ಬೆಂಗಳೂರು:
ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ಇದನ್ನು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಿಂದುಗಳ ಉತ್ಸವವಾದ ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧಗಳನ್ನು ವಿಧಿಸುತ್ತಿರುವುದು ಖಂಡನೀಯ. ಭಾವೈಕ್ಯ ಮತ್ತು ಸದ್ಭಾವದ ಪ್ರತೀಕವಾಗಿ ಆಚರಿಸಲ್ಪಡುತ್ತಿರುವ ಗಣೇಶೋತ್ಸವವು ಸುಗಮವಾಗಿ ನಡೆಯುವಂತೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದಿದ್ದಾರೆ.ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲು ರೂ. 5 ಸಾವಿರ ಠೇವಣಿ ಇಡಬೇಕು ಎನ್ನುವ ನಿರ್ಬಂಧ ತೀರಾ ಅವೈಜ್ಞಾನಿಕವಾದುದು. ಈ ಕುರಿತು ಅಗ್ನಿಶಾಮಕ ದಳದ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ ಎಂದಿದ್ದಾರೆ.
