ಬ್ಯಾಂಕುಗಳ ವಿಲೀನ ವಿರೋಧಿಸಿ ಮತ ಪ್ರದರ್ಶನ

ದಾವಣಗೆರೆ:

     ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ, ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ನೇತೃತ್ವದಲ್ಲಿ ಬ್ಯಾಂಕ್ ಉದ್ಯೋಗಿಗಳು ಮಂಗಳವಾರ ನಗರದಲ್ಲಿ ಮತ ಪ್ರದರ್ಶನ ನಡೆಸುವ ಮೂಲಕ ಪ್ರತಿಭಟಿಸಿದರು.

     ನಗರದ ಪಿಬಿ ರಸ್ತೆಯಲ್ಲಿರುವ ವಿಜಯಾ ಬ್ಯಾಂಕ್ ಶಾಖೆ ಎದುರು ಜಮಾಯಿಸಿದ ಬ್ಯಾಂಕ್ ಉದ್ಯೋಗಿಗಳು ಬ್ಯಾಂಕುಗಳ ವಿಲೀನ ವಿರೋಧಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಜಿಲ್ಲಾ ಸಂಚಾಲಕ ಕೆ. ರಾಘವೇಂದ್ರ ನಾಯರಿ, ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮುಂಚೆ ಇಂದಲೂ ಬ್ಯಾಂಕ್ ವಿಲೀನಿಕರಣಕ್ಕೆ ಬ್ಯಾಂಕ್ ಸಂಘಟನೆಗಳ ವಿರೋಧವಿದೆ. ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕು ಮತ್ತು ಇನ್ನಷ್ಟು ವಿಸ್ತಾರಗೊಳಿಸಬೇಕೆಂಬುದು ನಮ್ಮ ಪ್ರಬಲ ಬೇಡಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸಂಕುಚಿತಗೊಳಿಸಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

      ಇತ್ತೀಚಿಗೆ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಜೊತೆ 5 ಸಹವರ್ತಿ ಬ್ಯಾಂಕುಗಳನ್ನು ವಿಲೀನಗೊಳಿಸಿ ಏಷ್ಯಾದಲ್ಲಿಯೇ ದೊಡ್ಡ ಬ್ಯಾಂಕು ಎಂದು ಘೋಷಿಸಿಕೊಂಡಿದ್ದರೂ ಮಾರ್ಚ್ 2018ರ ಅಂತ್ಯದಲ್ಲಿ 2,25,000 ಕೋಟಿಗಳಷ್ಟು ನಷ್ಟ ತೋರಿಸಲಾಗಿದೆ. ಆದರೆ, 2017ರ ಮಾರ್ಚ್ ಅಂತ್ಯದಲ್ಲಿ 1,77,000 ಕೋಟಿ ರೂ. ಮಾತ್ರ ನಷ್ಟ ಅನುಭವಿಸಿತ್ತು. ನಮ್ಮ ದೇಶಕ್ಕೆ ದೊಡ್ಡ ಬ್ಯಾಂಕ್‍ಗಳಿಗಿಂತ ಭದ್ರವಾದ ಬುನಾದಿಯಿರುವ ಬ್ಯಾಂಕ್‍ಗಳ ಅವಶ್ಯಕತೆ ಇದೆ ಎನ್ನುವುದನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ. “ದೊಡ್ಡ ಬ್ಯಾಂಕ್‍ಗಳು ಹೆಚ್ಚು ಅಪಾಯಕಾರಿಯಾಗಿದೆ ಎಂಬುದನ್ನು ಮೊದಲು ಕೇಂದ್ರ ಸರ್ಕಾರ ಅರಿಯಬೇಕೆಂದು ಒತ್ತಾಯಿಸಿದರು.

      ಇಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 8,95,600 ಕೋಟಿ ರೂಪಾಯಿಗಳಷ್ಟು ವಸೂಲಾಗದ ಸಾಲ ಎಂಬುದಾಗಿ ದಾಖಲಾಗಿದೆ. ಆದರೆ, ಈ ವಸೂಲಾಗದ ಸಾಲವನ್ನು ವಸೂಲಿ ಮಾಡಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾದ ಸರ್ಕಾರ ಅದರ ಬಗ್ಗೆ ಅಸಕ್ತಿ ವಹಿಸದೇ ಅನಗತ್ಯವಾಗಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಇಂತಹ ಅವೈಜ್ಞಾನಿಕ ಕ್ರಮಗಳಿಂದ ಮುಂದೊಂದು ದಿನ ಇಡೀ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯೇ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

       ಕರ್ನಾಟಕ ರಾಜ್ಯ ಬೃಹತ್ ರಾಷ್ಟ್ರೀಕೃತ ಬ್ಯಾಂಕುಗಳ ಹೆಬ್ಬಾಗಿಲಾಗಿದ್ದು, ಅದರಲ್ಲಿಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಈ ದೇಶದ ಬೃಹತ್ ಬ್ಯಾಂಕುಗಳ ತವರೂರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ. ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್ ಈ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳನ್ನು ಈ ಎರಡೂ ಜಿಲ್ಲೆಗಳು ಈ ದೇಶಕ್ಕೆ ಕೊಡುಗೆಯಾಗಿ ನೀಡಿವೆ. ಜೊತೆಗೆ ಕರ್ನಾಟಕ ಬ್ಯಾಂಕ್ ನಂತಹ ಬೃಹತ್ ಖಾಸಗಿ ಬ್ಯಾಂಕ್ ಕೂಡಾ ಈ ಜಿಲ್ಲೆಗಳ ಕೊಡುಗೆ.

