ಹಾಸನ :
ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಶವ ಬೇಲೂರಿನ ಲಕ್ಕುಂದ ಕಾಫಿ ಎಸ್ಟೇಟ್ ನಲ್ಲಿ ಪತ್ತೆಯಾಗಿದೆ.
ಕಾಂಗ್ರೇಸ್ ನ ಸಲ್ಡಾನ (75) ಅವರ ಶವ ಸೋಮವಾರ ಬೆಳಗ್ಗೆ ಸಿಕ್ಕಿದೆ. ನಿನ್ನೆ ಬೆಳಗ್ಗೆ ಕಾಫಿ ತೋಟಕ್ಕೆ ಹೋಗಿದ್ದ ಅವರು, ನಂತರ ನಾಪತ್ತೆಯಾಗಿದ್ದರು. ಸೋಮವಾರ ಬೆಳಗ್ಗೆ ಕಾಫಿ ಅವರು ತೋಟದಲ್ಲಿರುವ ಕೃಷಿ ಹೊಂಡದ ಬಳಿ ಅವರ ಟೋಪಿ ಹಾಗೂ ಚಪ್ಪಲಿ ಸಿಕ್ಕಿದ್ದರಿಂದ ಅನುಮಾನಗೊಂಡು ಶೋಧಕಾರ್ಯ ನಡೆಸಿದಾಗ ಕೃಷಿ ಹೊಂಡದಲ್ಲಿ ಅವರ ಮೃತದೇಹ ಸಿಕ್ಕಿದೆ.
ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಆದರೆ ಸ್ಥಳೀಯರು ಸಲ್ಡಾನರವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅವರನ್ನು ಯಾರಾದರೂ ಕೊಲೆ ಮಾಡಿ ಕೃಷಿ ಹೊಂಡಕ್ಕೆ ಹಾಕಿರಬಹುದೆಂದು ಹೇಳಿಕೊಳ್ಳುತ್ತಿದ್ದಾರೆ.
ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಬೇಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
