ಚಳ್ಳಕೆರೆ
ಕಳೆದ ಸುಮಾರು 10 ವರ್ಷಗಳಿಂದ ನಿರಂತರವಾಗಿ ಈ ಭಾಗದಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದೆ ರೈತರು ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗಿಲ್ಲ. ಪ್ರತಿವರ್ಷ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ ಸರ್ಕಾರದಿಂದ ಯಾವುದೇ ರೀತಿಯ ಭರವಸೆ ದೊರಕದೆ ಆತ್ಮಹತ್ಯೆಗೆ ಶರಣಾಗುತ್ತಿದ್ಧಾನೆ. ಕಳೆದ ಎರಡು ವರ್ಷಗಳಲ್ಲಿ ತಾಲ್ಲೂಕಿನ ಸುಮಾರು 10ಕ್ಕೂ ಹೆಚ್ಚು ರೈತರು ಸಾಲವನ್ನು ತೀರಿಸಲಾಗದೆ ನೇಣು, ವಿಷ ಕುಡಿದು ಮೃತಪಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ನೇರವಾಗಿ ಭೇಟಿ ಮಾಡಿ ಮನವಿ ಮಾಡಿದ್ದರೂ ಸಹ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳನ್ನು ಶಾಶ್ವತ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪ್ಯಾಕೇಜ್‍ನಡಿ ರೈತರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೌನವಾಗಿರುವುದು ವಿಷಾದ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆರೋಪಿಸಿದ್ದಾರೆ.
ಅವರು, ಬುಧವಾರ ಪತ್ರಿಕೆಗೆ ಮಾಹಿತಿ ನೀಡಿ, ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ರೈತರು ತಮ್ಮ ಜಮೀನನಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆ ಒಣಗುತ್ತಿದ್ದು, ಈ ವರ್ಷವೂ ಸಹ ರೈತ ಮತ್ತೆ ಸಾಲದ ಸುಳಿಗೆ ಸಿಲುಕುತ್ತಿದ್ದಾನೆ. ಮತ್ತೆ ರೈತರ ಆತ್ಮಹತ್ಯೆಗಳು ನಡೆಯವ ಮುನ್ಸೂಚನೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜುಲೈ 31ರಂದು ಬೆಂಗಳೂರಿನ ಅವರ ಗೃಹ ಕಚೇರಿಗೆ ತೆರಳಿ ಮನವಿ ನೀಡಿದ್ದೆ. ಆದರೆ, ರೈತರ ಮನವಿಯನ್ನು ಪುರಸ್ಕರಿಸಿ ಅವರ ಸಮಸ್ಯೆಗಳನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿ ವಿಫಲವಾಗಿದ್ದಾರೆ. ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರು ಸಹ ರೈತರಿಗೆ ಸಹಾಯ ಮಾಡುವ ಇಚ್ಚೆ ಇದ್ದಲ್ಲಿ ಪ್ರಸ್ತುತ ರೈತರ ದಾರುಣ ಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಅಂಕಿ ಅಂಶ ಪಡೆಯಬೇಕು. ಪ್ರಸ್ತುತ ಭೀಕರ ಬರಗಾಲದ ಪರಿಸ್ಥಿತಿಯ ಬಗ್ಗೆ ವಿವಿಧ ಇಲಾಖೆಗಳ ಹಾಗೂ ರೈತ ಮುಖಂಡ ಸಭೆ ಕರೆಯಬೇಕು. ಶಾಸಕರು ಹೆಚ್ಚು ಮುತುವರ್ಜಿ ವಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎರಡೂ ತಾಲ್ಲೂಕುಗಳನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು. ರೈತರು ವಿವಿಧ ಕಂಪನಿಗಳ ಮೂಲಕ ಬೆಳೆ ವಿಮೆ ಮಾಡಿಸಿದ್ದು, ಅ ಹಣವೂ ಸಹ ರೈತರಿಗೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ಅಧಿಕಾರಿಗಳ ಸಭೆ ಕರೆದು ಕೂಲಂಕುಷವಾಗಿ ಚರ್ಚೆ ನಡೆಸುವಂತೆ ಕೆ.ಪಿ.ಭೂತಯ್ಯ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಬೊಮ್ಮಸಮುದ್ರ ಗ್ರಾಮದ ಜಮೀನಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರೈತ ತನ್ನ ಜಮೀನನಲ್ಲಿದ್ದ ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗುತ್ತಿರುವ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ. ಇದೇ ರೀತಿ ತಾಲ್ಲೂಕಿನಾದ್ಯಂತ ಒಟ್ಟು 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಸಂಪೂರ್ಣವಾಗಿ ವಿಫಲವಾಗುವ ಸೂಚನೆ ಕಂಡುಬರುತ್ತಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು ಎರಡೂ ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಅವರು ಒತ್ತಾಯಿಸಿದ್ಧಾರೆ.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿದ್ದು, ಸರ್ಕಾರ ನೀಡಿದ ಎಲ್ಲಾ ಭರವಸೆಗಳು ವಿಫಲವಾಗಿವೆ. ಈ ಭಾಗದ ಸಮಸ್ತ ರೈತರಿಗೆ ನೀರಾವರಿ ಯೋಜನೆ ಕಲ್ಪಿಸಿದಲ್ಲಿ ಮಾತ್ರ ರೈತರ ಬದುಕು ಹಸನಾಗುತ್ತದೆ ಎಂದರು. ಕೃಷಿ ಇಲಾಖೆ ಅಧಿಕಾರಿಗಳು ಪರ್ಯಾಯ ಬೆಳೆಯ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಿದ್ದರೂ ಪ್ರಯೋಜನವಾಗಿಲ್ಲ. ಬಹುತೇಕ ಶೇಂಗಾ ಬೆಳೆಯೂ ಸೇರಿದಂತೆ ಮೆಕ್ಕೆಜೋಳ ಹಾಗೂ ಇನ್ನಿತರೆ ಬೆಳೆಗೂ ಸಹ ಮಳೆ ಇಲ್ಲದೆ ಒಣಗಿವೆ. ಅಲ್ಪಸ್ವಲ್ಪ ಉಳಿದ ಬೆಳೆಗೂ ಕೆಂಪು ತಲೆಯ ಕಂಬಳಿ, ಸೈನಿಕ ಹುಳುಗಳು ವ್ಯಾಪಿಸಿರುವುದು ರೈತರನ್ನು ಚಿಂತೆಗೀಡುಮಾಡಿದೆ.