      ಈ ಎಲ್ಲಾ ಬ್ಯಾಂಕುಗಳೊಂದಿಗೆ ಕರ್ನಾಟಕ ರಾಜ್ಯದ ಜನತೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಈ ಬ್ಯಾಂಕುಗಳು ಅಲ್ಲಿಯ ಜನರ ಜೀವನಾಡಿಯಾಗಿವೆ. ಇಂತಹ ಬ್ಯಾಂಕುಗಳನ್ನು ಮತ್ತೊಂದು ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಕ್ರಮ ಜನ ವಿರೋಧಿ ಮತ್ತು ದೇಶ ವಿರೋಧಿಯಾಗಿದೆ ಎಂದು ಕಿಡಿಕಾರಿದರು.

     ತನ್ನದೇಯಾದ ವಿಶಿಷ್ಟ ಪರಂಪರೆಯುಳ್ಳ ಹಾಗೂ ಕೋಟ್ಯಾಂತರ ಉತ್ತಮ ಗ್ರಾಹಕರನ್ನು ಹೊಂದಿರುವ ಲಾಭದಾಯಕ ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣವೇ ಈ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

     ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತ ನೌಕರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಆರ್. ಮೇಲಗಿರಿ ಮಾತನಾಡಿ, ಬ್ಯಾಂಕುಗಳ ವಿಲೀನಿಕರಣದಿಂದ ಕಾರ್ಪೋರೇಟ್ ವಲಯಗಳಿಗೆ ಬೃಹತ್ ಉದ್ದಿಮೆದಾರರಿಗೆ ಅನುಕೂಲವಾಗುವುದೇ ಹೊರತು, ಈ ದೇಶದ ಕೃಷಿಕರಿಗಾಗಲೀ, ಜನಸಾಮಾನ್ಯರಿಗಾಗಲಿ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ವಿಜಯಾ ಬ್ಯಾಂಕ್‍ನ್ನು ಬೇರೆ ಬ್ಯಾಂಕ್‍ಗಳೊಂದಿಗೆ ವಿಲೀನಗೊಳಿಸಬಾರದು ಎಂದು ಒತ್ತಾಯಿಸಿದರು.

     ಪ್ರತಿಭಟನೆಯಲ್ಲಿ ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ಅಧ್ಯಕ್ಷ ವಿ.ನಂಜುಂಡೇಶ್ವರ, ಎಸ್.ಟಿ.ಶಾಂತಗಂಗಾಧರ್, ಅಜಿತ್‍ಕುಮಾರ್ ನ್ಯಾಮತಿ, ವಿ.ಶಂಭುಲಿಂಗಪ್ಪ, ಎನ್‍ಒಬಿಡಬ್ಲ್ಯುನ ಪ್ರಶಾಂತ್, ಎಐಬಿಒಸಿಯ ಹರೀಶ್ ಎಂ.ಪೂಜಾರ್, ನವೀನ್‍ಕುಮಾರ್, ಪ್ರಶಾಂತ್.ಎಸ್., ಭಾರತಿ ಸಂಜೀವ್, ತಿಪ್ಪೇಸ್ವಾಮಿ ಹೆಚ್.ಎಸ್., ಕೆ.ವಿಶ್ವನಾಥ್ ಬಿಲ್ಲವ, ಬಿ.ಆನಂದಮೂರ್ತಿ, ಎನ್.ವೀರಪ್ಪ, ಪರಶುರಾಮ, ನಾಗವೇಣಿ ನರೇಂದ್ರಕುಮಾರ್, ಪಿ.ಆರ್.ಪುರುಷೋತ್ತಮ್, ರಮೇಶ್.ಎಂ, ನಾಗರಾಜ.ಕೆ, ನಾಗರತ್ನ, ವಿಜಯ ಬ್ಯಾಂಕ್ ಆನಂದಮೂರ್ತಿ, ಸುನಿಲ್ ಮ್ಯಾಗೇರಿ, ಸಿ.ಕಾವೇರಪ್ಪ, ಹರೀಶ್ ಐತಾಳ್, ಎಂ.ಎಸ್.ವಾಗೀಶ್, ವಿ.ಶಂಭುಲಿಂಗಪ್ಪ, ರವಿಶಂಕರ್.ಕೆ, ಸುರೇಶ್ ಚೌಹಾಣ್, ವೇಣುಗೋಪಾಲ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap