ಶ್ರೀನಗರ:
ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಿಂದ 40 ಸಿಆರ್ಪಿಎಫ್ ಯೋಧರು ಬಲಿಯಾದ ಘಟನೆ ಸಂಭವಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ಗಲಭೆಗಳು ಭುಗಿಲೆದ್ದಿವೆ. ಜಮ್ಮು ನಗರವಂತೂ ಅಕ್ಷರಶಃ ಹೊತ್ತಿ ಉರಿದಿದೆ. ಗಲಭೆಗಳಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ವರದಿಯಾಗಿದೆ.
ಹಲವಾರು ವಾಹನಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿ ಸುಟ್ಟುಹೋಗಿವೆ. ಜಮ್ಮುವಿನಲ್ಲಿ ಪರಿಸ್ಥಿತಿಯುವ ಕೋಮುಗಲಭೆಗೆ ಎಡೆ ಮಾಡಿಕೊಡುವ ಅಪಾಯವಿರುವ ಹಿನ್ನೆಲೆಯಲ್ಲಿ ಅಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆಯಲು ಸೇನೆಯ ನೆರವು ಪಡೆಯಲಾಗುತ್ತಿದೆ.
ಜಮ್ಮುವಿನ ಗುಜ್ಜರ್ ನಗರ್ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಗಲಭೆಗಳಾಗಿ ಕಲ್ಲುತೂರಾಟವಾಗಿದೆ. ಪೊಲೀಸರು ಸರಿಯಾದ ಸಮಯಕ್ಕೆ ಧಾವಿಸಿ ಪರಿಸ್ಥಿತಿ ಕೈಮೀರುವುದನ್ನು ತಪ್ಪಿಸಿದ್ದಾರೆ.
ಜಮ್ಮು ನಗರದ ಜಿವೆಲ್ ಚೌಕ್, ಪುರಾನೀ ಮಂಡಿ, ರೇಹಾರಿ, ಶಕ್ತಿನಗರ್, ಪಕ್ಕಾ ದಂಗಾ, ಜಾನಿಪುರ್, ಗಾಂಧಿನಗರ್ ಮತ್ತು ಬಕ್ಷಿನಗರ್ ಮೊದಲಾದ ಕಡೆ ಜನರು ಬೀದಿಗಿಳಿದು ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜರಂಗ ದಳ, ಶಿವಸೇನಾ, ದೋಗ್ರಾ ಫ್ರಂಟ್ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಸಿದರು.
