ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ : ವೈ ಎಸ್‌ ವಿ ದತ್ತಾಗಿಲ್ಲ ಕೈ ಟಿಕೆಟ್‌

ಬೆಂಗಳೂರು

     ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತಾ ಸೇರಿದಂತೆ ಕೆಲವರಿಗೆ ಟಿಕೆಟ್ ದೊರೆತಿಲ್ಲ.

      ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕೋಲಾರ ಕ್ಷೇತ್ರಕ್ಕೆ ಮತ್ತು ಚನ್ನಪಟ್ಟಣ ದಲ್ಲಿ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಈ ಪಟ್ಟಿಯಲ್ಲಿ ಉತ್ತರ ಸಿಕ್ಕಿಲ್ಲ. ತುಮಕೂರು ನಗರ ಕ್ಷೇತ್ರದಿಂದ ಇಕ್ಬಾಲ್ ಅಹ್ಮದ್, ತೀರ್ಥಹಳ್ಳಿಯಿಂದ ಕಿಮ್ಮನೆರತ್ನಾಕರ್, ಮಂಡ್ಯ ನಗರದಿಂದ ಪಿ.ರವಿಕುಮಾರ್, ಚಾಮುಂಡೇಶ್ವರಿಯಿAದ ಸಿದ್ದೇಗೌಡ ಇವರುಗಳಿಗೆ ಟಿಕೆಟ್ ನೀಡಲಾಗಿದೆ.

     ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಎರಡನೇ ಪಟ್ಟಿಯಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ. ಈ ಮೂಲಕ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೂ 58 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.

     ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ನೀಡಲು ವಿರೋಧ ಇರುವ ಹಿನ್ನೆಲೆಯಲ್ಲಿ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಈ ಬಾರಿಯೂ ಘೋಷಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಟಿಕೆಟ್ ಘೋಷಣೆ ಆಗದ ಹಿನ್ನೆಲೆಯಲ್ಲಿ ಅವರು ಜಮೀರ್ ಅಹ್ಮದ್ ಖಾನ್ ಮೂಲಕ ಸಾಕಷ್ಟು ಲಾಬಿ ನಡೆಸಿದ್ದರು. ಜೊತೆಗೆ ಲಿಂಗಸುಗೂರಿನ ಹಾಲಿ ಶಾಸಕ ಡಿಎಸ್ ಹುಲಗೇರಿ, ಹರಿಹರ ಕ್ಷೇತ್ರದ ಹಾಲಿ ಶಾಸಕ ರಾಮಪ್ಪ, ಕುಂದಗೋಳದ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ಘೋಷಣೆ ಆಗಿಲ್ಲ.

     ಕಳೆದ ಬಾರಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಬಾದಾಮಿ ಕ್ಷೇತ್ರದಿಂದ ಭೀಮಸೇನ್ ಬಿ. ಚಿಮ್ಮನಕಟ್ಟಿಗೆ ಟಿಕೆಟ್ ನೀಡಲಾಗಿದೆ. ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾದ ವಿನಯ್ ಕುಲಕರ್ಣಿ ಅವರಿಗೆ ಧಾರವಾಡದಿಂದ ಟಿಕೆಟ್ ನೀಡಲಾಗಿದೆ. ಇತ್ತ, ಕಡೂರು ಕ್ಷೇತ್ರದಲ್ಲಿ ವೈ.ಎಸ್.ವಿ ದತ್ತ ಬದಲಿಗೆ ಆನಂದ್‌ಗೆ ಟಿಕೆಟ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

     ಜೆಡಿಎಸ್ ಬಿಟ್ಟು ಬಂದಿದ್ದ ಎಸ್.ಆರ್ ಶ್ರೀನಿವಾಸ್ ಅವರಿಗೆ ಗುಬ್ಬಿ, ಇತ್ತೀಚೆಗೆ ಬಿಜೆಪಿ ತೊರೆದಿದ್ದ ಕೂಡ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ನಿಂದ ಟಿಕೆಟ್ ನೀಡಲಾಗಿದೆ. ಮತ್ತೊಂದೆಡೆ ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ಕೆ.ಪಿ. ವಿರೇಂದ್ರಗೆ (ಪಪ್ಪಿ) ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ.

     ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಪದ್ಮನಾಭನಗರದಿಂದ ವಿ.ರಘುನಾಥ ನಾಯ್ಡು, ಮೈಸೂರು ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದೇಗೌಡ (ಮಾವಿನಹಳ್ಳಿ ಸಿದ್ದೇಗೌಡ) ಅವರಿಗೆ ಮಣೆ ಹಾಕಲಾಗಿದ್ದು, ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ವಿರುದ್ಧ ಸೆಣಸಲಿದ್ದಾರೆ.

     ಬಾಗಲಕೋಟೆ ಜಿಲ್ಕೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ಬಾಗಲಕೋಟೆ ಕ್ಷೇತ್ರದಿಂದ ಎಚ್.ವೈ. ಮೇಟಿ, ಗುರುಮಠಕಲ್ ಕ್ಷೇತ್ರಕ್ಕೆ ಬಾಬುರಾವ್ ಚಿಂಚನಸೂರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.

    ಈಗಾಗಲೇ ಹುನಗುಂದ, ಜಮಖಂಡಿ ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದೆ. ತೇರದಾಳ ಕ್ಷೇತ್ರಕ್ಕೆ ಉಮಾಶ್ರೀ ಸೇರಿದಂತೆ ಹಲವರು ಆಕಾಂಕ್ಷಿಗಳು ಇರುವುದರಿಂದ ಒಮ್ಮತ ಮೂಡದ್ದರಿಂದ ಘೋಷಣೆ ಮಾಡಿಲ್ಲ. ಶಿರಸಿ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ, ಯಲ್ಲಾಪುರ ಕ್ಷೇತ್ರಕ್ಕೆ ವಿ.ಎಸ್.ಪಾಟೀಲ್ ಅವರನ್ನು ಅಭ್ಯರ್ಥಿಯಾಗಿಸಲಾಗಿದೆ. ಪೈಪೋಟಿ ಹೆಚ್ಚಿರುವ ಕುಮಟಾ ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಳಿಸಿಲ್ಲ.

      ಉಳಿದ ಕ್ಷೇತ್ರಗಳಿಗೆ 3ನೇ ಪಟ್ಟಿಯನ್ನು ಏ. 10ರ ನಂತರ ಬಿಡುಗಡೆ ಮಾಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ವಿಜಯ್‌ಧರ್ಮಸಿಂಗ್‌ರವರಿಗೆ ಬಸವ ಕಲ್ಯಾಣದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದ್ದು, ಜೆಡಿಎಸ್‌ನಿಂದ ಅರಕಲಗೂಡಿನಿಂದ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಎ. ಮಂಜುನಾಥ್ ಅವರ ಪುತ್ರ ಡಾ. ಮಂಥರ್‌ಗೌಡ ಅವರಿಗೆ ಮಡಿಕೇರಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

     ಮಾಜಿ ಸಚಿವರಾದ ಸಂತೋಷ್ ಲಾಡ್, ಕಲಘಟಗಿಯಿಂದ ಹೆಚ್. ಆಂಜನೇಯ, ಹೊಳಲ್ಕೆರೆಯಿಂದ ಗಂಡಸಿ ಶಿವರಾಂ, ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಎಸ್. ಬಾಲಾಜಿಗೌಡ, ಮಹಾಲಕ್ಷ್ಮಿ  ಲೇಔಟ್ ಕ್ಷೇತ್ರದಿಂದ ಕೇಶವಮೂರ್ತಿ, ಪದ್ಮನಾಭನಗರದಿಂದ ರಘುನಾಥ್‌ನಾಯ್ಡು, ಯಲಹಂಕದಿAದ ಕೇಶವರಾಜಣ್ಣ, ಕೊಳ್ಳೆಗಾಲದಿಂದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಇವರುಗಳಿಗೂ 2ನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap