ಮುಂಬೈ:
ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅನ್ವಿ ಕಾಮ್ದಾರ್ ರೀಲ್ ಮಾಡುತ್ತಿರುವ ವೇಳೆ 300 ಅಡಿ ಆಳದ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಸುದ್ದಿ ವರದಿಯಾಗಿತ್ತು. ಇದೀಗ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಪಿಕ್‍ನಿಕ್‌ಗೆ ಬಂದಿದ್ದು, ಜಲಪಾತದ ಪಕ್ಕದಲ್ಲಿ ನಿಂತು ರೀಲ್ಸ್ ಮಾಡುತ್ತಿರುವ ವೇಳೆ ನೀರಿನ ರಭಸಕ್ಕೆ ಜಲಪಾತದಿಂದ 150 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆ ರಾಜಸ್ಥಾನದ ಮೆನಾಲ್ ಜಲಪಾತದ ಬಳಿ ನಡೆದಿದೆ.
ಮೃತ ಯುವಕ ಭಿಲ್ವಾರಾ ಜಿಲ್ಲೆಯ ಭವಾನಿ ನಗರದ ನಿವಾಸಿ ಕನ್ಹಯ್ಯಾಲಾಲ್ ಬೈರ್ವಾ (26) ಎಂದು ಗುರುತಿಸಲಾಗಿದೆ. ತನ್ನ ಐದಾರು ಗೆಳೆಯರೊಂದಿಗೆ ಬಂದಿದ್ದ ರಭಸದಿಂದ ಹರಿಯುತ್ತಿದ್ದ ನೀರಿನ ಮಧ್ಯೆ ರೀಲ್ಸ್ ಮಾಡಲು ಮುಂದಾಗಿದ್ದಾನೆ. ಜಲಪಾತದ ನಡುವೆ ಪ್ರವಾಸಿಗರ ಸುರಕ್ಷತೆಗಾಗಿ ಸರಪಳಿಯನ್ನು ಹಾಕಲಾಗಿದ್ದು, ಈ ಸರಪಳಿಯ ಸಹಾಯದಿಂದ ಸ್ನೇಹಿತರು ಮಧ್ಯಕ್ಕೆ ಹೋಗಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಕನ್ಹಯ್ಯಾಲಾಲ್ ಕೊಚ್ಚಿ ಹೋಗಿದ್ದು, ಜಲಪಾತದಿಂದ 150 ಅಡಿ ಆಳಕ್ಕೆ ಬಿದ್ದಿದ್ದಾನೆ.
ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಯುವಕ ನೀರಿನಲ್ಲಿ ಸೆಳೆತಕ್ಕೆ ಕೊಚ್ಚಿ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ತಂಡ ಸ್ಥಳಕ್ಕೆ ಬಂದಿದ್ದು, ಸ್ಥಳೀಯರು ಹಾಗೂ ರಕ್ಷಣಾ ತಂಡ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.