ಜ್ಞಾನವಾಪಿ ಮಸೀದಿ ಪ್ರಕರಣ: ಸುಪ್ರೀಂ ಮಹತ್ವದ ವಿಚಾರಣೆ

ನವದೆಹಲಿ:

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಸರ್ವೆ ವಿರುದ್ಧ ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿಯ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು (ಮೇ 17) ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಪಿ ಎಸ್ ನರಸಿಂಹ ಅವರ ಪೀಠವು ವಾರಣಾಸಿಯ ಜ್ಞಾನವಾಪಿ ಮಸೀದಿಯ ವ್ಯವಹಾರಗಳನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿಯ ನಿರ್ವಹಣಾ ಸಮಿತಿಯ ಮನವಿಯನ್ನು ಆಲಿಸಲಿದೆ.

ಸತತ ಮೂರನೇ ದಿನವೂ ನಡೆದ ಜ್ಞಾನವಾಪಿ ಮಸೀದಿ ಸಂಕೀರ್ಣದ ನ್ಯಾಯಾಲಯದ ಆದೇಶದ ವಿಡಿಯೊಗ್ರಫಿ ಸಮೀಕ್ಷೆಯು ಬಿಗಿ ಭದ್ರತೆಯ ನಡುವೆ (ಮೇ16) ಸೋಮವಾರ ಮುಕ್ತಾಯಗೊಂಡಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಮಸೀದಿ ಸಂಕೀರ್ಣದ ಸಮೀಕ್ಷೆಯು 10:15 ರ ಸುಮಾರಿಗೆ ಕೊನೆ ಹಂತದ ಸಮೀಕ್ಷೆ ಮುಕ್ತಾಯಗೊಂಡಿದೆ.

ಕಳೆದ ವಾರ ಮಸೀದಿ ಸಮಿತಿಯ ಆಕ್ಷೇಪದ ನಡುವೆ ಸಮೀಕ್ಷೆಯನ್ನು ಸ್ಥಗಿತಗೊಳಿಸಲಾಗಿತ್ತು. ಸಮೀಕ್ಷೆಗಾಗಿ ನ್ಯಾಯಾಲಯವು ನೇಮಿಸಿದ ಅಜಯ್ ಕುಮಾರ್ ಮಿಶ್ರಾ ಆವರಣದೊಳಗೆ ಚಿತ್ರೀಕರಿಸುವ ಅವಕಾಶ ನೀಡದಿರಲು ಸಮಿತಿ ನಿರ್ಧರಿಸಿತ್ತು. ಸಮೀಕ್ಷೆಗಾಗಿ ನೇಮಕಗೊಂಡಿರುವ ಅಜಯ್ ಕುಮಾರ್ ಮಿಶ್ರಾ ಅವರನ್ನು ಬದಲಾಯಿಸಲು ಮಸೀದಿ ಸಮಿತಿಯು ಮನವಿ ಮಾಡಿತ್ತು. ಅವರು ಏಕ ಪಕ್ಷೀಯವಾಗಿ ಸಮೀಕ್ಷೆ ನಡೆಸುತ್ತಾರೆ ಎಂದು ಸಮಿತಿ ವಾದಿಸಿತ್ತು. ಅಜಯ್ ಕುಮಾರ್ ಮಿಶ್ರಾ ಆವರಣದೊಳಗೆ ಚಿತ್ರೀಕರಿಸಲು ಅವಕಾಶ ನೀಡದೇ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದರು. ಹೀಗಾಗಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಸಮೀಕ್ಷೆ ಆರಂಭಿಸಲಾಯಿತು.

ಆದರೆ, ನ್ಯಾಯಾಧೀಶರು ನ್ಯಾಯಾಲಯದ ಕಮಿಷನರ್‌ಗೆ ಸಹಾಯ ಮಾಡಲು ಇನ್ನೂ ಇಬ್ಬರು ವಕೀಲರನ್ನು ನೇಮಿಸಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು. ಮಾತ್ರವಲ್ಲದೆ ಸಮೀಕ್ಷೆಗಾಗಿ ಸಂಕೀರ್ಣದ ಕೆಲವು ಪ್ರದೇಶಗಳಿಗೆ ಪ್ರವೇಶಿಸಲು ಕೀಗಳು ಲಭ್ಯವಿಲ್ಲದಿದ್ದರೆ ಬೀಗಗಳನ್ನು ಒಡೆಯಬೇಕು ಎಂದು ಜಿಲ್ಲಾ ನ್ಯಾಯಾಲಯ ಹೇಳಿತ್ತು. ಸಮೀಕ್ಷೆಗೆ ಅವಕಾಶ ನೀಡದಿದ್ದಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿತ್ತು.

ಕಳೆದ ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ಯಥಾಸ್ಥಿತಿಯ ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿತ್ತು. ಆದಾಗ್ಯೂ, ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ವಿರುದ್ಧ ಮುಸ್ಲಿಂ ಪಕ್ಷದ ಮನವಿಯನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು. ನ್ಯಾಯಾಲಯದಿಂದ ನೇಮಿಸಲ್ಪಟ್ಟ ಮೂವರು ವಕೀಲ ಕಮಿಷನರ್‌ಗಳು, ಎರಡು ಕಡೆಯಿಂದ ತಲಾ ಐವರು ವಕೀಲರು ಮತ್ತು ವಿಡಿಯೊಗ್ರಫಿ ತಂಡದ ಜೊತೆಗೆ ಸಹಾಯಕರು ಸಮೀಕ್ಷೆ ನಡೆಸಿದ್ದಾರೆ.

ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಸೀದಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ವಿವಾದವಿದೆ. 400 ವರ್ಷಗಳ ಹಿಂದೆ ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು, ಅಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಮಾಡುತ್ತಾರೆ ಎಂದು ಹಿಂದೂ ಕಡೆಯವರು ಹೇಳುತ್ತಾರೆ. ಜ್ಞಾನವಾಪಿ ಮಸೀದಿಯನ್ನು ಅಂಜುಮನ್-ಎ-ಇಂತಜಾಮಿಯಾ ಸಮಿತಿಯು ನಡೆಸುತ್ತಿದೆ. 1991ರಲ್ಲಿ ವಾರಣಾಸಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಶ್ವೇಶ್ವರ್ ಭಗವಾನ್ ಪರವಾಗಿ ಅರ್ಜಿ ಸಲ್ಲಿಸಲಾಗಿದ್ದು, ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ವಿಶ್ವನಾಥ ದೇವರ ದೇಗುಲವಿದ್ದು, ಶೃಂಗಾರ್ ಗೌರಿಯನ್ನು ಪೂಜಿಸಲಾಗುತ್ತಿತ್ತು. ಜ್ಞಾನವಾಪಿಸಂಕೀರ್ಣವನ್ನು ಮುಸ್ಲಿಂ ಕಡೆಯಿಂದ ತೆರವು ಮಾಡಿ ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ವಾರಣಾಸಿಯ ಜ್ಞಾನವಾಪಿ ಕಾಂಪ್ಲೆಕ್ಸ್‌ನಲ್ಲಿರುವ ಬಾಬಾ ವಿಶ್ವನಾಥನ ದೇವಸ್ಥಾನ ಮತ್ತು ಮಸೀದಿಗೆ ಸಂಬಂಧಿಸಿದ ವಿವಾದ ಇದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap