ನೂತನ ಸೇತುವೆ ಲೋಕಾರ್ಪಣೆ..!!

ಹೊನ್ನಾಳಿ:

      ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಮಾದೇನಹಳ್ಳಿ ಗ್ರಾಮದ ಹೊರವಲಯದ ಹಳ್ಳಕ್ಕೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸೇತುವೆಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

       ತಾಲ್ಲೂಕಿನ ಮಾರಿಕೊಪ್ಪ, ಹತ್ತೂರು, ಚಿಕ್ಕೆರೇಹಳ್ಳಿ, ದೊಡ್ಡೆರೇಹಳ್ಳಿ, ಮಾದೇನಹಳ್ಳಿ, ಸೊರಟೂರು ಮತ್ತಿತರ ಗ್ರಾಮಗಳ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು 3 ಕೋಟಿ ರೂ.ಗಳಷ್ಟು ಹಣವನ್ನು ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ.

      ಸಾರ್ವಜನಿಕರ ಜ್ವಲಂತ ಸಮಸ್ಯೆಗಳ ಪರಿಹಾರದ ಉದ್ದೇಶದಿಂದ ಕ್ಷೇತ್ರದ ಪ್ರತಿ ಗ್ರಾಮಗಳ ಸಮಸ್ಯೆಗಳನ್ನು ಪಟ್ಟಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳುತ್ತೇನೆ. ಕಳೆದ 6 ತಿಂಗಳುಗಳಿಂದ ದಿನ ನಿತ್ಯ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಜನರ ಕಷ್ಟ, ಸುಖ ಆಲಿಸುತ್ತಿದ್ದು, ಪ್ರವಾಸದ ಸಂದರ್ಭದಲ್ಲಿ ತಮ್ಮ ಗ್ರಾಮಗಳ ಅಭಿವೃದ್ಧಿಗಾಗಿ ಸಾರ್ವಜನಿಕರು ಹಲವಾರು ಬೇಡಿಕೆಗಳನ್ನು ಮಂಡಿಸುತ್ತಿದ್ದಾರೆ. ಪ್ರತಿ ಗ್ರಾಮಗಳಿಗೆ ಅವಶ್ಯವಿರುವ ರಸ್ತೆ, ಕುಡಿಯುವ ನೀರು ಪೂರೈಕೆಗೆ ಈಗಾಗಲೇ ಕ್ರಮ ಕೈಗೊಂಡಿದ್ದೇನೆ ಎಂದು ವಿವರಿಸಿದರು.

       ಜಿಪಂ ಸದಸ್ಯ ಎಂ.ಆರ್. ಮಹೇಶ್, ತಾಪಂ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ಸದಸ್ಯೆ ಗಿರಿಜಮ್ಮ, ಕತ್ತಿಗೆ ಗ್ರಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಮಮತ, ಸದಸ್ಯರಾದ ಮಾದೇನಹಳ್ಳಿ ಕೆ.ಇ. ನಾಗರಾಜ್, ಕುಬೇರಣ್ಣ, ಶೇಖರಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.ತಾಲೂಕಿನ ಮಾರಿಕೊಪ್ಪ, ಹತ್ತೂರು, ಚಿಕ್ಕೆರೇಹಳ್ಳಿ, ದೊಡ್ಡೆರೇಹಳ್ಳಿ, ಮಾದೇನಹಳ್ಳಿ, ಸೊರಟೂರು ಗ್ರಾಮಗಳಲ್ಲಿ ಸೇತುವೆ, ಕುಡಿಯುವ ನೀರು, ಕಾಂಕೀಟ್ ರಸ್ತೆ ಮುಂತಾದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link