ಬಿಬಿಎಂಪಿ ಚುನಾವಣೆ : ಆಗಸ್ಟ್ 25 ರಂದು ಮತದಾರರ ಕರಡು ಪಟ್ಟಿ ಪ್ರಕಟ 

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ರಂಗ ಸಜ್ಜಾಗಿದ್ದು, ಆಗಸ್ಟ್ 25 ರಂದು ಮತದಾರರ ಪಟ್ಟಿಯ ಕರಡು ಪಟ್ಟಿ ಪ್ರಕಟವಾಗಲಿದೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತದಾರರ ಪಟ್ಟಿಯ ಕರಡು ಪ್ರಕಟಗೊಂಡ ಕೂಡಲೇ ಪಾಲಿಕೆಯ ಅಂತರ್ಜಾಲ ತಾಣದ ಜೊತೆಗೆ ನೋಂದಾಯಿತ ರಾಜಕೀಯ ಪಕ್ಷಗಳ ಕಚೇರಿಗೆ ಹಾಗೂ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ನೀಡುವಂತೆ ಅವರು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಾರಿಯ ಚುನಾವಣೆಯಲ್ಲಿ ವಾರ್ಡ್ ಗಳ ಸಂಖ್ಯೆ 198 ರಿಂದ 243 ಕ್ಕೆ ಏರಿಕೆಯಾಗಿದೆ.  ವಾರ್ಡ್ ಮರು ವಿಂಗಡನೆಯಾಗಿರುವ ಹಿನ್ನೆಲೆಯಲ್ಲಿ ಮೊದಲು ಮತಗಟ್ಟೆಗಳ ಪರಿಶೀಲನೆ ಆಗಬೇಕಿದೆ. ವಾರ್ಡ್ ಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ಗುರುತಿಸಿ ನೇಮಕ ಮಾಡಲು ಪಟ್ಟಿ ಸಿದ್ಧಗೊಳಿಸಬೇಕಿದೆ ಎಂದು ಬಸವರಾಜು ಅವರು ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿ ಬಾರಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಮತದಾನದ ಪ್ರಮಾಣ ಹೆಚ್ಚಿಸಲು ವ್ಯಾಪಕ ಪ್ರಚಾರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಆದರೆ, ಈ ನಿಟ್ಟಿನಲ್ಲಿ ವೆಚ್ಚ ಮಾಡುವಲ್ಲಿ ಮಿತವ್ಯಯ ಸಾಧಿಸುವುದು ಮುಖ್ಯ ಹಾಗೂ ಸೂಕ್ತ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರು, ಎಲ್ಲಾ ಎಂಟೂ ವಲಯಗಳ‌  ಜಂಟಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಪ್ರತಿನಿಧಿ, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಹೊನ್ನಾಂಬ ಅವರೂ ಈ ಸಭೆಯಲ್ಲಿ ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap