ಕಂದಾಯ ಗ್ರಾಮ ವಿಚಾರಕ್ಕೆ ಲಕ್ಷ್ಯ ನೀಡದ ಸರ್ಕಾರ

 

ದಾವಣಗೆರೆ:

   ಹಿಂದಿನ ಸರ್ಕಾರ ಖಾಸಗಿ ಮಸೂದೆ ಮಂಡಿಸುವ ಮೂಲಕ ತಾಂಡ, ಹಾಡಿ, ವಾಡಿ, ಕಾಲೋನಿ, ಹಟ್ಟಿ ಸೇರಿದಂತೆ ಇತರೆ ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿತ್ತು. ಆದರೆ, ಇಂದಿನ ರಾಜ್ಯ ಸರ್ಕಾರ ಈ ಕಂದಾಯ ಗ್ರಾಮಗಳ ವಿಚಾರದ ಬಗ್ಗೆ ಹೆಚ್ಚು ಲಕ್ಷ್ಯ ನೀಡುತ್ತಿಲ್ಲ ಎಂದು ಮಾಜಿ ಸಚಿವೆ, ಚಿಂತಕಿ ಬಿ.ಟಿ.ಲಲಿತಾ ನಾಯಕ್ ಆರೋಪಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಸಮಾಜದ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದದ್ದು ಹಾಗೂ ಹಲವು ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ಕಲ್ಪಿಸುವ ಮೂಲಕ ಕ್ರಾಂತಿಕಾರಕ ಹೆಜ್ಜೆ ನೀಡಿತ್ತು. ಆದರೆ, ಇಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಬಗ್ಗೆ ಹೆಚ್ಚು ಲಕ್ಷ್ಯ ನೀಡುತ್ತಿಲ್ಲ ಎಂದು ದೂರಿದರು.

  ಹಿಂದಿನ ಸರ್ಕಾರದ ಅವಧಿಯಲ್ಲಿ ನಮ್ಮ ಸಮುದಾಯದ ಶಾಸಕ ಕೆ.ಶಿವಮೂರ್ತಿ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸಿ, ತಾಂಡ, ಹಾಡಿ, ವಾಡಿ, ಕಾಲೋನಿ, ಹಟ್ಟಿ ಸೇರಿದಂತೆ ಇತರೆ ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮಗಳನ್ನು ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈ ಮಸೂದೆಗೆ ರಾಷ್ಟ್ರಪತಿ ಅವರ ಅಂಕಿತ ಬಿದ್ದಿದ್ದು, ಈ ಎಲ್ಲಾ ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ, ಈಗಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಯಾರದೋ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಕಾರಣ ಕಂದಾಯ ಗ್ರಾಮಗಳ ಸ್ಥಾನಮಾನ ನೀಡಲಾಗುತ್ತಿಲ್ಲ ಎಂಬ ನೆಪ ಹೇಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

   ಯಾವುದೇ ಒಂದು ಸರ್ಕಾರ ಒಂದು ಸಿದ್ಧಾಂತದ ಆಧಾರದ ಮೇಲೆ ನಡೆದು, ಸಂವಿಧಾನದ ಆಶಯಗಳನ್ನು ಸರಿಯಾಗಿ ಚಾಲನೆ ತಂದರೆ ಮಾತ್ರ ಎಲ್ಲಾ ಸಮಸ್ಯೆಗಳು ನಿರ್ಮೂಲನೆಯಾಗಲಿವೆ. ಆದರೆ, ಈ ರಾಜ್ಯ ಸರ್ಕಾರಕ್ಕೆ ಸರಿಯಾದ ಜ್ಞಾನವೂ ಇಲ್ಲ, ಮೌಲ್ಯವೂ ಇಲ್ಲ ಎಂದು ಕಿಡಿಕಾರಿದರು.
ಬಂಜಾರ ಸಮುದಾಯ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಎಷ್ಟು ಬೆಳೆದಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಏಕೆಂದರೆ, ಈ ವರೆಗೂ ನಮ್ಮ ಸಮಾಜದ ಒಬ್ಬರೇ ಒಬ್ಬರು ಸಂಸತ್ ಸದಸ್ಯರು ಸಂಸತ್ ಪ್ರವೇಶಿಸಿಲ್ಲ. ವಾಸ್ತವಾಂಶ ಹೀಗಿರುವಾಗ ಸಂಸತ್‍ನಲ್ಲಿ ನಮ್ಮ ಸಮುದಾಯ ಸೇರಿದಂತೆ ಇತರೆ ಬುಡಕಟ್ಟುಗಳ ಪರವಾಗಿ ಧ್ವನಿ ಎತ್ತುವವರ್ಯಾರು ಎಂದು ಪ್ರಶ್ನಿಸಿದ ಅವರು, ಸರ್ಕಾರಗಳ ಶಾಶ್ವತ ನಿರ್ಲಕ್ಷ್ಯದಿಂದಾಗಿ ಲಂಬಾಣಿ ಸಮುದಾಯ ಇಂದು ಅತ್ಯಂತ ಹಿಂದುಳಿದಿದೆ ಎಂದರು.

