ಚಿಕ್ಕನಾಯಕನಹಳ್ಳಿ :
ಎ.ಜೆ.ಸದಾಶಿವ ವರದಿ ಜಾರಿಗಾಗಿ ಒತ್ತಾಯಿಸಿ ಕರ್ನಾಟಕ ಮಾದಿಗ ದಂಡೋರ ಸಮಿತಿ ವತಿಯಿಂದ ಸೆಪ್ಟಂಬರ್ 24ರಂದು ತಮಟೆ ಚಳುವಳಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ತಿಳಿಸಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 21 ವರ್ಷಗಳ ನಿರಂತರವಾಗಿ ಸದಾಶಿವ ವರದಿ ಜಾರಿಗಾಗಿ ಒತ್ತಾಯಿಸಿ ಉರುಳುಸೇವೆ, ತಮಟೆ ಚಳುವಳಿ ರೀತಿ ವಿಭಿನ್ನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಾಂತಯುತವಾಗಿ ಒತ್ತಾಯಿಸಲಾಗುತ್ತಿದೆ, ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಈಗಿನ ಸಮ್ಮಿಶ್ರ ಸರ್ಕಾರದ ಎಲ್ಲಾ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ ಇದುವರೆಗೂ ನಮ್ಮ ಮನವಿಯನ್ನು ಆಲಿಸಿಲ್ಲ, 20ರಿಂದ 22ಕೋಟಿ ಖರ್ಚು ಮಾಡಿ ರಚನೆ ಮಾಡಿರುವ ವರದಿಯನ್ನು ಸರ್ಕಾರ ನಿರ್ಲಕ್ಷಿಸಬಾರದು, ನಮ್ಮ ಮನವಿ ನ್ಯಾಯಬದ್ದವಾಗಿದೆ ಸರ್ಕಾರ ನಮ್ಮ ಮನವಿಯನ್ನು ಸೌಜನ್ಯಕ್ಕಾದರೂ ವರದಿಯನ್ನು ಗಮನಿಸಿ ಅಂಗೀರಿಸಿ, ಇಲ್ಲವಾದರೆ ತಿರಸ್ಕರಿಸಿ ಎಂದು ಹೇಳಿದರು.\
ಗುಜರಾತಿನಲ್ಲಿ ಪಟೇಲ್ ಸಮುದಾಯ ಅವರ ಹಕ್ಕಿಗಾಗಿ ಹಾಗೂ ಮಹರಾಷ್ಟ್ರದಲ್ಲಿ ಮರಾಠರು ಅವರ ಸ್ಥಾನಮಾನಕ್ಕಾಗಿ ದಂಗೆ ಎಬ್ಬಿಸಿದ್ದವು ಅವರ ರೀತಿ ನಾವು ಸರ್ಕಾರದ ಆಸ್ತಿಪಾಸ್ತಿ ನಾಶ ಮಾಡುತ್ತಿಲ್ಲ, ನಮ್ಮ ವರದಿಯನ್ನು ಪುರಸ್ಕರಿಸುವಂತೆ ಶಾಂತಿಯುತವಾಗಿ ಮನವಿ ಮಾಡುತ್ತಿದ್ದೇವೆ ಎಂದ ಅವರು ಹಾವನೂರು ವರದಿ ಪ್ರಕಾರ ನಮ್ಮ ಜನಾಂಗಕ್ಕೆ ಶೇ.57ರಷ್ಟು ಮೀಸಲಾತಿ ಬೇಕು ಎಂದಿದೆ ಆದರೆ ನಾವು ಆ ವರದಿಯನ್ನು ಕೇಳುತ್ತಿಲ್ಲ, ಸದಾಶಿವ ವರದಿ ಪ್ರಕಾರ ಇರುವ ಶೇ.37ರಷ್ಟು ನೀಡಿ ಎನ್ನುತ್ತಿದ್ದೇವೆ ಸದಾಶಿವ ವರದಿಯನ್ನು ಸರ್ಕಾರ ಒಂದು ತಿಂಗಳ ಒಳಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸದೇ ಹೋದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ, ಇಲ್ಲಿವರೆಗೂ ಸರ್ಕಾರದ ಒಂದು ರೂಪಾಯಿ ನಷ್ಠ ಮಾಡದಂತೆ ಹೋರಾಟ ಮಾಡಲಾಗಿದೆ ಮುಂದೆ ನಷ್ಠವಾದರೆ ಅದಕ್ಕೆ ಕಾರಣ ಸರ್ಕಾರದ ನಿರ್ಲಕ್ಷತೆಯಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಆದಿಜಾಂಬವ ಅಭಿವೃದ್ದಿ ನಿಗಮನ್ನು ಘೋಷಣೆ ಮಾಡಿತ್ತು ಆದರೆ ಇದುವರೆಗೂ ನಿಗಮ ಕಾರ್ಯರೂಪಕ್ಕೆ ಬಂದಿಲ್ಲ ಎಂದ ಅವರು, ಕರ್ನಾಟಕ ಸರ್ಕಾರದ 70ವರ್ಷದ ಇತಿಹಾಸದಲ್ಲಿ ಮಾದಿಗ ಸಮಾಜದ ಪ್ರತಿನಿಧಿ ಇಲ್ಲದೆ ಸರ್ಕಾರ ರಚನೆಯಾಗಿಲ್ಲ, 2018ರಲ್ಲಿ ಮಾದಿಗ ಪ್ರತಿನಿಧಿ ಇಲ್ಲದೆ ಸರ್ಕಾರದ ರಚನೆಯಾಗಿದೆ, ಇದು ಸಮಾಜಕ್ಕಾದ ದುರಂತ ಎಂದು ವಿಷಾಧಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾದಿಗ ದಂಡೋರ ಸಮಿತಿಯ ಜಂಟಿ ಕಾರ್ಯದರ್ಶಿ ಬೇವಿನಹಳ್ಳಿಚನ್ನಬಸವಯ್ಯ, ಪ್ರಧಾನ ಕಾರ್ಯದರ್ಶಿ ಹನುಮಂತರಾಜು, ಜಿಲ್ಲಾ ಉಪಾಧ್ಯಕ್ಷ ಈಚನೂರು ಮಹಾದೇವ, ತಾ.ಅಧ್ಯಕ್ಷ ರಂಗಸ್ವಾಮಿ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು
