ಯಶವಂತಪುರ-ಬೀದರ್ ರೈಲು ಪುನಃ ಆರಂಭ….!

ಬೆಂಗಳೂರು :

   ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕಕ್ಕೆ ಸಂಚಾರ ನಡೆಸುವ ಜನರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಯಶವಂತಪುರ-ಬೀದರ್ ರೈಲು ಸೇವೆಯನ್ನು ಪುನಃ ಆರಂಭಿಸಲಾಗಿದೆ. ಈ ರೈಲು ಸೇವೆ ಆರಂಭಿಸಲು ಬೀದರ್ ಸಂಸದ ಸಾಗರ್ ಖಂಡ್ರೆ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. 

   ಈ ಕುರಿತು ಸಾಗರ್ ಖಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ನಮ್ಮ ಬೀದರ್ ಲೋಕಸಭಾ ಕ್ಷೇತ್ರದ ನಾಗರಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನಾನು ಡಿಸೆಂಬರ್ ತಿಂಗಳಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ, ಸ್ಥಗಿತಗೊಂಡಿದ್ದ ಯಶವಂತಪುರ-ಬೀದರ್ (16577/ 78) ರೈಲು ಸೇವೆಯನ್ನು ಮರುಪ್ರಾರಂಭಿಸುವಂತೆ ಮನವಿ ಮಾಡಿದ್ದೆ’ ಎಂದು ಹೇಳಿದ್ದಾರೆ.

   ‘ಮನವಿಗೆ ಸ್ಪಂದನೆ ದೊರೆತಿದ್ದು, ಈ ರೈಲು ಸೇವೆ ಇದೀಗ ಮತ್ತೆ ಪ್ರಾರಂಭವಾಗಿದ್ದು ಖುಷಿಯ ಸಂಗತಿ’ ಎಂದು ಸಂಸದರು ಪೋಸ್ಟ್ ಹಾಕಿದ್ದಾರೆ. ಈ ರೈಲು ವಾರದಲ್ಲಿ ಎರಡು ದಿನಗಳ ಕಾಲ ಯಶವಂತಪುರ-ಬೀದರ್ ನಡುವೆ ಸಂಚಾರವನ್ನು ನಡೆಸಲಿದೆ. ಯಶವಂತಪುರ-ಬೀದರ್ ರೈಲು ಸೇವೆ ಪುನಃ ಆರಂಭವಾಗಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸಲು ಮತ್ತು ವೇಳಾಪಟ್ಟಿಗಾಗಿ ರೈಲ್ವೆ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ. ರೈಲು ಸೇವೆಯಲ್ಲಿ ಬದಲಾವಣೆ: ಮೈಸೂರು ವಿಭಾಗದ ಹಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಕಾಲುವೆ ದಾಟುವ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ರೈಲು ಸಂಚಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

    ರೈಲುಗಳ ಸಂಚಾರ ರದ್ದು. ಏಪ್ರಿಲ್ 8, 10, 12, 14, 29, ಮೇ 3, 10 ಮತ್ತು ಜೂನ್ 10, 2025ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದಾಗಲಿದೆ.

   ಜೂನ್ 10, 2025 ರಂದು ರೈಲು ಸಂಖ್ಯೆ 16206 ಮೈಸೂರು-ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲುಗಳು ರದ್ದಾಗಲಿವೆ. * ರೈಲುಗಳ ಸಂಚಾರ ಭಾಗಶಃ ರದ್ದು. ಏಪ್ರಿಲ್ 8, 10, 12, 14, 29, ಮೇ 3, 10 ಮತ್ತು ಜೂನ್ 10, 2025 ರಂದು ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರು-ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಮೈಸೂರಿನ ಬದಲು ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.

   ರೈಲುಗಳ ನಿಯಂತ್ರಣ/ ತಡವಾಗಿ ಪ್ರಾರಂಭ. ಜೂನ್ 10, 2025ರಂದು ರೈಲು ಸಂಖ್ಯೆ 56266 ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು ಮಾರ್ಗ ಮಧ್ಯದಲ್ಲಿ60 ನಿಮಿಷ ನಿಯಂತ್ರಿಸಲಾಗುತ್ತದೆ. * ಜೂನ್ 10, 2025ರಂದು ರೈಲು ಸಂಖ್ಯೆ 56265 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 06269 ಮೈಸೂರು-ಎಸ್ಎಂಐಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲುಗಳು ತಮ್ಮ ಮೂಲ ನಿಲ್ದಾಣದಿಂದ 60 ನಿಮಿಷ ತಡವಾಗಿ ಹೊರಡಲಿವೆ.