ಈ ಬಾರಿಯ ಯುವ ದಸರಾ ವೈಶಿಷ್ಟ್ಯ ಏನು ಗೊತ್ತಾ….?

ಮೈಸೂರು:

   ಈ ವರ್ಷ ಮರೆಯಲಾಗದ ಯುವ ದಸರಾಕ್ಕೆ ಮೈಸೂರು ಸಜ್ಜಾಗಿದ್ದು, ಸಂಗೀತ ರಸಸಂಜೆಯಲ್ಲಿ ಸಂಗೀತ ಕ್ಷೇತ್ರದ ದಿಗ್ಗಜ ಕಲಾವಿದರಾದ ಇಳಿಯರಾಜ, ಎ.ಆರ್.ರೆಹಮಾನ್ ಮತ್ತು ಶ್ರೇಯಾ ಘೋಷಾಲ್ ಸೇರಿದಂತೆ ಹಲವರು ಸಂಗೀತ ಸುಧೆ ಹರಿಸಲಿದ್ದಾರೆ .ಯುವ ದಸರಾ ಸಮಿತಿಯಿಂದ ಅ.6ರಿಂದ 10ರವರೆಗೆ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.6ರಂದು ಅಶ್ವಿನಿ ಪುನೀತ್ ರಾಜ್‌ಕುಮರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಾಲ್ಕು ದಿನಗಳ ಕಾಲ ಸಂಜೆ 6ರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

   ಅಕ್ಟೋಬರ್ 6ರಂದು ಬಾಲಿವುಡ್‌ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್, ಅ.7ರಂದು ಸಂಗೀತ ಸಂಯೋಜಕ ರವಿ ಬಸ್ರೂರು, ಅ.8ರಂದು ಖ್ಯಾತ ರಾಪರ್ ಬಾದ್ ಷಾ, ಅ.9ರಂದು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಅ.10ರಂದು ಸಂಗೀತ ಸಂಯೋಜಕ, ನಿರ್ದೇಶಕ ಇಳಯರಾಜ ಮತ್ತು ಅವರ ತಂಡ ಪ್ರೇಕ್ಷಕರಿಗೆ ಸಂಗೀತ ರಸಸಂಜೆ ಉಣಬಡಿಸಲಿದ್ದಾರೆ.

   ಯುವ ದಸರಾ ಕಾರ್ಯಕ್ರಮಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸುಮಾರು ಒಂದು ಲಕ್ಷ ಜನ ವೀಕ್ಷಿಸಬಹುದಾಗಿದೆ. ಅಲ್ಲದೇ, ವೀಕ್ಷಣೆಗೆ ಟಿಕೆಟ್ ಆಧರಿತ ಪ್ರತ್ಯೇಕ ಆಸನ ವ್ಯವಸ್ಥೆಯನ್ನೂ ಮಾಡಲಾಗುತ್ತಿದ್ದು, ಆಸನ ಕಾಯ್ದಿರಿಸಲು ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಧಿಕೃತ ಜಾಲತಾಣ www.mysoredasara.gov.in ಹಾಗೂ ಬುಕ್ ಮೈ ಶೋ ಮೂಲಕ ಸೆ.27ರಿಂದ ಟಿಕೆಟ್ ಖರೀದಿಸಬಹುದು.

   ಕಾರ್ಯಕ್ರಮ ವೀಕ್ಷಕರಿಗೆ ಕಾಯ್ದಿರಿಸಲಾಗುವ ವೀಕ್ಷಕರ ಗ್ಯಾಲರಿ-1ರ ವೇದಿಕೆ ಸಮೀಪದ ಟಿಕೆಟ್ ಬೆಲೆ ರೂ.8,000 ಹಾಗೂ ವೀಕ್ಷಕರ ಗ್ಯಾಲರಿ-2 ಕ್ಕೆ ರೂ.5,000 ನಿಗದಿಪಡಿಸಲಾಗಿದೆ. ಒಂದು ಟಿಕೆಟ್‌ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ.

   ಪ್ರತೀ ವರ್ಷ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಕಾರ್ಯಕ್ರಮವನ್ನು ಇನ್ನಷ್ಟು ಅದ್ಧೂರಿಯಾಗಿ ಆಚರಿಸುವ ದೃಷ್ಟಿಯಿಂದ ಲಲಿತಾದ್ರಿಪುರ ಮತ್ತು ಉತ್ತನಹಳ್ಳಿ ನಡುವಿನ ಖಾಲಿ ಜಮೀನಿನಲ್ಲಿ ಆಯೋಜಿಸಲಾಗುತ್ತಿದೆ.

   ಸುಮಾರು 100 ಎಕರೆಯಷ್ಟು ಕೃಷಿ ಭೂಮಿಯನ್ನು ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದ್ದು, 1 ಲಕ್ಷ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.ಈ ನಡುವೆ ಯುವ ದಸರಾ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿರುವ ಸಂಬಂಧ ಪರ ಹಾಗೂ ವಿರೋಧ ಚರ್ಚೆಗಳು ಆರಂಭವಾಗಿವೆ.ನಗರದ ಹೊರವಲಯದ ಒಂದು ಮೂಲೆಯಲ್ಲಿ ಕಾರ್ಯಕ್ರಮ ನಡೆದರೆ ಓಡಾಟಕ್ಕೆ ತೊಂದರೆ ಆಗಲಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

   ನಗರದ ಹೃದಯ ಭಾಗದಲ್ಲಿ ಕಾರ್ಯಕ್ರಮ ನಡೆದರೆ ಅನುಕೂಲ ಹೆಚ್ಚು. ಬರುವವರಿಗೆ ಬೇಕಾದ ಊಟೋಪಚಾರ ಸೇರಿದಂತೆ ಸಕಲೆಂಟು ಸೌಲಭ್ಯಗಳು ಸಿಗುತ್ತವೆ. ಆದರೆ, ಕಾರ್ಯಕ್ರಮ ವೀಕ್ಷಣೆಗೆ ಹೊರವಲಯಕ್ಕೆ ಹೋಗುವುದು ಕಷ್ಟ. ವೀಕ್ಷಕರಿಗೆ ಬೇಕಾದ ಮೂಲ ಸೌಕರ್ಯಗಳೂ ಇರುವುದಿಲ್ಲ. ಅದರಲ್ಲೂ ಮಹಿಳೆಯರ ಓಡಾಟ ಹಾಗೂ ಸುರಕ್ಷತೆ ದೃಷ್ಟಿಯಿಂದ ಮಹಾರಾಜ ಕಾಲೇಜು ಮೈದಾನವೇ ಕಾರ್ಯಕ್ರಮಕ್ಕೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

   ಇನ್ನೂ ಕೆಲವರು ವಿಶಾಲವಾದ ಪ್ರದೇಶವಾದ ಕಾರಣ ಟ್ರಾಫಿಕ್ ಸಮಸ್ಯೆ ಉದ್ಭವಿಸಲ್ಲ. ಸಾವಿರಾರು ಕಾರು, ಬೈಕ್’ಗಳ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದು. ಲಕ್ಷ‌ ಮಂದಿ‌ ಕಾರ್ಯಕ್ರಮ ವೀಕ್ಷಣೆ ಮಾಡಿದರೂ ಜನದಟ್ಟಣೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ.

Recent Articles

spot_img

Related Stories

Share via
Copy link
Powered by Social Snap