ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ್ದು, ಜುಲೈ 31 ಮತ್ತು ಆಗಸ್ಟ್ 1 ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎರಡು ದಿನ ಪ್ರವೇಶ ನಿಷೇಧಿಸಲಾಗಿದೆ.
ಅತಿಯಾದ ಮಳೆಯಿಂದ ದುಬಾರೆ, ಹಾರಂಗಿ ಸಾಕಾನೆ ಶಿಬಿರಗಳನ್ನು ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜುಲೈ 31 ಮತ್ತು ಆಗಸ್ಟ್ 1 ರಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ ಎಂದು ಕೊಡಗು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರಿ ಮಳೆಯಿಂದ ಜಿಲ್ಲೆಯ ಕೆಲವು ರಸ್ತೆ ಸಂಪರ್ಕಗಳು ಅಲ್ಲಲ್ಲಿ ಕಡಿತಗೊಂಡಿದ್ದು, ಜುಲೈ 31 ಮತ್ತು ಆಗಸ್ಟ್ 1 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲು ಇಚ್ಛಿಸುವವರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ.
ಕರ್ನಾಟಕದ ಮಲೆನಾಡು ಭಾಗ ಮತ್ತು ಕೇರಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ನಿರಂತರ ಮಳೆಯಿಂದಾಗಿ ಶಿರಾಡಿ, ಚಿಕ್ಕಮಗಳೂರು, ಚಾರ್ಮಾಡಿ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಸೇರಿ ವಿವಿಧೆಡೆ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಸಂಭವಿಸಿದೆ.