋಗ್ಯವಲ್ಲ. ಈ ಧಾನ್ಯಗಳನ್ನು ಸ್ವಚ್ಛ ಮಾಡಿ ನಾವು ಸಾಕಾಗಿ ಹೋಗಿದ್ದೇವೆ.

-ಕೃಷ್ಣಮ್ಮ, ಬಿಸಿಯೂಟ ತಯಾರಕರು,
ಹಿರಿಯ ಪ್ರಾಥಮಿಕ ಪಾಠಶಾಲೆ, ಗುಬ್ಬಿ ಹೊಸಹಳ್ಳಿ

ಸರ್ಕಾರ ನೀಡುವ ಪಡಿತರವನ್ನು ಪ್ರತಿ ಶಾಲೆಗೂ ನೀಡುತ್ತೇವೆ. ಕೆಲವು ದಿನಗಳಿಂದ ಇಂತಹ ಅಚಾತುರ್ಯಗಳು ನಡೆದಿದ್ದು, ಈಗಾಗಲೇ ಪ್ರತಿ ಶಾಲೆಯ ಮುಖ್ಯೋಪಾಧ್ಯಾಯರಿಗೂ ಪಡಿತರವನ್ನು ವಾಪಸ್ಸು ನೀಡಲು ಲಿಖಿತವಾಗಿ ತಿಳಿಸಿದ್ದೇನೆ.

-ಯೋಗಾನಂದ್, ಪ್ರಭಾರ ಸಹಾಯಕ ನಿರ್ದೇಶಕರು,
ಅಕ್ಷರ ದಾಸೋಹ ಕಾರ್ಯಕ್ರಮ, ಗುಬ್ಬಿ ತಾಲ್ಲೂಕು

           -ರಾಜೇಶ್‍ಗುಬ್ಬಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