ಬುಲವಾಯೊ:
ದಕ್ಷಿಣ ಆಫ್ರಿಕಾ ತಂಡ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಜಿಂಬಾಬ್ವೆ ಪ್ರವಾಸದಲ್ಲಿದೆ. ಜೂನ್ 28 ರಂದು ಬುಲವಾಯೊದಲ್ಲಿ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೂರನೇ ದಿನದಾಟದ ಮುಗಿದಿದ್ದು, ದ್ವಿತೀಯ ಇನಿಂಗ್ಸ್‌ನಲ್ಲಿ ಜಿಂಬಾಬ್ವೆ, ಒಂದು ವಿಕೆಟ್ ಕಳೆದುಕೊಂಡು 32 ರನ್‌ಗಳಿಸಿದೆ. ದಕ್ಷಿಣ ಆಫ್ರಿಕಾ, ಆತಿಥೇಯ ತಂಡಕ್ಕೆ 537 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಜಿಂಬಾಬ್ವೆಗೆ ಈ ಮೊತ್ತದ ಗುರಿಯನ್ನು ಚೇಸ್ ಮಾಡುವುದು ಕಷ್ಟಕರವಾಗಿದೆ. ಜಿಂಬಾಬ್ವೆ ತಂಡಕ್ಕೆ ನಾಲ್ಕನೇ ದಿನದ ಆಟದಲ್ಲಿ ಗೆಲ್ಲಲು 505 ರನ್‌ಗಳ ಅಗತ್ಯವಿದೆ.
ದ್ವಿತೀಯ ಇನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದ ವಿಯಾನ್ ಮುಲ್ಡರ್ ದಕ್ಷಿಣ ಆಫ್ರಿಕಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಅದ್ಭುತ ಶತಕವನ್ನು ಗಳಿಸಿದರು. ಮುಲ್ಡರ್ 206 ಎಸೆತಗಳನ್ನು ಎದುರಿಸುವ ಮೂಲಕ 17 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 147 ರನ್ ಗಳಿಸಿದ್ದಾರೆ. ಮುಲ್ಡರ್ ಜೊತೆಗೆ, ನಾಯಕ ಕೇಶವ್ ಮಹಾರಾಜ್ ಕೂಡ ಅರ್ಧಶತಕ (51) ಗಳಿಸಿದರು. ಇದರ ಹೊರತಾಗಿ, ಕೈಲ್ ವಾರ್ನೆನ್ ಮತ್ತು ಕಾರ್ಬಿನ್ ಬಾಷ್ ತಲಾ 36 ರನ್ ಗಳಿಸಿದರು. ಟೋನಿ ಡಿ ಜಾರ್ಜಿ ಕೂಡ 31 ರನ್ ಗಳಿಸಿದರು. ವೆಲ್ಲಿಂಗ್ಟನ್ ಮಸಕಡ್ಜಾ 4 ವಿಕೆಟ್ ಪಡೆಯುವ ಮೂಲಕ ಜಿಂಬಾಬ್ವೆ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.
ಬುಲವಾಯೊದ ಕ್ವೀನ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಕೇಶವ್ ಮಹಾರಾಜ್ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಲುಹಾನ್ ಡ್ರೆ ಪ್ರಿಟೋರಿಯಸ್ ಅವರ ಶತಕ (153) ಮತ್ತು ಕಾರ್ಬಿನ್ ಬಾಷ್ ಅವರ (100) ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳಿಗೆ 418 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಜಿಂಬಾಬ್ವೆ ಪರ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತನಕಾ ಚಿವಾಂಗಾ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದರು.
ಇದಾದ ನಂತರ, ಜಿಂಬಾಬ್ವೆ ಪ್ರಥಮ ಇನಿಂಗ್ಸ್‌ನಲ್ಲಿ 251 ರನ್‌ಗಳಿಗೆ ಆಲೌಟ್ ಆಯಿತು ಮತ್ತು ದಕ್ಷಿಣ ಆಫ್ರಿಕಾ 167 ರನ್‌ಗಳ ಮುನ್ನಡೆ ಸಾಧಿಸಿತು. ಆತಿಥೇಯ ತಂಡದ ಪರ ಸೀನ್ ವಿಲಿಯಮ್ಸ್ ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಗಳಿಸಿದರು. ಅವರು 137 ರನ್‌ಗಳನ್ನು ಗಳಿಸಿದರು. ದಕ್ಷಿಣ ಆಫ್ರಿಕಾ ಪರ ವಿಯಾನ್ ಮುಲ್ಡರ್ ಗರಿಷ್ಠ 4 ವಿಕೆಟ್‌ಗಳನ್ನು ಪಡೆದರು.
ತೆಂಬಾ ಬವೂಮ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ, ಇತ್ತೀಚೆಗೆ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡಿತ್ತು. ಇದೀಗ ಜಿಂಬಾಬ್ವೆ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯವನ್ನು ಗೆದ್ದು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಭಿಯಾನವನ್ನು ಶುಭಾರಂಭ ಮಾಡಲು ಹರಿಣ ಪಡೆ ಎದುರು ನೋಡುತ್ತಿದೆ.
