ಎತ್ತ ಸಾಗಿದೆ ಈ ನನ್ನ ಪಯಣ
ಎತ್ತ ನೋಡಿದರತ್ತ ಕತ್ತಲೆಯ ಕಾನನ
ಚಿರ ನಿದ್ರೆಗೆ ಜಾರ ಬಯಸಿವೆ ನನ್ನೆರಡು ನಯನ
ವಿದಾಯ ಹೇಳಬಯಸಿದೆ ದುಗುಡ ತುಂಬಿದ ಮನ
ಸಾಕಪ್ಪಾ ಸಾಕು ಈ ಹಾಳು ಜೀವನ!
ಓ ಬದುಕೇ ,
ವಿದಾಯದ ವೇಳೆಯಲ್ಲಿ ನಿನಗೊಂದು ಕಾವ್ಯ ನಮನ
ಬದುಕೆಂಬ ಹೊತ್ತಿಗೆಯ ಕೊನೆಯ ಕವನ!
ಓ ಬದುಕೇ,
ನೀನೇಕಿಷ್ಟು ಕ್ರೂರಿ?
ನೀನೇಕಿಷ್ಟು ನಿಷ್ಠೂರಿ?
ನಿರಾಸೆಯ ಕಡಲಲಿ ಇನ್ನೆಷ್ಟು ದೂರ ಈಜಲಿ ನಾ
ದಡ ಸೇರುವ ಭರವಸೆಯಿಲ್ಲ
ನಿರಾಸೆಯ ಕಡಲ ದಡದಲ್ಲಿ
ಭರವಸೆಯ ಬೆಳಕಿದೆಯೆಂದು
ಹೇಗೆ ನಂಬಲಿ ನಾ?
ನಂಬಿಕೆಗೆ ಆದ ಗಾಯ ಮಾಗಿಲ್ಲ!
ಆಲೋಚನೆಗಳ ನಾಗಾಲೋಟಕ್ಕೆ
ಭಾವನೆಗಳ ತೊಳಲಾಟಕ್ಕೆ
ಉತ್ತರವಿಲ್ಲದ ಪ್ರಶ್ನೆಗಳ ಸುರಿಮಳೆಗೆ
ತತ್ತರಿಸಿ ಹೋಗಿರುವೆ ನಾ
ಆಶಾವಾದದ ಮುಖವಾಡ ತೊಟ್ಟ
ನಿರಾಶಾವಾದಿ ನಾ
ಮುಖವಾಡವಿಲ್ಲದ ಬದುಕ ಮತ್ತೇ ಬದುಕುವ ಬಯಕೆ
ಮತ್ತೇ ಗರ್ಭಕೆ ಹೋಗೋ ಬೇಡಿಕೆ