ಕಾನೂನುಬದ್ಧ ಮಾಧ್ಯಮ ನಿಯಂತ್ರಣಕ್ಕಾಗಿ ಸಮಿತಿ ರಚನೆ

ತುಮಕೂರು :

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2018ಕ್ಕೆ ಸಂಬಂಧಿಸಿದಂತೆ ಮುದ್ರಣ, ಶ್ರವಣ, ದೃಶ್ಯ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳ ಕಾನೂನು ಬದ್ಧ ನಿಯಂತ್ರಣಕ್ಕಾಗಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ಸಮಿತಿ ರಚಿಸಲಾಗಿದೆ.

ಯಾವುದೇ ರಾಜಕೀಯ ಪಕ್ಷಗಳಾಗಲೀ ಅಥವಾ ಅಭ್ಯರ್ಥಿಗಳಾಗಲೀ ಜಿಲ್ಲೆಯಲ್ಲಿ ಪ್ರಚಾರವನ್ನು ಕೈಗೊಳ್ಳುವಾಗ ಮುದ್ರಣ, ಶ್ರವಣ ಮತ್ತು ದೃಶ್ಯ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಚಾರ ಸಾಮಗ್ರಿಗಳ ಬಗ್ಗೆ ವಿವರಗಳನ್ನು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಗೆ ಅಗತ್ಯ ನಮೂನೆಗಳಲ್ಲಿ ಭರ್ತಿ ಮಾಡಿ ನೀಡಿ, ಪರಿಶೀಲನಾ ಸಮಿತಿಯ ಅನುಮತಿಯನ್ನು ಪಡೆದುಕೊಳ್ಳಬೇಕು.

ಜಿಲ್ಲಾ ಸಮಿತಿಗೆ ರಾಜಕೀಯ ಪಕ್ಷಗಳಾಗಲೀ ಅಥವಾ ಅಭ್ಯರ್ಥಿಗಳಾಗಲೀ ತಾವು ಪ್ರಚುರ ಪಡಿಸಬೇಕಾದ ಜಾಹೀರಾತು ವಿವರಗಳ ಕರಡನ್ನು ಲಗತ್ತಿಸಿ ಅನುಮತಿಗಾಗಿ ಅರ್ಜಿ ಸಲ್ಲಿಸಿದಾಗ ಅವುಗಳನ್ನು ಪರಿಶೀಲಿಸಿ ಪ್ರಚಾರಕ್ಕೆ ಯೋಗ್ಯ ಹಾಗೂ ಸದಾಚಾರ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಪ್ರಚಾರಕ್ಕೆ ಅನುಮತಿ ದೊರೆಯಲಿದೆ.

ಮುದ್ರಣ, ಶ್ರವಣ ಮತ್ತು ದೃಶ್ಯ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಚಾರವನ್ನು ನೀಡಬಯಸುವ ಪ್ರತಿಯೊಂದು ನೋಂದಾಯಿತ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಮತ್ತು ಪ್ರತಿಯೊಬ್ಬ ಸ್ಪರ್ಧಿಸುವ ಅಭ್ಯರ್ಥಿಯು ಪ್ರಸಾರ ಪ್ರಾರಂಭವಾಗುವ ದಿನಾಂಕಕ್ಕಿಂತ 7 ದಿನಗಳಿಗೆ ಮುನ್ನ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಉದ್ದೇಶಿತ ಜಾಹೀರಾತು ಪ್ರಚಾರದ ಎರಡು ಪ್ರತಿಗಳು ಮತ್ತು ಅದರ ಸಂಭಾಷಣೆಯ ಹಸ್ತ ಪ್ರತಿಯನ್ನು ಲಗತ್ತಿಸಿರಬೇಕು.

ಪ್ರಚಾರದ ಯಾವುದೇ ಭಾಗ ತೆಗೆದು ಹಾಕಲು, ಮಾರ್ಪಡಿಸಲು ಪರಿಶೀಲನಾ ಸಮಿತಿಗೆ ಅಧಿಕಾರವಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link