ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಫೋಟ; ಯೋಧ ಹುತಾತ್ಮ

ರಾಂಚಿ: 

    ಜಾರ್ಖಂಡ್‌ನಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಫೋಟಗೊಂಡು ಗಾಯಗೊಂಡಿದ್ದ ಸಿಆರ್‌ಪಿಎಫ್  ಜವಾನರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು  ಶನಿವಾರ ತಿಳಿಸಿದ್ದಾರೆ. ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಜರೈಕೇಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಡೇರಾ-ಸಮತಾ ಅಕ್ಷದ ಮಾವೋವಾದಿ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಶುಕ್ರವಾರ ಅರೆಸೈನಿಕ ಪಡೆ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ.

    ಕಾರ್ಯಾಚರಣೆಯ ಸಮಯದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ)ದಿಂದ ಹೆಡ್ ಕಾನ್‌ಸ್ಟೆಬಲ್ ಮಹೇಂದ್ರ ಲಸ್ಕರ್ (45) ಗಾಯಗೊಂಡಿದ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಸ್ಕರ್ ಅಸ್ಸಾಂ ಮೂಲದವರಾಗಿದ್ದು, ಸಿಆರ್‌ಪಿಎಫ್‌ನ 60 ನೇ ಬೆಟಾಲಿಯನ್‌ಗೆ ಸೇರಿದವರು.

   ಕಳೆದ ವಾರ ಪಶ್ಚಿಮ ಸಿಂಗ್‌ಭೂಮ್‌ನ ಸಾರಂಡಾ ಕಾಡಿನಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಹಾವು ಕಚ್ಚಿದ ನಂತರ ಸಿಆರ್‌ಪಿಎಫ್ ಯೋಧ ಮೃತಪಟ್ಟಿದ್ದರು. ಜಾರ್ಖಂಡ್ ಪೊಲೀಸ್ ಪ್ರಧಾನ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ, 209 ಕೋಬ್ರಾ ಬೆಟಾಲಿಯನ್ ಸಾರಂಡಾದ ಛೋಟಾ ನಗರ ಕಾಡುಗಳಲ್ಲಿ ಮಾವೋವಾದಿಗಳ ವಿರುದ್ಧ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಈವೇಳೆ, ಉತ್ತರ ಪ್ರದೇಶದ ದಿಯೋರಿಯಾ ಮೂಲದ ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಅವರಿಗೆ ವಿಷಪೂರಿತ ಹಾವು ಕಚ್ಚಿದೆ. ಹಾವು ಕಡಿತದ ಬಗ್ಗೆ ಮಾಹಿತಿ ಪಡೆದ ತಕ್ಷಣ, ಅವರನ್ನು ಕೊಲೆಬಿರಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಂದೀಪ್ ಕುಮಾರ್ ಮೃತಪಟ್ಟಿದ್ದಾರೆ. 

   ಪ್ರತ್ಯೇಕ ಘಟನೆಯಲ್ಲಿ, ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿರಿಯ ಮಾವೋವಾದಿ ಕಮಾಂಡರ್ ಮೋಡೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್ ಮತ್ತು ಇತರ 9 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಎನ್‌ಕೌಂಟರ್ ಬಗ್ಗೆ ವಿವರ ನೀಡಿದ ರಾಯ್‌ಪುರ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಮರೇಶ್ ಮಿಶ್ರಾ, ಈ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link