ಬೆಳಗಾವಿ:
ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಸಚಿವ ಪಾಟೀಲ್ ಅವರೇ ಇಂತಹ ಕಠಿಣ ಕ್ರಮಕ್ಕೆ ಮುಂದಾದರೆ ತಾನು 5 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ಶಿವಾನಂದ ಪಾಟೀಲ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡರೆ 50 ಕೋಟಿ ರೂಪಾಯಿ ಪರಿಹಾರವನ್ನು ನೀಡುವುದಾಗಿ ಯತ್ನಾಳ್ ಹೇಳಿದರು.
ಶಿವಾನಂದ ಪಾಟೀಲ್ ಅವರು ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದನ್ನು ಚಿಕ್ಕೋಡಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಯತ್ನಾಳ್ ಸ್ಮರಿಸಿದರು. ‘ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಪಾಟೀಲ್ ಅವರಿಗೆ ಆ ಸಮಯದಲ್ಲಿ ನಾನು ಹೇಳಿದ್ದೆ ಮತ್ತು ಇಂದು ಕೂಡ ನನ್ನ ಹೇಳಿಕೆಯನ್ನು ಪುನರಾವರ್ತಿಸುತ್ತಿದ್ದೇನೆ’. ನನ್ನ ಬಳಿ ಹಣ ಇಲ್ಲದಿದ್ದರೂ ರೈತರಿಂದ ಸಂಗ್ರಹಿಸಿ ಅವರ ಕುಟುಂಬಕ್ಕೆ ಪರಿಹಾರ ನೀಡುತ್ತೇನೆ ಎಂದು ಹೇಳಿದರು.
ಹಿಂದೂ ಪದವನ್ನು ಕೊಳಕು ಎಂದು ಕರೆದಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಮಗಳು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೊದಲು ಸ್ಮಶಾನದಲ್ಲಿ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿದ ಅವರು ಈಗ ದೇವಸ್ಥಾನಗಳತ್ತ ಮುಖ ಮಾಡಿದ್ದಾರೆ. ಇನ್ನೂ ಎಷ್ಟು ದಿನ ನೀವು ಅವರಿಗೆ (ಜಾರಕಿಹೊಳಿ) ಸಾಹುಕಾರ ಎಂದು ಕರೆದು ಸೆಲ್ಯೂಟ್ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವೀರೇಶ್ ಕಮಿಟಿ ಬರುವ ಮುನ್ನ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದ್ದವು. ಮೊದಲು 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಪರಿಹಾರ ಹೆಚ್ಚಳವಾದ ನಂತರ ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಮಾಡಿಕೊಂಡ ಎಲ್ಲವನ್ನೂ ಪರಿಹಾರದ ಆಸೆಗಾಗಿ ‘ರೈತ ಆತ್ಮಹತ್ಯೆ’ ಪ್ರಕರಣ ಎಂದು ದಾಖಲಿಸಲಾಗುತ್ತಿದೆ. ಹೀಗೆ ದಾಖಲಾದ ಪ್ರಕರಣಗಳಲ್ಲಿ ಸತ್ಯಾಂಶ ಕಡಿಮೆ ಇರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿ 2020ರಲ್ಲಿ 500, 2021ರಲ್ಲಿ 595, 2022ರಲ್ಲಿ 651 ಹಾಗೂ 2023ರಲ್ಲಿ 412 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ನಿಜವಾದ ರೈತ ಆತ್ಮಹತ್ಯೆ ಪ್ರಕರಣಗಳಿಗೆ, ಪರಿಹಾರ ಕೊಡಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಶಿವಾನಂದ ಪಾಟೀಲ್ ಕಳೆದ ವರ್ಷ ಹೇಳಿದ್ದರು.