  ಇಂದು ನಕಲಿ ಗೋರಕ್ಷಕರು ಕರಾವಳಿ ಭಾಗದಲ್ಲಿ ಮಾಂಸದ ಹೆಸರಿನಲ್ಲಿ ಸಿಕ್ಕ, ಸಿಕ್ಕವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರ್ಯಾರೂ ಸಹ ಗೋರಕ್ಷಕರಲ್ಲ, ಅವರೆಲ್ಲ ಅದರ ಹೆಸರಿನಲ್ಲಿ ರಾಜಕಾರಣ ಮಾಡುವವರು. ನಿಜವಾದ ಗೋರಕ್ಷಕರು ಎಂದರೆ, ಲಂಬಾಣಿ ಸಮುದಾಯ ಸೇರಿದಂತೆ ಇತರೆ ಬುಡಕಟ್ಟು ಸಮುದಾಯದವರು. ನಮ್ಮ ಜನಾಂಗದ ಮೂಲ ಪುರುಷ ಶ್ರೀಕೃಷ್ಣ ಸೇರಿದಂತೆ ಬಡಕಟ್ಟು ಸಮುದಾಯಗಳಿಗೆ ಸೇರಿರುವ ಸಂತರು, ದೇವರುಗಳನ್ನು ಹೈಜಾಕ್ ಮಾಡುವ ಮೂಲಕ ಅವರ ಹೆಸರುಗಳಲ್ಲಿ ದೇವಸ್ಥಾನ, ಸಂಘಗಳನ್ನು ಕಟ್ಟಿಕೊಂಡು ಸರ್ಕಾರದಿಂದ ಅನುದಾನ ಪಡೆದು ಕೆಲವರು ಜೀವನ ನಡೆಸುತ್ತಿದ್ದಾರೆಂದು ಆಪಾದಿಸಿದರು.
ನಮ್ಮ ಸಮುದಾಯದಲ್ಲಿ ಆದರ್ಶ ಅಂತಾ ಹೇಳಿಕೊಳ್ಳಲೂ ಯಾರೂ ಇಲ್ಲ. ಆದ್ದರಿಂದ ಸಮುದಾಯದ ಯುವಕರು ಹೆಚ್ಚು, ಹೆಚ್ಚು ಸಂಶೋಧನೆಗಳನ್ನು ಕೈಗೊಳ್ಳಬೇಕು. ನಾವು ಆಚರಿಸುವ ಹಬ್ಬಗಳು ವೈಚಾರಿಕೆ ನೆಲೆಯಲ್ಲಿ ಇರಬೇಕೇ ಹೊರತು, ಮೌಢ್ಯಕ್ಕೆ ಆಸ್ಪದ ನೀಡುವಂತಿರಬಾರದು ಎಂದರು.

  ಕಾರ್ಯಕ್ರಮ ಉದ್ಘಾಟಿಸಿದ ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಸನ್ಮಾನಿಸುವ ಮೂಲಕ ನಿವೃತ್ತ ನೌಕರರಿಗೆ ಆತ್ಮಸ್ಥೈರ್ಯ ತುಂಬುತ್ತಿರುವುದು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಶಿಕ್ಷಣ ಪಡೆಯಲು ಉತ್ತೇಜನ ನೀಡುತ್ತಿರುವುದು ನಿಜಕ್ಕೂ ಅಭಿನಂದನಾಹ್ವಾಗಿದೆ. ಶಿಕ್ಷಣಕ್ಕೆ ಒತ್ತು ನೀಡಿದರೆ, ಸಮುದಾಯದ ಅಭಿವೃದ್ಧಿಯಾಗಲಿದೆ. ಸಮಾಜ ರಕ್ಷಣೆಯೇ ನನ್ನ ಮುಖ್ಯ ಉದ್ದೇಶವಾಗಿದ್ದು, ಸಮಾಜದ ಹೆಸರಿನಲ್ಲಿರುವ ನಾಲ್ಕೈದು ಸಂಘಟನೆಗಳು ಒಂದೇ ಬ್ಯಾನರ್ ಅಡಿಯಲ್ಲಿ ಬರಲು ಈ ವೇದಿಕೆಯೇ ನಾಂದಿ ಹಾಡಲಿ ಎಂದು ಆಶಿಸಿದರು.

