ಬೆಂಗಳೂರು:
ಮೊದಲು ನಾನು ಕೇಳಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರ ಕೊಡಿ. ನಿಮ್ಮ ಉದ್ದರಿ ಉಪದೇಶ ನನಗೆ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ತಮ್ಮ ಹಾಗೂ ತಮ್ಮ ತಂದೆಯವರ ಬಗ್ಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
“ಸುಳ್ಳುರಾಮಯ್ಯನಿಗೆ ನಾನು ಹೇಳುವುದು ಇಷ್ಟೇ, ನಾನು ಕೇಳಿರುವ ನಾಲ್ಕು ಪ್ರಶ್ನೆಗೆ ಉತ್ತರ ಕೊಡಿ. ಕಾಂಗ್ರೆಸ್ ಪಕ್ಷವನ್ನು ಜನರು ಇಡೀ ದೇಶದಲ್ಲಿ ತಿರಸ್ಕಾರ ಮಾಡಿ ಆಗಿದೆ. ಕರ್ನಾಟಕ ಒಂದರಲ್ಲಿ ಅದು ಏದುಸಿರು ಬಿಡುತ್ತಿದೆ. ಇವರ ಪಕ್ಷದವರೇ ಡಿ.ಜಿ.ಹಳ್ಳಿ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ಕೂಡ ಬೆಂಕಿ ಹಚ್ಚಿದರು. ಇವರು ಈ ದೇಶದಲ್ಲಿ ಜಾತ್ಯತೀತತೆ ಉಳಿಸುತ್ತಾರಾ?” ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು. ಸುಳ್ಳುರಾಮಯ್ಯನನ್ನು ಪದೇ ಪದೆ ಕೇಳಿದ್ದೇನೆ. 2009ರಲ್ಲಿ ಆಪರೇಷನ್ ಕಮಲದ ಕಾರಣಕ್ಕೆ ನಡೆದ ಉಪ ಚುನಾವಣೆಯಲ್ಲಿ ಅಂದಿನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜಕೀಯವಾಗಿ ಮುಗಿಸಲು ಎಷ್ಟು ಹಣ ಸಂದಾಯ ಮಾಡಿಸಿಕೊಂಡಿರಿ. ಕಳೆದ ಹತ್ತು ವರ್ಷದಲ್ಲಿ ಐವತ್ತು ಸಲ ಈ ಪ್ರಶ್ನೆ ಕೇಳಿದ್ದೀನಿ. ಇನ್ನೂ ಉತ್ತರ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ನೇರ ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
