ಮಂಡ್ಯ:
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಸುಲಭವಲ್ಲ. ನವೆಂಬರ್ ಕ್ರಾಂತಿ ಆಗಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದೆ. ಡಿಕೆಶಿಯನ್ನು ಬಿಜೆಪಿಗೆ ಕರೆತಂದರೆ ನಾವೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ಹಿಂದೆ ಡಿಕೆಶಿಯನ್ನು ಬಿಜೆಪಿಗೆ ಕರೆತರುವ ಪ್ಲ್ಯಾನ್ ಇತ್ತು. ನಾನು ಉಚ್ಚಾಟನೆ ಆದ ದಿನ ರಾಷ್ಟ್ರೀಯ ನಾಯಕರೊಬ್ಬರು ನನಗೆ ಕರೆ ಮಾಡಿದ್ದರು. ಡಿಕೆಶಿ ಸಿಎಂ, ವಿಜಯೇಂದ್ರ ಡಿಸಿಎಂ ಆಗುವ ಪ್ಲ್ಯಾನ್ ನಡೆಯುತ್ತಿದೆ ಎಂದಿದ್ದರು. ಡಿಕೆಶಿ 90 ಶಾಸಕರನ್ನು ಕರೆತರುತ್ತಾರೆ ಎಂದುಕೊಂಡಿದ್ದರು. ಆದರೆ, 15 ಜನ ಶಾಸಕರಷ್ಟೇ ಡಿಕೆಶಿ ಪರ ಅಂತ ಗೊತ್ತಾದಮೇಲೆ ಪ್ಲಾನ್ ಕೈಬಿಟ್ಟರು ಎಂದು ಲೇವಡಿ ಮಾಡಿದ್ದಾರೆ.
ಇನ್ನು ನವೆಂಬರ್ ಕ್ರಾಂತಿ ಏನು ಅಂತ ಗೊತ್ತಿಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದಲ್ಲಿ ನವೆಂಬರ್ ಕ್ರಾಂತಿ ಆಗಬಹುದು. ಶಾಸಕರಲ್ಲಿ ಅಸಮಾಧಾನ ಇದೆ. ಅಭಿವೃದ್ಧಿಗೆ ಹಣ ಸಿಗ್ತಿಲ್ಲ, ಅಸಮಾಧಾನ ಇದೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆನೇ ಕ್ರಾಂತಿ. ಮೂಲ ಬಿಜೆಪಿ ಇವರ ಕೈನಲ್ಲಿದ್ದಾರೆ ಎಂದರು.
ರಾಜಕಾರಣದಲ್ಲಿ ಮಾಟಮಂತ್ರ ಮಾಡುವವರು ಇದ್ದಾರೆ. ಬಿಜೆಪಿಯಲ್ಲಿ ಮಾಟಮಂತ್ರ ಮಾಡುವ ಒಂದು ಕುಟುಂಬ ಇದೆ. ಯತ್ನಾಳ್ ಹಾಳಾಗಲಿ ಎಂದು ಪೂಜೆ ಮಾಡಿಸಿ ಬರ್ತಾರೆ. ಆದರೆ ನನಗೆ ಯಾವುದೇ ಮಾಟಮಂತ್ರ ತಗುಲುವುದಿಲ್ಲ. ಕುಮಾರಸ್ವಾಮಿ ಆರೋಗ್ಯ ಹಾಳಾಗಲು ಮಾಟಮಂತ್ರ ಕಾರಣ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ನನ್ನ ಉಚ್ಚಾಟನೆ ಮಾಡಿದ್ದು ಬಿಜೆಪಿಯೇ ಹೊರತು ಜನರಲ್ಲ. ಹಿಂದೂಗಳ ಮತಗಳ ವಿಭಜನೆ ನನ್ನ ಉದ್ದೇಶ ಅಲ್ಲ. ಹೊಸ ಪಕ್ಷ ಕಟ್ಟಿದ್ರೆ ನಮಗೆ ಲಾಭ ಎಂದು ಸಿದ್ದರಾಮಯ್ಯ ಹೇಳಿದ್ರು. ಒಂದು ಕುಟುಂಬ ಇಲ್ಲದಿದ್ರೆ ಬಿಜೆಪಿ ಮುಳುಗುತ್ತದೆ ಎಂಬ ಭಾವನೆ ಬಿತ್ತಿದ್ರು. ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಮುಳುಗತ್ತದೆ ಎಂಬ ಭಾವನೆ ಹೈಕಮಾಂಡ್‌ಗೆ ತರಿಸಿದ್ರು. ಆದರೆ ಈ ಬಾರಿಯ ಗಣೇಶೋತ್ಸವದಿಂದ ಭಾವನೆ ಬದಲಾಗಿದೆ. ಯುಪಿ ಯೋಗಿ ಮಾದರಿಯ ಬಿಜೆಪಿಯನ್ನು ರಾಜ್ಯದ ಜನರು ಬಯಸುತ್ತಿದ್ದಾರೆ. ಯಡಿಯೂರಪ್ಪ ಕುಟುಂಬದ ಜತೆ ನನ್ನ ಸಂಧಾನ ಇಲ್ಲ. ಒಂದಿಬ್ಬರು ಬಿಜೆಪಿ ಎಂಪಿ ಬಿಟ್ಟರೆ ಎಲ್ಲರೂ ನನ್ನ ಉಚ್ಚಾಟನೆಗೆ ವಿರೋಧವಿದೆ. ಹಿಂದೂಗಳ ಸಂಘಟನೆ ನನ್ನ ಗುರಿ. ಹಿಂದೂಗಳ ಪರವಾಗಿ ಗಟ್ಟಿಧ್ವನಿ ಬೇಕಾಗಿದೆ. ಅದಕ್ಕಾಗಿ ರಾಜ್ಯ ಪ್ರವಾಸ ಮಾಡ್ತಿದ್ದೇನೆ ಎಂದು ತಿಳಿಸಿದರು.
ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿಷೇಧ ಹೇರುವ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರಿ ಸ್ಥಳಗಳಲ್ಲಿ ನಡೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳನ್ನು, ಪಥಸಂಚಲನ, ಬೈಠಕ್‌ಗಳನ್ನು ನಿಷೇಧಿಸಬೇಕೆಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಖ್ಯ ಮಂತ್ರಿಗಳಿಗೆ ಬರೆದಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಕರ ಪಡೆ ಹೊಂದಿರುವ ಆರ್.ಎಸ್.ಎಸ್. ನ ನಿಷೇಧಕ್ಕೆ ಕರೆ ಕೊಟ್ಟಿರುವುದು ಇವರ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್, ಅಪಘಾತಗಳು, ಭೂಕಂಪ, ನೆರೆಯಾದಾಗ ನೊಂದವರಿಗೆ ಮೊದಲು ಆಸರೆಯಾಗುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು. ಸೇವಾತತ್ಪರತೆ, ಸಮಾಜ ಸೇವೆ, ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿ, ಶಿಸ್ತಿಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಹಗಲು ರಾತ್ರಿ ಎನ್ನದೇ ನಿಸ್ವಾರ್ಥ ಸೇವೆ ನೀಡುವ ಪ್ರಪಂಚದ ಏಕೈಕ ಸಂಘಟನೆಯಾಗಿದೆ. ಮನ ಮನೆಗಳನ್ನು ಬೆಸೆದುಕೊಳ್ಳುತ್ತಿರುವ ಸಂಘ ಚಿಂತನೆ ವ್ಯಾಪಿಸಿದ ಮತ್ತು ವ್ಯಾಪಿಸುತ್ತಿರುವ ರೀತಿ ಅನನ್ಯ.
ಸಂಘವನ್ನು ನಿಷೇದ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ವಿರೋಧಿಗಳು ಪ್ರೀತಿಸುವ, ಗೌರವಿಸುವ ಜಗತ್ತಿನ ಏಕೈಕ ಸಂಘಟನೆಯೇ ಆರ್.ಎಸ್.ಎಸ್. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟು ಸ್ವಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಶ್ರೀ ಪ್ರಿಯಾಂಕ್ ಖರ್ಗೆ ಅವರು ಶ್ರಮಿಸಲಿ. ಅಷ್ಟಕ್ಕೂ, ನಿಷೇಧಗೊಳಿಸಬೇಕಾಗಿದ್ದರೆ ಕೂಡಲೇ ಎಸ್.ಡಿ.ಪಿ.ಐ ನಂತ ದೇಶ ವಿರೋಧಿ ಸಂಘಟನೆಗಳನ್ನು ನಿಷೇದ ಮಾಡಲಿ. ಅನ್ಯ ಕೋಮಿನ ಹಬ್ಬಗಳಂದು ತಲ್ವಾರ್ ತೋರಿಸಿ ಬೀದಿಗಳಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವ ಪುಂಡರ ಹೆಡೆಮುರಿಕಟ್ಟಲಿ.
ಬಕ್ರೀದ್ ಸೇರಿದಂತೆ ಇತರ ಹಬ್ಬಗಳಲ್ಲಿ ಆಗುವ ಪ್ರಾಣಿಬಲಿಯನ್ನು ನಿಷೇಧಿಸಲಿ. ಆಂಗ್ಲ, ವಿಜ್ಞಾನ, ಗಣಿತ, ಸಮಾಜ ಹೇಳಿಕೊಡದೆ ದ್ವೇಷ, ಬೇರೆ ಧರ್ಮಗಳ ಬಗ್ಗೆ ತಪ್ಪು ವಿಚಾರಗಳನ್ನು ಕಲಿಸುವ ಮದರಸಗಳನ್ನು ನಿಷೇಧ ಮಾಡಲಿ. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಕರೆಸಿಕೊಳ್ಳುವ ಹಾಗೂ ಅವರೇ ಪ್ರತಿನಿಧಿಸುವ ಕಲ್ಬುರ್ಗಿಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲಿ. ಸಂಘದ ನಿಷೇದ ಕನಸಿನ ಮಾತು ಎಂದು ತಿಳಿಸಿದ್ದಾರೆ.