  ಪ್ರಾಸ್ತಾವಿಕ ಮಾತನಾಡಿದ ಹಿರಿಯ ವಕೀಲ ಎನ್.ಜಯದೇವ ನಾಯ್ಕ, ಮೀಸಲಾತಿ ಸೌಲಭ್ಯ ಪಡೆದು ನೌಕರಿ ಪಡೆಯುತ್ತೇವೆ ಎಂಬ ಉದ್ದೇಶದಿಂದ ಯಾರೂ ಓದಬಾರದು. ಏಕೆಂದರೆ, ಈ ಮೀಸಲಾತಿ ಶಾಶ್ವತ ಪರಿಹಾರವಲ್ಲ. ಈಗಾಗಲೇ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಮೀಸಲಾತಿ ಅಡಿಯಲ್ಲಿ ಮುಂಬಡ್ತಿ ಪಡೆದವರಿಗೆ ಹಿಂಬಡ್ತಿ ನೀಡಬೇಕು ಎಂಬುದಾಗಿ ನಿರ್ದೇಶನ ನೀಡಿದೆ. ಅಲ್ಲದೆ, ಅಟ್ರಾಸಿಟಿ ಆಕ್ಟ್ ಅನ್ನು ದುರ್ಬಲ ಗೊಳಿಸುವ ಹುನ್ನಾರ ನಡೆದಿದೆ. ಹೀಗೆ ದೇಶದಲ್ಲಿ 2 ಬಾರೀ ಮೀಸಲಾತಿಗೆ ಕುತ್ತು ಬಂದಿದೆ. ಆದ್ದರಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಸ್ಪರ್ಧೆಯಲ್ಲಿ ಪೈಪೋಟಿ ನೀಡುತ್ತೇವೆಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಪಡೆಯಬೇಕೆಂದು ಕಿವಿಮಾತು ಹೇಳಿದರು.

  ಶೋಷಿತರ ವಿಮುಕ್ತಿಗಾಗಿ ಹೋರಾಡಿದವರು ಆಮೇರಿಕಾದ ಅಬ್ರಾಹಿಂಲಿಂಕನ್, ಭಾರತದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರುಗಳು ಮಾತ್ರ. ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಕೊಡಿಸಲು ಹೋರಾಡಿದ್ದರೆ, ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಲು ಹೋರಾಡಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ 15 ಜನ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು ಹಾಗೂ 65 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಾಜಿ ಶಾಸಕ, ಸಂಘದ ಅಧ್ಯಕ್ಷ ಎಂ.ಬಸವರಾಜ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪಧಾನ ಕಾರ್ಯದರ್ಶಿ ಎಸ್.ನಂಜಾ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಶಿವಮೂರ್ತಿ, ನಿವೃತ್ತ ಕೆಎಎಸ್ ಅಧಿಕಾರಿ ಹೀರಾ ನಾಯ್ಕ, ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೀರಾಲಾಲ್, ಅಪ್ನಾದೇಶ್ ಅಸೋಸಿಯೇಷನ್‍ನ ಉಪಾಧ್ಯಕ್ಷ ಡಾ.ರಾಜಾ ನಾಯ್ಕ, ತಾಂಡ ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಭೋಜ್ಯ ನಾಯ್ಕ, ಕಂದಾಯ ಇಲಾಖೆ ಜಂಟಿ ನಿರ್ದೇಶಕ ರಾಜಾ ನಾಯ್ಕ, ಬಂಜಾರ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಶಂಕರ್, ಜಿ.ಪಂ. ಮಾಜಿ ಉಪಾಧ್ಯಕ್ಷೆ ಗೀತಾ ಗಂಗಾಧರನಾಯ್ಕ, ಜಿ.ಪಂ. ಸದಸ್ಯರುಗಳಾದ ಸಾಕಮ್ಮ ಗಂಗಾಧರ ನಾಯ್ಕ, ಚನ್ನಗಿರಿ ತಾ.ಪಂ. ಪ್ರಭಾರ ಅಧ್ಯಕ್ಷ ಬಾಂಬೆ ಕುಮಾರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link