ದಾವಣಗೆರೆ:
ನಗರದ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೊಡಮಾಡುವ ‘ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಪ್ರೊತ್ಸಾಹನ್’ ಪುರಸ್ಕಾರ ದೊರೆತಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ್ ತಿಳಿಸಿದರು.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರಮಟ್ಟದ ಪ್ರಶಸ್ತಿ ಬರಲು ಜಿಲ್ಲೆಯ ರೈತರು ಹಾಗೂ ತರಳಬಾಳು ಜಗದ್ಗುರುಗಳ ಶ್ರಮವೇ ಕಾರಣವಾಗಿದೆ. ದೆಹಲಿಯ ಐಸಿಎಆರ್ ಕೇಂದ್ರದಲ್ಲಿ ಜು.16ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಪ್ರಶಸ್ತಿ ಪ್ರದಾನವಾಗಲಿದೆ ಎಂದು ಹೇಳಿದರು.
2005ರಲ್ಲಿ ಆರಂಭವಾದ ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಅನೇಕ ಪ್ರಥಮಗಳಿಗೆ ನಾಂದಿ ಹಾಡಿದೆ. ರಾಷ್ಟ್ರಮಟ್ಟದ ನೈಸರ್ಗಿಕ ಕೃಷಿಕರ ಸಮ್ಮೇಳನ, ತೆಂಗು ಉಳಿಸಿ ಆಂದೋಲನ, ಲದ್ದಿಹುಳು ನಿರ್ವಹಣೆ, ಶನಿವಾರದ ಸಾವಯವ ಸಂತೆ, ತಾರಸಿ ತೋಟ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದು, ಕೇಂದ್ರವು ಜಿಲ್ಲೆಯ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹರಿಸಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ ಎಂದು ಮಾಹಿತಿ ನೀಡಿದರು.
ರೈತರಿಗೆ ಹೊಸ ತಳಿಗಳನ್ನು ಪರಿಚಯಿಸಿದೆ. ಜಿಲ್ಲೆಯ 400 ಯುವಕರಿಗೆ ತೆಂಗಿನ ಮರ ಹತ್ತುವ ತರಬೇತಿ ನೀಡಲಾಗಿದೆ. ಜೈವಿಕ ಇಂಧನ ಪ್ರತ್ಯಕ್ಷಿಕಾ ಘಟಕ ಸ್ಥಾಪಿಸಿ ಜೈವಿಕ ಇಂಧನ ತಯಾರಿಸಲಾಗುತ್ತಿದೆ. ಜಿಲ್ಲೆಯ 4 ರೈತರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ, 6 ರೈತ ಉತ್ಪಾದಕ ಕಂಪನಿಗಳೊಂದಿಗೆ ಕೈಜೋಡಿಸಿ ತಾಂತ್ರಿಕತೆ, ಮಾರ್ಗದರ್ಶನ ನೀಡುತ್ತಿದೆ. ಅಲ್ಲದೇ, ದೇಸಿ ತಳಿಗಳ ಸಂರಕ್ಷಣೆಯಲ್ಲಿ ತೊಡಗಿದ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಸಮಗ್ರ ಹೈನುಗಾರಿಕೆ ಕುರಿತು ಉಪಯುಕ್ತ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಮಣ್ಣು, ನೀರು ಪರೀಕ್ಷಾ ಕೇಂದ್ರವು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು.ಸುದ್ದಿಗೋಷ್ಟಿಯಲ್ಲಿ ಕೇಂದ್ರದ ಡಾ.ಬಸವನಗೌಡ, ಬಿ.ಒ.ಮಲ್ಲಕಾರ್ಜುನ, ರಘುರಾಜ್, ಎಸ್.ಜಿ.ಮಲ್ಲಿಕಾರ್ಜುನ, ಸಂತೋಷ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
